ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕಿಮ್ಸ್ ಪ್ರಭಾರಿ ನಿರ್ದೇಶಕ ಪಟ್ಟಕ್ಕೆ ಇಲಾಖೆಯೇ ಹೈಜಾಕ್

Lingaraj Badiger
Updated On : 24 May 2014, 11:36 am

-ಪ್ರಕಾಶ ಎಸ್. ಶೇಟ್
ಹುಬ್ಬಳ್ಳಿ: ತೆರವಾಗಲಿರುವ ಹುಬ್ಬಳ್ಳಿಯ ಕಿಮ್ಸ್ ನಿರ್ದೇಶಕ ಸ್ಥಾನ ಭರ್ತಿ ವಿಷಯದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯೇ ಕಾನೂನು ಗಾಳಿಗೆ ತೂರಿದೆ.
ಕಿಮ್ಸ್ ಹಾಲಿ ನಿರ್ದೇಶಕಿ ಡಾ೤ ವಸಂತಾ ಕಾಮತ್ ಮೇ 26ರಂದು ನಿವೃತ್ತಿಯಾಗಲಿದ್ದಾರೆ. ತೆರವಾಗಲಿರುವ ಸ್ಥಾನ ಭರ್ತಿಗೆ ನೇಮಕಾತಿ ಪ್ರಕ್ರಿಯೆಯನ್ನು ವೈದ್ಯಕೀಯ ಶಿಕ್ಷಣ ಇಲಾಖೆ ಮೂರು ತಿಂಗಳ ಮೊದಲೇ ಕೈಗೊಳ್ಳಬೇಕೆಂಬ ನಿಯಮಾವಳಿ ಇದೆ. ಇನ್ನೆರಡು ದಿನದಲ್ಲಿ ಕಾಮತ್ ನಿವೃತ್ತಿಯಾಗುತ್ತಿದ್ದರೂ ನೇಮಕಾತಿ ಪ್ರಕ್ರಿಯೆಗೆ ಇಲಾಖೆ ಇನ್ನೂ ಕೈ ಹಾಕಿಲ್ಲ.
ಸಂದರ್ಶನ ಕರೆಯಬೇಕಿತ್ತು: ಕಿಮ್ಸ್ ನಿರ್ದೇಶಕ ಸ್ಥಾನ ತೆರವಾಗುತ್ತಿದೆ ಎಂದು ತಿಳಿದ ಮೇಲೆ ಸರ್ಕಾರ ಮೂರು ತಿಂಗಳ ಮೊದಲು ಪತ್ರಿಕಾ ಜಾಹೀರಾತು ನೀಡಿ, ಆ ಸ್ಥಾನಕ್ಕೆ ಅರ್ಜಿ ಆಹ್ವಾನಿಸಬೇಕು. ಆಸಕ್ತರು, ಅರ್ಹರು ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಿ ಸಂದರ್ಶನ ಪ್ರಕ್ರಿಯೆ ನಡೆಸಬೇಕು. ಸಂದರ್ಶನದಲ್ಲಿ ಆಯ್ಕೆಯಾಗುವವರಿಗೆ ನಿವೃತ್ತಿ ಹೊಂದುವ ನಿರ್ದೇಶಕರು ಅಧಿಕಾರ ವಹಿಸಿಕೊಡಬೇಕು. ಈ ಸಲ ಸಂದರ್ಶನ ಪ್ರಕ್ರಿಯೆಯೇ ನಡೆದಿಲ್ಲ. ನೂತನ ಕಿಮ್ಸ್ ನಿರ್ದೇಶಕರಿಗೆ ಅಧಿಕಾರ ಹಸ್ತಾಂತರಿಸುವ ಪ್ರಕ್ರಿಯೆ ಸಾಧ್ಯವಿಲ್ಲ. ಕಿಮ್ಸ್ ನಿರ್ದೇಶಕಿ ಡಾ೤ ವಸಂತಾ ಕಾಮತ್ ನಿವೃತ್ತಿಯಾಗುತ್ತಿದ್ದಾರೆಂದು ಗೊತ್ತಿದ್ದರೂ ಸರ್ಕಾರ ಸಂದರ್ಶನ ಪ್ರಕ್ರಿಯೆ ಕೈಗೊಳ್ಳದೇ ಕೈ ಕಟ್ಟಿ ಕುಳಿತಿದ್ದೇಕೆ ಎನ್ನುವ ಪ್ರಶ್ನೆ ಎದುರಾಗಿದೆ.
ಸಂದೇಹಕ್ಕೆ ಎಡೆ: ಕನಿಷ್ಠ ಎರಡು ವರ್ಷ ಸೇವಾವಧಿ ಬಾಕಿ ಇದ್ದವರು ಮಾತ್ರ ಕಿಮ್ಸ್ ನಿರ್ದೇಶಕ ಸ್ಥಾನಕ್ಕೆ ಅರ್ಹರು. ಕಿಮ್ಸ್‌ನಲ್ಲಿ ಸೇವೆಯಲ್ಲಿ ಹಿರಿಯರಾಗಿರುವ ಡಾ೤ ಯು.ಎಸ್. ಹಂಗರಗಾ, ಪ್ರೊ೤ ಬಿ.ಎಚ್. ಮದಕಟ್ಟಿ, ಡಾ೤ ಎಂ.ಜಿ. ಹಿರೇಮಠ ಒಂದು ವರ್ಷ ಆಸುಪಾಸು ನಿವೃತ್ತಿಯಾಗಲಿದ್ದಾರೆ. ಸಂದರ್ಶನ ಕೈಗೊಂಡಿದ್ದೇ ಆದರೆ ಪೈಪೋಟಿಯಲ್ಲಿರುವ ಈ ಮೂವರಿಗೂ ನಿರ್ದೇಶಕ ಸ್ಥಾನ ಲಭಿಸದು.
ಬಲ್ಲ ಮೂಲಗಳ ಪ್ರಕಾರ, ಈ ಮೂವರಲ್ಲಿ ಒಬ್ಬರು ಶತಾಯುಗತಾಯು ನಿರ್ದೇಶಕ ಕುರ್ಚಿಯಲ್ಲಿ ಕುಳಿತುಕೊಳ್ಳಬೇಕೆಂದು ನಿರ್ಧರಿಸಿ ರಾಜಕೀಯ ಒತ್ತಡ ತರುವ ಮೂಲಕ ನಿರ್ದೇಶಕ ಸ್ಥಾನಕ್ಕೆ ಸಂದರ್ಶನ ನಡೆಯದಂತೆ ತಡೆಯೊಡ್ಡಿದ್ದಾರೆ. ಸಂದರ್ಶನ ನಡೆಯದೇ ಹೋದಲ್ಲಿ ಪ್ರಭಾರಿ ನಿರ್ದೇಶಕರಾಗಿ ಅಧಿಕಾರ ಚಲಾಯಿಸಬಹುದೆಂಬ ದೂ(ದು)ರಾಲೋಚನೆ.
ನಿರ್ದೇಶಕ ಸ್ಥಾನದಲ್ಲಿ ಕುಳಿತುಕೊಳ್ಳಬೇಕೆಂಬ ಏಕೈಕ ಉದ್ದೇಶದಿಂದ ವೈದ್ಯಕೀಯ ಇಲಾಖೆಯ ಮೇಲೆ ಒತ್ತಡ ತರುವಷ್ಟರ ಮಟ್ಟಿಗೆ ಕೆಲ ಆಕಾಂಕ್ಷಿಗಳು ಪ್ರಭಾವಿಗಳಾಗಿರುವುದು ಅಚ್ಚರಿ ಮೂಡಿಸಿದೆ. ಇಂಥವರ ತಾಳಕ್ಕೆ ತಕ್ಕಂತೆ ವೈದ್ಯಕೀಯ ಶಿಕ್ಷಣ ಇಲಾಖೆ ಹೆಜ್ಜೆ ಹಾಕುತ್ತಿರುವುದು ಹಲವು ಸಂದೇಹಕ್ಕೆ ಎಡೆ ಮಾಡಿಕೊಟ್ಟಿದೆ.
ಬೇರೆಯವರಿಗೆ ಅವಕಾಶವಿಲ್ಲ: ಎರಡು ವರ್ಷಗಳ ಹಿಂದೆ ಕಿಮ್ಸ್ ಬೈಲಾ ತಿದ್ದುಪಡಿ ಮಾಡಲಾಗಿದೆ. ಬೈಲಾ ಪ್ರಕಾರ ಕಿಮ್ಸ್‌ನಲ್ಲಿ ವಿವಿಧ ವಿಭಾಗಗಳಲ್ಲಿ ಮುಖ್ಯಸ್ಥರಾಗಿರುವವರು ಮಾತ್ರ ನಿರ್ದೇಶಕ ಸ್ಥಾನಕ್ಕೆ ಅರ್ಜಿ ಸಲ್ಲಿಸಬಹುದು. ಕಿಮ್ಸ್ ಹೊರತಾಗಿ ವಿಮ್ಸ್, ಬಿಮ್ಸ್ - ಹೀಗೆ ಅನ್ಯ ಕಾಲೇಜಿನವರು ನಿರ್ದೇಶಕ ಸ್ಥಾನಕ್ಕೆ ಅರ್ಜಿ ಸಲ್ಲಿಸಲು ಬರುವುದಿಲ್ಲ. ಇದರಿಂದಾಗಿ ಅರ್ಹರಿಗೆ ಅವಕಾಶ ಕೈ ತಪ್ಪುವಂತಾಗಿದೆ.

ಇಷ್ಟರಲ್ಲೇ ಸಂದರ್ಶನ
ಈ ಕುರಿತು 'ಕನ್ನಡಪ್ರಭ' ವೈದ್ಯಕೀಯ ಶಿಕ್ಷಣ ಸಚಿವ ಡಾ೤ ಶರಣ ಪ್ರಕಾಶ ಪಾಟೀಲ ಅವರನ್ನು ವಿಚಾರಿಸಿದಾಗ, ವರ್ಷದ ಹಿಂದೆ ಡಾ೤ ವಸಂತಾ ಕಾಮತ್ ಅವರ ಸ್ಥಾನಕ್ಕೆ ಡಾ೤ ಹಂಗರಗಾ ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿತ್ತು. ಆಗ ಡಾ೤ ಕಾಮತ್ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಪ್ರಕರಣ ಇನ್ನೂ ಕೋರ್ಟ್ ಕಟಕಟೆಯಲ್ಲಿರುವ ಕಾರಣ ನಿರ್ದೇಶಕ ಸ್ಥಾನಕ್ಕೆ ಸಂದರ್ಶನ ನಡೆಸಲಾಗಿಲ್ಲ ಎಂದು ಉತ್ತರಿಸಿದರು. ನಾಲ್ಕು ತಿಂಗಳ ಹಿಂದೆಯೇ ಡಾ೤ ಕಾಮತ್ ನಿರ್ದೇಶಕಿಯಾಗಿ ಮುಂದುವರಿಯುವಂತೆ ನ್ಯಾಯಾಲಯ ತೀರ್ಪು ನೀಡಿದೆ. ಕೋರ್ಟ್‌ನಲ್ಲಿ ಪ್ರಕರಣ ಬಾಕಿ ಇರಲು ಹೇಗೆ ಸಾಧ್ಯ? ಎಂದು ಪಾಟೀಲರಿಗೆ ಮರು ಪ್ರಶ್ನಿಸಿದರೆ, ಹಾಗಿದ್ದರೆ ಇಷ್ಟರಲ್ಲಿಯೇ ಸಂದರ್ಶನ ಕರೆಯುತ್ತೇನೆಂದು ನುಣುಚಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement