ಸಂಕನೂರಗೆ ಬಿಜೆಪಿ ಟಿಕೆಟ್
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮೇ 18
ಲೋಕಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಬಿಜೆಪಿ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಮತ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಿಸಿದೆ. ಅಳೆದು ತೂಗಿ ಗದಗ ಮೂಲದ ಪ್ರೊ ಎಸ್.ವಿ. ಸಂಕನೂರ ಅವರ ಹೆಸರನ್ನು ಪಕ್ಷ ಭಾನುವಾರ ಪ್ರಕಟಿಸಿದೆ.
ಪಶ್ಚಿಮ ಪದವೀಧರ ಹಾಗೂ ಇತರ ನಾಲ್ಕು ಪರಿಷತ್ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ದೆಹಲಿ ಅಂಗಳದಲ್ಲಿ ನಡೆದಿದ್ದು ವಿಶೇಷ. ದೆಹಲಿಯಲ್ಲಿ ನರೇಂದ್ರ ಮೋದಿಯವರಿಗೆ ಶುಭ ಹಾರೈಸಲು ಹೋಗಿದ್ದ ಅನಂತಕುಮಾರ್, ಪ್ರಹ್ಲಾದ ಜೋಶಿ, ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್, ಕೆ.ಎಸ್. ಈಶ್ವರಪ್ಪ ಮತ್ತಿತರ ಪ್ರಮುಖರು ಸಾಕಷ್ಟು ಚರ್ಚಿಸಿದ ಬಳಿಕ ಈ ನಿರ್ಧಾರಕ್ಕೆ ಬಂದಿದ್ದಾರೆ. ತನ್ಮೂಲಕ ಬಿಜೆಪಿ ತನ್ನ ಅಭ್ಯರ್ಥಿಯನ್ನು ಅಖಾಡಕ್ಕಿಳಿಸಿದಂತಾಗಿದೆ.
ರೇಸ್ನಲ್ಲಿ ಮುಂದೆ: ಬಿಜೆಪಿ ಟಿಕೆಟ್ ಪಡೆದುಕೊಳ್ಳಲು ಅನೇಕರು ರೇಸ್ನಲ್ಲಿದ್ದರು. ಇದೇ ಕ್ಷೇತ್ರವನ್ನು ಪ್ರತಿನಿಧಿಸಿ ಗೆದ್ದಿದ್ದ ಮೋಹನ ಲಿಂಬಿಕಾಯಿ, ಮಹೇಶ ಟೆಂಗಿನಕಾಯಿ, ಮಾ. ನಾಗರಾಜ, ಶಿವು ಹಿರೇಮಠ ಮುಂಚೂಣಿಯಲ್ಲಿದ್ದರು. ಆದರೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಒಲವು ಸಂಕನೂರ ಪರವಾಗಿತ್ತು. ಬಿ.ಎಸ್. ಯಡಿಯೂರಪ್ಪ ಆಪ್ತ ಮೋಹನ ಲಿಂಬಿಕಾಯಿ ಕೂಡ ಟಿಕೆಟ್ಗಾಗಿ ಪೈಪೋಟಿ ನಡೆಸಿದ್ದರು. ಕಳೆದ ಬಾರಿ ಗೆದ್ದಿರುವ ಲಿಂಬಿಕಾಯಿಗೆ ಟಿಕೆಟ್ ನೀಡಬೇಕೆನ್ನುವ ವಾದವನ್ನು ಬಿಎಸ್ವೈ ಮಂಡಿಸಿದ್ದರು. ಆದರೆ ಸಂಕನೂರ ಪರ ಸಾರ್ವತ್ರಿಕ ಅಭಿಪ್ರಾಯ ವ್ಯಕ್ತವಾಗಿದ್ದರಿಂದ ಅದೇ ಹೆಸರನ್ನು ಅಂತಿಮಗೊಳಿಸಲಾಯಿತು.
ಏನೆಲ್ಲ ಪ್ಲಸ್?: ಸಂಕನೂರ ಈ ಕ್ಷೇತ್ರಕ್ಕೆ ಚಿರಪರಿಚಿತ. ಶಿಕ್ಷಕರ ಮತ ಕ್ಷೇತ್ರದಿಂದ ಅವರು ಸ್ಪರ್ಧಿಸಿದ್ದ ಹಿನ್ನೆಲೆಯಲ್ಲಿ ಅವರ ಹೆಸರು ಚಾಲ್ತಿಯಲ್ಲಿದೆ. ಹಾವೇರಿ, ಗದಗ, ಧಾರವಾಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳು ಈ ಕ್ಷೇತ್ರದ ವ್ಯಾಪ್ತಿಯಲ್ಲಿವೆ. ಒಂದು ಜಿಲ್ಲೆಗೆ ಸೀಮಿತವಾಗಿದ್ದ ವ್ಯಕ್ತಿ ಅಭ್ಯರ್ಥಿಯಾಗಿದ್ದರೆ ಮತದಾರರಿಗೆ ಹತ್ತಿರವಾಗಲು ಸಮಯ ಹಿಡಿಯುತ್ತಿತ್ತು. ಈಗ ಆ ಸಮಸ್ಯೆ ಉದ್ಭವಿಸಲ್ಲ. ಮೋದಿ ಅಲೆ ಜೋರಾಗಿದ್ದು, ಪರಿಷತ್ ಚುನಾವಣೆಯಲ್ಲೂ ಪ್ರಭಾವ ಬೀರುವ ಸಾಧ್ಯತೆ ಇದೆ. ಇದೆಲ್ಲ ಸಂಕನೂರಗೆ ಪ್ಲಸ್ ಆಗಲಿದೆ.
ಋಣಾತ್ಮಕ ಅಂಶಗಳೇನು?: ಬಿಜೆಪಿ ಅಭ್ಯರ್ಥಿಯಾಗಿರುವ ಪ್ರೊ ಸಂಕನೂರ ಕಳೆದ ಬಾರಿ ಶಿಕ್ಷಕರ ಮತ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಬಯಸಿದ್ದರು. ಕುಬೇರಪ್ಪ ಅಭ್ಯರ್ಥಿಯಾಗಿದ್ದರಿಂದ ಸಂಕನೂರ ಬಿಜೆಪಿ ವಿರುದ್ಧ ಸಿಡಿದೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಪರಿಣಾಮ, ಇಬ್ಬರೂ ಸೋತು, ಬಸವರಾಜ ಹೊರಟ್ಟಿ ವಿಧಾನಪರಿಷತ್ ಪ್ರವೇಶಿಸಿದರು.
ಈಗ ಬಿಜೆಪಿ ಅಭ್ಯರ್ಥಿ ಪಟ್ಟಿಯಲ್ಲಿ ಸಂಕನೂರ ಹೆಸರು ತೇಲಿ ಬಂದಾಗ, ಈ ಹಿಂದೆ ಬಿಜೆಪಿ ವಿರುದ್ಧವೇ ಸ್ಪರ್ಧಿಸಿದ್ದ ಅವರಿಗೆ ಟಿಕೆಟ್ ನೀಡಿದರೆ ಪಕ್ಷಕ್ಕಾಗಿ ದುಡಿದವರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎನ್ನುವ ಅಸಮಾಧಾನ ಕೇಳಿಬಂದಿತ್ತು. ಈಗಲೂ ಅಸಮಾಧಾನ ಹೊಗೆಯಾಡಿದ್ದೇ ಆದಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲುವಿನ ಹಾದಿ ದುರ್ಗಮವಾಗುವ ಸಾಧ್ಯತೆಯಿದೆ. ಮುಂಚೂಣಿ ನಾಯಕರು ಅಸಮಾಧಾನ ಶಮನ ಮಾಡಿ, ಗೆಲ್ಲುವುದಕ್ಕೆ ಯಾವ ಮಾರ್ಗ ಅನುಸರಿಸುತ್ತಾರೆಂಬುದು ಗಮನಾರ್ಹ.
ಹೊರಟ್ಟಿ-ಸಂಕನೂರ: ಪ್ರೊ ಎಸ್. ವಿ. ಸಂಕನೂರ ಬಿಜೆಪಿ ಅಭ್ಯರ್ಥಿಯಾದ ಮೇಲೆ ಚುನಾವಣಾ ಕಣ ರಂಗೇರಲಿದೆ. ಇದು ಬಿಜೆಪಿ ಹಾಗೂ ಇತರ ಪಕ್ಷಗಳ ನಡುವಿನ ಚುನಾವಣೆ ಎನ್ನುವುದಕ್ಕಿಂತ ಹೆಚ್ಚಾಗಿ ಬಸವರಾಜ ಹೊರಟ್ಟಿ ಹಾಗೂ ಸಂಕನೂರ ನಡುವಿನ ಕಾಳಗವೇ ಆಗಲಿದೆ. ಏಕೆಂದರೆ ಹೊರಟ್ಟಿ, ಸಂಕನೂರ ರಾಜಕೀಯವಾಗಿ ಬದ್ಧ ವೈರಿಗಳು. ಹೊರಟ್ಟಿ ಪುತ್ರ ವಸಂತ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ನಿರ್ಧಾರವಾಗಿದೆ.
-ಪ್ರಕಾಶ ಎಸ್. ಶೇಟ್