ಸರ್ಕಾರಿ ಶಾಲೆಗಳಲ್ಲೂ ಪೂರ್ವ ಪ್ರಾಥಮಿಕ ಶಿಕ್ಷಣ
- ಬಸವರಾಜ ಹಿರೇಮಠ
ಕನ್ನಡಪ್ರಭ ವಾರ್ತೆ, ಧಾರವಾಡ, ಮೇ 20
ಖಾಸಗಿ ಶಾಲೆಗಳಿಗೆ ಮಾತ್ರ ಸೀಮಿತವಾಗಿದ್ದ ಪೂರ್ವ ಪ್ರಾಥಮಿಕ ಶಿಕ್ಷಣದ ಭಾಗ್ಯ ಈಗ ಸರ್ಕಾರಿ ಶಾಲೆಗಳಿಗೂ ವ್ಯಾಪಿಸಿದೆ.
ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿಯನ್ನು ಗಣನೀಯ ಪ್ರಮಾಣದಲ್ಲಿ ಏರಿಸಲು ಧಾರವಾಡ ಶಹರದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ (ಎಲ್ಕೆಜಿ ಹಾಗೂ ಯುಕೆಜಿ) ಶಿಕ್ಷಣ ನೀಡುವ ನೂತನ ಪ್ರಯತ್ನಕ್ಕೆ ಧಾರವಾಡ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೈ ಹಾಕಿದ್ದಾರೆ.
ಬರುವ ಶೈಕ್ಷಣಿಕ ವರ್ಷದಿಂದ ಧಾರವಾಡ ಶಹರದ ಎಲ್ಲ 64 ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆ ಆರಂಭಿಸಲು ತೀರ್ಮಾನಿಸಿದ್ದು, ಸಿದ್ಧತೆಗಳು ನಡೆದಿವೆ. ಎರಡು ಸಾವಿರ ವಿದ್ಯಾರ್ಥಿಗಳ ದಾಖಲಾತಿ ಪಟ್ಟಿ ಸಿದ್ಧಗೊಂಡಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ. ಹುಡೇದಮನಿ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ. ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಗಾಗಿಯೇ ಒಂಭತ್ತು ಶಿಕ್ಷಣ ತಜ್ಞರನ್ನು ಒಳಗೊಂಡ ಸಮಿತಿ ನೂತನ ಪಠ್ಯಕ್ರಮ ರಚಿಸಿದೆ. ನಲಿ-ಕಲಿ ಪದ್ಧತಿ ಅನುಸಾರ 10 ಪುಟಗಳುಳ್ಳ ಪಠ್ಯಪುಸ್ತಕ ರಚಿಸಲಾಗುತ್ತಿದೆ. ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ ಪೆನ್ನು, ನೋಟ್ಬುಕ್, ಪೆನ್ಸಿಲ್ ಸೆಟ್ ಇರುವ ಒಂದು ಬ್ಯಾಗ್ ಮಕ್ಕಳಿಗೆ ಉಚಿತವಾಗಿ ನೀಡಲು ಚಿಂತನೆ ನಡೆದಿದೆ. ಪ್ರತಿ ಕೇಂದ್ರಕ್ಕೂ ನರ್ಸರಿ ಟ್ರೇನಿಂಗ್ ಕೋರ್ಸ್ (ಎನ್ಟಿಸಿ) ಮುಗಿಸಿದ ಒಬ್ಬ ಸ್ವಯಂ ಸೇವಕರನ್ನು ನೇಮಿಸಿ ಈ ಮೂಲಕ ಮಕ್ಕಳಿಗೆ ಶಿಕ್ಷಣ ಒದಗಿಸುವ ಚಿಂತನೆ ಇದೆ.
ಬಿಸಿಯೂಟ ಕೊಡ್ತಾರೆ: ಪೂರ್ವ ಪ್ರಾಥಮಿಕ ಶಾಲೆ ಆರಂಭ ಸೇರಿದಂತೆ ಈ ಮಕ್ಕಳಿಗೆ ಇಸ್ಕಾನ್ದಿಂದ ಬಿಸಿಯೂಟವೂ ನೀಡುವ ಚಿಂತನೆ ನಡೆದಿದ್ದು, ಈ ಮೂಲಕ ಮಕ್ಕಳ ಪಾಲಕ ಹಾಗೂ ಪೋಷಕರ ಗಮನ ಸೆಳೆಯುವಲ್ಲಿ ಶಿಕ್ಷಣ ಇಲಾಖೆ ಯತ್ನಿಸುತ್ತದೆ. ಶಿಕ್ಷಣ ಇಲಾಖೆ ಹಲವು ಯೋಜನೆಗಳನ್ನು ಮಕ್ಕಳಿಗೆ ಮುಟ್ಟಿಸುವ ಪ್ರಯತ್ನವೂ ಇದಾಗಿದೆ ಎಂದು ಶಿಕ್ಷಣಾಧಿಕಾರಿ ಹುಡೇದಮನಿ ಹೇಳುತ್ತಾರೆ.
ಖಾಸಗಿ ಶಿಕ್ಷಣ ಸಂಸ್ಥೆಗಳ ಪೈಪೋಟಿ ಮಧ್ಯೆ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸುವುದು ಸಾಮಾನ್ಯದ ಮಾತಲ್ಲ. ಎಲ್ಕೆಜಿ ಹಾಗೂ ಯುಕೆಜಿ ಶಿಕ್ಷಣ ಇಲ್ಲವೆಂದು ಸರ್ಕಾರಿ ಶಾಲೆ ತೊರೆದು ಅನಿವಾರ್ಯವಾಗಿ ಎಷ್ಟೋ ಮಕ್ಕಳ ಪಾಲಕರು ಖಾಸಗಿ ಶಾಲೆಗಳಿಗೆ ಪ್ರವೇಶ ಕೊಡಿಸಿದ ಉದಾಹರಣೆಗಳಿವೆ. ಸರ್ಕಾರಿ ಶಾಲೆಗಳಲ್ಲಿ ಹಲವು ವರ್ಷಗಳ ಹಿಂದೆಯೇ ಪೂರ್ವ ಪ್ರಾಥಮಿಕ ಶಾಲೆ ತೆರೆಯಬೇಕಿತ್ತು.
ರಾಜ್ಯದ ಪೈಕಿ ಪ್ರಸ್ತುತ ಧಾರವಾಡ ಶಹರದಲ್ಲಿ ಮಾತ್ರ ಈ ಪ್ರಯತ್ನ ಮಾಡಲಾಗುತ್ತಿದ್ದು, ಈ ಉಪಕ್ರಮ ರಾಜ್ಯಾದ್ಯಂತ ಜಾರಿ ಬರುವ ಮೂಲಕ ಸರ್ಕಾರಿ ಶಾಲೆಗಳತ್ತ ಮಕ್ಕಳು ಹಾಗೂ ಪೋಷಕರು ಮುಖ ಮಾಡುವ ಅಗತ್ಯವಿದೆ ಎಂಬ ಅಭಿಪ್ರಾಯ ನಿವೃತ್ತ ಶಿಕ್ಷಣಾಧಿಕಾರಿ ಶಿವಶಂಕರ ಹಿರೇಮಠ ಅವರದ್ದು.
ಪ್ರಾಥಮಿಕ ಶಾಲೆಗಳಿಗೆ ಹೊಂದಿಕೊಂಡೇ ಪೂರ್ವ ಪ್ರಾಥಮಿಕ ಶಿಕ್ಷಣ ಆರಂಭಿಸುತ್ತಿರುವುದು ಹೊಸ ಶೈಕ್ಷಣಿಕ ಚಿಂತನೆಗೆ ಬೆಳಕು ಚೆಲ್ಲಿದಂತಾಗಿದೆ.
ಬಡವ ಬಲ್ಲಿದ, ಸಮಾಜದ ಕೊನೆ ಅಂಚಿನಲ್ಲಿರುವ ಸಮುದಾಯದ ಮಕ್ಕಳೂ ಸರ್ಕಾರಿ ಶಾಲೆಗಳ ಪೂರ್ವ ಪ್ರಾಥಮಿಕ ಶಿಕ್ಷಣದ ಪ್ರಯೋಜನ ಪಡೆದು ಈ ಮೂಲಕ ಶಿಕ್ಷಣ ಇಲಾಖೆಯೂ ಬಲಗೊಳ್ಳಬೇಕು ಎನ್ನುವುದು ಶಿಕ್ಷಣ ತಜ್ಞರ ಆಶಯ. ಎಷ್ಟರ ಮಟ್ಟಿಗೆ ಈ ಪೂರ್ವ ಪ್ರಾಥಮಿಕ ಶಾಲೆಗಳಿಗೆ ಮಕ್ಕಳ ಪೋಷಕರು ಸ್ಪಂದಿಸಿ ಪ್ರವೇಶ ಕೊಡಿಸುತ್ತಾರೆಂಬುದನ್ನು ಕಾದು ನೋಡಬೇಕಿದೆ.