ಸಂಕನೂರಗೆ ಬಿಜೆಪಿ ಟಿಕೆಟ್: ಭುಗಿಲೆದ್ದ ಅಸಮಾಧಾನ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮೇ 20
ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರ ಮತ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಎಸ್.ವಿ. ಸಂಕನೂರ ಅವರನ್ನು ಆಯ್ಕೆ ಮಾಡಿರುವ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದೆ. ಪಕ್ಷಕ್ಕೆ ಶ್ರಮಿಸಿದವರನ್ನು ಬಿಟ್ಟು ಪಕ್ಷದ ವಿರುದ್ಧ ತೊಡೆತಟ್ಟಿದವರಿಗೆ ಟಿಕೆಟ್ ನೀಡಿರುವುದು ಸರಿಯಲ್ಲ ಎಂದು ಮೂಲ ಬಿಜೆಪಿಗರು ವಾದಿಸುತ್ತಿದ್ದಾರೆ.
ಈ ಮೂಲಕ ಯಡಿಯೂರಪ್ಪ ಟೀಮ್‌ನ್ನು ಬದಿಗೊತ್ತುವ ವ್ಯವಸ್ಥಿತ ತಂತ್ರ ನಡೆದಿದೆ ಎನ್ನುವ ಅಸಮಾಧಾನವೂ ವ್ಯಕ್ತವಾಗಿದೆ.
ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಟಿಕೆಟ್‌ಗಾಗಿ ಆಕಾಂಕ್ಷಿಗಳಿಂದ ಪೈಪೋಟಿ ನಡೆದಿತ್ತು. ಕಾದು ನೋಡುವ ತಂತ್ರಕ್ಕೆ ಮೊರೆಹೋಗಿದ್ದ ಬಿಜೆಪಿ ರಾಜ್ಯ ಮುಖಂಡರು ಲೋಕಸಭೆ ಚುನಾವಣೆ ಫಲಿತಾಂಶ ಹೊರ ಬೀಳುತ್ತಿದ್ದಂತೆಯೇ ದೆಹಲಿಯಲ್ಲಿ ಕುಳಿತು ಎಸ್.ವಿ. ಸಂಕನೂರ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದ್ದಾರೆ. ದೆಹಲಿಯಲ್ಲಿ ಅಭ್ಯರ್ಥಿ ಆಯ್ಕೆ ಮಾಡುವ ಜರೂರತ್ತು ಏನಿತ್ತು? ಪಕ್ಷಕ್ಕೆ ದುಡಿದವರನ್ನು ಬಿಟ್ಟು ಹೊರಗಿನವರಿಗೆ ಮಣೆ ಹಾಕಿರುವುದು ಎಷ್ಟರ ಮಟ್ಟಿಗೆ ಸರಿ? ಎನ್ನುವ ಪ್ರಶ್ನೆ ಟಿಕೆಟ್ ವಂಚಿತರದ್ದು.
ಲಿಂಬಿಕಾಯಿ ಅಸಮಾಧಾನ: 2008ರಲ್ಲಿ ಇದೇ ಮತ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದ ಮೋಹನ ಲಿಂಬಿಕಾಯಿ ಈ ಸಲವೂ ಟಿಕೆಟ್ ಆಕಾಂಕ್ಷಿಯಾಗಿದ್ದರು. ಮೋಹನ ಲಿಂಬಿಕಾಯಿ ಮೂಲಕ ಬಿಜೆಪಿ ಈ ಕ್ಷೇತ್ರದಲ್ಲಿ ಗೆಲುವಿನ ಖಾತೆಯನ್ನೂ ತೆರೆದಿತ್ತು ಎನ್ನುವುದು ಗಮನಾರ್ಹ. ಸಹಜವಾಗಿ ಮೋಹನ ಲಿಂಬಿಕಾಯಿ ಆಕಾಂಕ್ಷಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಆಪ್ತ ಎಂಬ ಕಾರಣಕ್ಕಾಗಿಯೇ ತಮಗೆ ಟಿಕೆಟ್ ನೀಡಲಿಲ್ಲ.
ಈ ಮೂಲಕ ಯಡಿಯೂರಪ್ಪ ಅವರ ತಂಡವನ್ನು ಬದಿಗೆ ಸರಿಸುವ ಯತ್ನವೂ ಪಕ್ಷದಲ್ಲಿ ನಡೆಯುತ್ತಿದೆ ಎಂದು ಲಿಂಬಿಕಾಯಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರಣ ಕೊಡಿ: 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಲಿಂಬಿಕಾಯಿ, ತಮಗೆ ಟಿಕೆಟ್ ನೀಡದಿರಲು ಸಕಾರಣ ಕೊಟ್ಟಿದ್ದರೆ ಅಭ್ಯಂತರವಿರಲಿಲ್ಲ. ಕೆಜೆಪಿಯಿಂದ ಬಿಜೆಪಿಗೆ ಸೇರಿಸಿಕೊಳ್ಳುವಾಗ ಟಿಕೆಟ್ ಭರವಸೆ ಕೊಟ್ಟು ಈಗ ಕೈ ಕೊಟ್ಟಿರುವುದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿದರು. ಇನ್ನೋರ್ವ ಟಿಕೆಟ್ ಆಕಾಂಕ್ಷಿ ಮಹೇಶ ಟೆಂಗಿನಕಾಯಿ, ಪಕ್ಷಕ್ಕಾಗಿ ಅನೇಕ ವರ್ಷಗಳಿಂದ ದುಡಿದವರಿಗೆ ಟಿಕೆಟ್ ನೀಡಿದ್ದರೆ ಒಳ್ಳೆಯದಾಗಿತ್ತು. ಪಕ್ಷ ಸಂಕನೂರಗೆ ಟಿಕೆಟ್ ನೀಡಿರುವುದಕ್ಕೆ ಅಸಮಾಧಾನವಿಲ್ಲ. ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸುತ್ತೇನೆ ಎನ್ನುತ್ತಾರೆ. ವೀರೇಶ ಸಂಗಳದ ಅವರ ಅಭಿಪ್ರಾಯವೂ ಇದೇ.
ಮೂರು ಬಾರಿ ಸೋತಿದ್ದರು: ಬಿಜೆಪಿಅಭ್ಯರ್ಥಿಯಾಗಿರುವ ಎಸ್.ವಿ. ಸಂಕನೂರ ಪದವೀಧರ ಕ್ಷೇತ್ರದಿಂದ 1990, 1996ರಲ್ಲಿ ಎರಡು ಬಾರಿ ಎಚ್.ಕೆ. ಪಾಟೀಲರ ವಿರುದ್ಧ ಸೋತಿದ್ದರು. 2010ರಲ್ಲಿ ಶಿಕ್ಷಕರ ಮತ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಬಯಸಿದ್ದರು. ಟಿಕೆಟ್ ಸಿಗದಿದ್ದಾಗ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದರೂ ಸೋಲನುಭವಿಸಿದರು.
ಸೋಲಿನ ಮೇಲೆ ಸೋಲು ಅನುಭವಿಸಿದ ಸಂಕನೂರಗೆ ಯಾವ ಕಾರಣಕ್ಕೆ ಟಿಕೆಟ್ ನೀಡಲಾಗಿದೆ ಎಂದು ಆಕಾಂಕ್ಷಿಗಳು ಪ್ರಶ್ನಿಸುತ್ತಿದ್ದಾರೆ.
ಪಕ್ಷಕ್ಕೆ ಸವಾಲು: ಟಿಕೆಟ್ ಹಂಚಿಕೆಯಲ್ಲಿ ಎದ್ದಿರುವ ಅಸಮಾಧಾನ ತಣಿಸುವುದು ಪಕ್ಷಕ್ಕೆ ಸವಾಲಾಗಿ ಪರಿಣಮಿಸಿದೆ. ಮೋಹನ ಲಿಂಬಿಕಾಯಿ ಹೊರತಾಗಿ ಇನ್ನುಳಿದವರು ಪಕ್ಷದ ಮುಖಂಡರ ನಿರ್ಣಯದ ವಿರುದ್ಧ ಬಹಿರಂಗ ಆಕ್ಷೇಪ ವ್ಯಕ್ತ ಪಡಿಸದಿದ್ದರೂ ಒಳ ಬೇಗುದಿ ಮಾತ್ರ ತಪ್ಪಿದ್ದಲ್ಲ.
-ಪ್ರಕಾಶ ಎಸ್. ಶೇಟ್