ಹೆಚ್ಚಿನ ಇಳುವರಿ, ಉತ್ಪಾದನಾ ತಾಂತ್ರಿಕತೆ
ಧಾರವಾಡ: ಕೃಷಿ ವಿಶ್ವವಿದ್ಯಾಲಯವು ಕಳೆದ ಎರಡು ವರ್ಷಗಳಲ್ಲಿ ವಿವಿಧ ಬೆಳೆಗಳಲ್ಲಿ ಹೆಚ್ಚಿನ ಇಳುವರಿ ಕೊಡುವ ತಳಿಗಳನ್ನು ಹಾಗೂ ಹಲವು ಉತ್ಪಾದನಾ ತಾಂತ್ರಿಕತೆಗಳನ್ನು ರೈತ ಸಮುದಾಯದ ಅಳವಡಿಕೆಗೆ ಬಿಡುಗಡೆ ಮಾಡಲಾಗಿದೆ ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ಪಿ. ಬಿರಾದಾರ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮಚ್ಚೆರೋಗಕ್ಕೆ ನಿರೋಧಕ ಶಕ್ತಿ ಹಾಗೂ ಕಾಳಿನಲ್ಲಿ ಹೆಚ್ಚು ಪ್ರಮಾಣದಲ್ಲಿ ಸ್ಟಾರ್ಚ್ ಹೊಂದಿದ ಅಧಿಕ ಇಳುವರಿ ಸಾಮರ್ಥ್ಯದ ಗೋವಿನ ಜೋಳದ ಜಿ.ಎಚ್.0727, ಬೇಗನೆ ಮಾಗುವ, ಕಾಳಿನ ಬೂಷ್ಟು ರೋಗ ಸಹಿಷ್ಣು ಗುಣದ ಅಧಿಕ ಕಾಳು ಹಾಗೂ ಮೇವು ಇಳುವರಿಯ ಜೋಳದ ಎಸ್.ಪಿ.ಎಚ್-1655, ಹೆಚ್ಚು ಕಾಳು ಹಾಗೂ ಮೇವು ಇಳುವರಿ ನೀಡುವ, ರೊಟ್ಟಿ ತಯಾರಿಕೆಗೆ ಹೇಳಿ ಮಾಡಿಸಿದ ಬಿಜಿವಿ-44 ಹಿಂಗಾರಿ ಜೋಳದ ತಳಿಗಳನ್ನು ಬಿಡುಗಡೆ ಮಾಡಲಾಗಿದೆ. ಶೇಂಗಾ ಬೆಳೆಯಲ್ಲಿ, ಎಲೆಚುಕ್ಕೆ ನಿರೋಧಕ ಶಕ್ತಿ ಹೊಂದಿದ ದೊಡ್ಡ ಕಾಳಿನ ಪ್ರತಿ ಹೆಕ್ಟೇರ್ಗೆ 35 ಕ್ವಿಂಟಲ್ ಇಳುವರಿ ನೀಡುವ ಜಿಪಿಬಿಡಿ-5, ಗುಣಮಟ್ಟದ ಎಣ್ಣೆ ಅಂಶ ಹೊಂದಿದ ಜಿ-2-52 ಶೇಂಗಾ ತಳಿಗಳು ಹೊರ ಬಂದಿವೆ. ಹೀಗೆ ಸೋಯಾಬೀನ್, ಸೂರ್ಯಕಾಂತಿ, ಗುರೆಳ್ಳು, ಎಳ್ಳು, ಹೆಸರು, ಅಲಸಂದಿ, ತೊಂಡೆಕಾಯಿ, ಕಬ್ಬು ಬೆಳೆಗಳಲ್ಲಿ ಅನೇಕ ಸುಧಾರಿತ ತಳಿಗಳನ್ನು ಸಂಶೋಧನೆ ಮಾಡಿ ರೈತರಿಗೆ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಕುಲಪತಿಗಳು ಮಾಹಿತಿ ನೀಡಿದರು.
ಅಂತೆಯೇ, ವಿವಿ ಸಾವಯವ ಕೃಷಿ ಸಂಸ್ಥೆಯು 16 ಹೆಕ್ಟೇರ್ ಕ್ಷೇತ್ರದಲ್ಲಿ ಜೈವಿಕ ಸಂಪನ್ಮೂಲ ಕೇಂದ್ರ ಸ್ಥಾಪಿಸಿದ್ದು, ಈ ಕ್ಷೇತ್ರದಲ್ಲಿ ಉತ್ಪಾದಿಸಿದ ಜೈವಿಕ ಪರಿಕರಗಳನ್ನು ಬಳಸಿ ಕೃಷಿ, ತೋಟಗಾರಿಕೆ, ಮೇವು ಹಾಗೂ ಅರಣ್ಯ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಈ ಸಂಸ್ಥೆ 27 ಟನ್ ಉತ್ತಮ ಗುಣಮಟ್ಟದ ಜೈವಿಕ ಗೊಬ್ಬರವನ್ನು ಹಾಗೂ 41.5 ಟನ್ ಜೈವಿಕ ಪೀಡೆನಾಶಕಗಳನ್ನು ಉತ್ಪಾದಿಸಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ಪೂರೈಸಿದೆ ಎಂದರು.
ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರು. 10.5 ಕೋಟಿ ಅನುದಾನದಲ್ಲಿ 11 ಹವಾಮಾನ ಬದಲಾವಣೆ ಕೃಷಿ ಸಂಶೋಧನೆ ಸಂಸ್ಥೆಗಳಲ್ಲಿ ಶೇಂಗಾ, ಮೆಣಸಿನಕಾಯಿ, ಗೋವಿನಜೋಳ, ಗೋದಿ, ಕಡಲೆ, ಹಾಗೂ ಜೋಳದ ಬೆಳೆ ಹಾಗೂ ತಳಿಗಳಲ್ಲಿ ಹವಾಮಾನ ಬದಲಾವಣೆಯಿಂದ ಆಗುವ ಪರಿಣಾಮ ಕಂಡುಕೊಳ್ಳುವ ಪ್ರಯೋಗಗಳನ್ನು, ಕ್ರಮಗಳ ಬಗ್ಗೆ ಸಂಶೋಧನೆ ಪ್ರಾರಂಭಿಸಲಾಗಿದೆ. ವಿವಿ 12 ಕೃಷಿ ಸಂಶೋಧನಾ ಕೇಂದ್ರಗಳಲ್ಲಿ ಸ್ವಯಂ ಚಾಲಿತ ಹವಾಮಾನ ಉಪಕರಣಗಳನ್ನು ಅಳವಡಿಸಲಾಗಿದೆ. ಹವಾಮಾನ ಮುನ್ಸೂಚನೆಯನ್ನು ರೈತರ ಮೊಬೈಲ್ಗಳಿಗೆ ಕಳುಹಿಸುವ ಯೋಜನೆಯೂ ಇದೆ ಎಂದರು.
ಕೃಷಿ ವಿವಿಯು ರೈತರಿಗೆ ಉತ್ತಮ ಗುಣಮಟ್ಟದ ಬೀಜ ಪೂರೈಸುತ್ತಿದ್ದು 2011-12ರಲ್ಲಿ 1,02,784 ಕ್ವಿಂಟಲ್ ಬೀಜಗಳನ್ನು ಉತ್ಪಾದಿಸಲಾಗಿದೆ. 2012-13ರಲ್ಲಿ 1,09,926 ವಿವಿಧ ಬೀಜಗಳನ್ನು ಉತ್ಪಾದಿಸಲಾಗಿದೆ. 12 ಹಾಗೂ 13ನೇ ಸಾಲಿನಲ್ಲಿ ಕ್ರಮವಾಗಿ 23 ಹಾಗೂ 45 ಹೊಸ ಅರೆಕಾಲಿಕ ಯೋಜನೆಗಳಿಗೆ ಅನುದಾನ ದೊರೆತಿದೆ ಎಂದು ಹೇಳಿದರು.