ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ವೈದ್ಯರು ಹೊಸತನ ಅಳವಡಿಸಿಕೊಳ್ಳಿ

Mainashree
Updated On : 18 May 2014, 10:06 am

ಹುಬ್ಬಳ್ಳಿ: ವೈದ್ಯಕೀಯ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಹೊಸ ಆವಿಷ್ಕಾರಗಳಾಗುತ್ತಿವೆ. ಹೀಗಾಗಿ ಯಾವುದೇ ವೈದ್ಯರನ್ನು ಎಲ್ಲ ಬಲ್ಲವರು ಎನ್ನಲಾಗದು. ಹೀಗಾಗಿ ವೈದ್ಯರು ಹೊಸತನ ಅಳವಡಿಸಿಕೊಳ್ಳುವ ಮೂಲಕ ಅಪಡೇಟ್ ಆಗುತ್ತಿರಬೇಕು ಎಂದು ಭಾರತೀಯ ವೈದ್ಯರ ಸಂಘಟನೆಯ (ಎಪಿಐ) ರಾಜ್ಯಾಧ್ಯಕ್ಷ ಡಾ. ಬ್ರಿಗೇಡಿಯರ್ ಎ.ಎಸ್. ಕಸ್ತೂರಿ ಅಭಿಪ್ರಾಯಪಟ್ಟರು.
ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಭಾರತೀಯ ವೈದ್ಯರ ಸಂಘಟನೆಯ 32ನೇ ರಾಜ್ಯ ಸಮಾವೇಶ (ಕಾಪಿಕಾನ್) ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೈದ್ಯರು ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳಬೇಕು. ಗೆಳೆಯನಾಗಿ, ತತ್ವಜ್ಞಾನಿಯಾಗಿ ರೋಗಿಗೆ ಮಾರ್ಗದರ್ಶನ ನೀಡಬೇಕು. ಹಿಂದೆ ವೈದ್ಯರಿಗೆ ದೇವರ ನಂತರದ ಸ್ಥಾನ ನೀಡಲಾಗಿತ್ತು. ಆದರೆ ಅದನ್ನೀಗ ಉಳಿಸಿಕೊಂಡಿಲ್ಲದಿರುವುದು ಖೇದಕರ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ. ಮಹಾಬಲೇಶ್ವರ ಮಯ್ಯ, ವೈದ್ಯರ ಮೇಲೆ ಹಾಗೂ ಆಸ್ಪತ್ರೆಗಳ ಮೇಲೆ ನಡೆಯುತ್ತಿರುವ ದಾಳಿಗೆ ವೈದ್ಯರೂ ಕಾರಣರಾಗಿದ್ದಾರೆ. ವೈದ್ಯರು ನಿರ್ಲಕ್ಷ್ಯ ತೋರುವುದು, ರೋಗಿಗಳಿಂಗ ಹೆಚ್ಚಿನ ಹಣ ಕೀಳುವುದು ಸೇರಿದಂತೆ ಜನರಿಗೆ ಆರೋಗ್ಯದ ಬಗ್ಗೆ ಜ್ಞಾನ ಇಲ್ಲದಿರುವುದೂ ಹಲ್ಲೆಗೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ವೈದ್ಯರು ಹಾಗೂ ಜನರು ಬದಲಾವಣೆ ಕಂಡುಕೊಳ್ಳಬೇಕಿದೆ ಎಂದರು.
ಧಾರವಾಡದ ಎಸ್‌ಡಿಎಂ ಆಸ್ಪತ್ರೆ ಡೀನ್ ಡಾ. ನಿರಂಜನಕುಮಾರಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ಕಿಮ್ಸ್ ನಿರ್ದೇಶಕಿ ಡಾ. ವಸಂತಾ ಕಾಮತ, ವೈಜ್ಞಾನಿಕ ಸಮಿತಿ ಅಧ್ಯಕ್ಷ ಡಾ. ಡಿ.ಎಂ. ಕಬಾಡೆ ಮಾತನಾಡಿದರು. ಹಿರಿಯ ವೈದ್ಯರಾದ ಡಾ. ಕೇಶವ ಬೆಂಗಳೂರು ಮತ್ತು ಡಾ. ಸಿ.ಜಿ. ಹೊಸಕಟ್ಟಿ ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾನ್ವಿತ ಡಾ. ಎಂ.ಎನ್. ಲಕ್ಷ್ಮಿಕಾಂತ ರೆಡ್ಡಿ, ಡಾ. ಅಭಿನಯ ವೆಂಕಟೇಶ್ವರನ್ ಮತ್ತು ಡಾ. ಅಭಿರಾ ಅವರನ್ನ್ನು ಚಿನ್ನದ ಪದಕ ನೀಡಿ ಗೌರವಿಸಲಾಯಿತು.
ಡಾ. ಆರ್.ಬಿ. ಘಂಟಿ, ಡಾ. ಕೆ. ರವಿ, ಡಾ. ಜಯಚಂದ್ರ, ಡಾ. ಬಸವನಗೌಡ ವೇದಿಕೆಯಲ್ಲಿದ್ದರು. ಸಮಾವೇಶದ ಸಂಘಟನಾ ಅಧ್ಯಕ್ಷ ಡಾ. ಜಿ.ಬಿ. ಸತ್ತೂರ ಸ್ವಾಗತಿಸಿ, ಪರಿಚಯಿಸಿದರು. ಸಂಘಟನಾ ಕಾರ್ಯದರ್ಶಿ ಡಾ. ಆರ್.ಜಿ. ಬಬ್ರುವಾಡ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement