ಕಂದಾಯ ಇಲಾಖೆ ಕ್ರಮ ಖಂಡಿಸಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮೇ 23
ಅಯೋಧ್ಯಾ ಗ್ರಾಮದ ಅಖಿಲಾಂಡ ಮಹೇಶ್ವರ ನಗರದ ದಲಿತ, ಹಿಂದುಳಿದವರಿಗೆ ಸರ್ಕಾರ ನೀಡಿದ ಜಮೀನನ್ನು ಇದೀಗ ಕಂದಾಯ ಇಲಾಖೆ ಪರಭಾರೆ ಮಾಡಲು ಹೊರಟಿರುವ ಕ್ರಮ ವಿರೋಧಿಸಿ ಸಮತಾ ಸೇನೆ ಕಾರ್ಯಕರ್ತರು ಹುಬ್ಬಳ್ಳಿಯ ಮಿನಿವಿಧಾನಸೌಧದ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
2002ರಲ್ಲಿ ಚನ್ನಬಸವ್ವ ಎಂಬುವವರಿಗೆ ಸರ್ಕಾರಿ ಷರತ್ತು ವಿಧಿಸಿ 15 ಎಕರೆ ಜಮೀನು ಮಂಜೂರು ಮಾಡಿತ್ತು. ನಿಯಮಾವಳಿಯ ಪ್ರಕಾರ ಈ ಜಮೀನು 15 ವರ್ಷ ಕಾಲ ಪರಭಾರೆ ಮಾಡಲು ಬರುವುದಿಲ್ಲ. ಚನ್ನಬಸವ್ವ ಹಣದ ಕೊರತೆಯಿಂದ ಜಾಗವನ್ನು ಬಡವರಿಗೆ ಕಡಿಮೆ ಬೆಲೆಗೆ ಒಪ್ಪಂದದ ಪ್ರಕಾರ ಮಾರಾಟ ಮಾಡಿದ್ದರು. ಆದರೀಗ ಕಂದಾಯ ಇಲಾಖೆಯ ಅಧಿಕಾರಿಗಳು ಈ ಜಮೀನನ್ನು ಕಸಿದು ಪರಭಾರೆ ಮಾಡಲು ಹೊಂಚು ಹಾಕಿದ್ದಾರಲ್ಲದೇ, ದಾಖಲೆಗಳನ್ನು ತಿದ್ದುಪಡಿ ಮಾಡಿದ್ದಾರೆ. ಹೀಗಾದಲ್ಲಿ ಬಡ ಬಗ್ಗರಿಗೆ ಅನ್ಯಾಯವಾಗಲಿದೆ. ಕಂದಾಯ ಇಲಾಖೆ ಕಾನೂನು ಬಾಹಿರ ಕೃತ್ಯಕ್ಕೆ ಕೈ ಹಾಕಬಾರದು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಗುರುನಾಥ ಉಳ್ಳಿಕಾಶಿ, ಎಲ್ಲಪ್ಪ ಬಾಗಲಕೋಟೆ, ಬಸವರಾಜ ನೆವನೂರ, ಸುರೇಶ ಚಲವಾದಿ, ರವಿ ಬೇವಿನಕಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.
--