ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ತಹಸೀಲ್ದಾರ್-ಪಾಲಿಕೆ ಅಧಿಕಾರಿ ವಿರುದ್ಧ ತನಿಖೆಗೆ ಆದೇಶ

Lingaraj Badiger
Updated On : 24 May 2014, 11:36 am

ಹುಬ್ಬಳ್ಳಿ: ತಹಸೀಲ್ದಾರ್ ಕಚೇರಿ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ದಾಖಲೆಗಳನ್ನು ತಿದ್ದುಪಡಿ ಮಾಡಿದ ಪ್ರಕರಣದ ಕುರಿತು ವಿಚಾರಣೆ ನಡೆಸಿದ ಮುಕ್ತ ಭೂ ದಾಖಲೆಗಳ ನ್ಯಾಯಾಲಯ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಲಿಕೆ ಆಯುಕ್ತರಿಗೆ ಹಾಗೂ ತಹಸೀಲ್ದಾರ್‌ಗೆ ಆದೇಶ ನೀಡಿದೆ.
ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದ ಪೀಪಲ್ಸ್ ಆ್ಯಕ್ಷನ್ ಕಮಿಟಿಯ ಅರವಿಂದ ಮೇಟಿ, ಗಬ್ಬೂರ ಗ್ರಾಮದಲ್ಲಿ ರಿ.ಸ.ನಂ.33 ರಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ನಾಲ್ಕು ಎಕರೆ ಜಮೀನನ್ನ್ನು ಏಕವಿನ್ಯಾಸವೆಂದು ಕೈಗಾರಿಕೆಗೆ ಬಿನ್‌ಶೆತ್ಕಿ ಮಾಡಲಾಗಿತ್ತು. ಆದರೆ ಜಮೀನನ್ನು ಉಪ ವಿಭಾಗಗಳನ್ನಾಗಿಸಲು ನಗರಾಭಿವೃದ್ಧಿ ಕಾಯ್ದೆಯಲ್ಲಿ ಅವಕಾಶವಿಲ್ಲ ಎಂದು ಹೇಳಿದರು.
ಜಿಲ್ಲಾಧಿಕಾರಿ ಅವರಿಗೂ ಈ ಕುರಿತ ಅಧಿಕಾರ ಇಲ್ಲ. ಆದರೂ ಕಂಪಲಿ ಮತ್ತು ಕೋಟಾರಿ ಎಂಬ ಉದ್ಯಮಿಗಳಿಗೆ ತಹಶೀಲ್ದಾರ ಕಚೇರಿಯ ಸಿಬ್ಬಂದಿ ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳು ಆ ನಾಲ್ಕು ಎಕರೆ ಜಮೀನನ್ನ್ನು ಎಂಟು ವಿಭಾಗಗಳನ್ನಾಗಿಸಿ ಖೊಟ್ಟಿ ದಾಖಲ್ನೆ ಸೃಷ್ಟಿಸಿದ್ದರು. ಈ ಕುರಿತಂತೆ ಬಂಕಾಪುರದ ಡಿ.ಟಿ. ಪಾಟೀಲರು ಭೂ ದಾಖಲೆಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಲೋಕಾಯುಕ್ತರಿಗೆ, ಪಾಲಿಕೆ ಆಯುಕ್ತರಿಗೆ ಹಾಗೂ ಜಿಲ್ಲಾಧಿಕಾರಿಯವರಿಗು ಸಹ ದೂರು ನೀಡಲಾಗಿತ್ತು.  
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಬಿನ್ನಶೇತ್ಕಿಯಾಗಿ ಪರಿವರ್ತನೆಗೊಂಡ ಜಮೀನಿನಲ್ಲಿ ಏಕವಿನ್ಯಾಸಕ್ಕೆ ಅನುಮೋದನೆ ಪಡೆದ ಭಾಗದಲ್ಲಿ ಬದಲಾವಣೆ ಮಾಡುವ ಅಧಿಕಾರ ಕೆಟಿಸಿಪಿ ಕಾಯ್ದೆ ಪ್ರಕಾರ ಪ್ರಾಧಿಕಾರಕ್ಕೆ ಮಾತ್ರ ಇರುತ್ತದೆಯೇ ಹೊರತು ಕಂದಾಯ ಇಲಾಖೆಗೆ ಇರುವುದಿಲ್ಲ ಎಂದು ಮಹತ್ವದ ತೀರ್ಪು ನೀಡಿದೆ.
ಪ್ರಾಧಿಕಾರದ ಅನುಮತಿಯಿಲ್ಲದೆ ಯಾವುದೇ ಬದಲಾವಣೆ ಮಾಡಲು ಅವಕಾಶ ಇಲ್ಲ. ಆದರೆ ಜಮೀನುದಾರರು ಕಾನೂನು ರೀತಿ ವಿನ್ಯಾಸ ನಕ್ಷೆ ಪಡೆಯದೇ ನೋಂದಣಿ ಮಾಡಿಕೊಂಡಿದ್ದು ಹಾಗೂ ಅಧಿಕಾರ ಮೀರಿ ದಾಖಲೆಗಳನ್ನ್ನು ಸೃಷ್ಟಿ ಮಾಡಿದ್ದು ಕಾನೂನು ಬಾಹಿರ. ಇದಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೋರ್ಟ್ ಆದೇಶ ನೀಡಿದೆ.
ಈ ಹಿನ್ನ್ನಲೆಯಲ್ಲಿ ತಪ್ಪಿತಸ್ಥರಾದ ತಹಸೀಲ್ದಾರ್ ಕಚೇರಿಯ ಭೂ ಮಾಪನಾಧಿಕಾರಿಗಳ ಹಾಗೂ ಮಹಾನಗರ ಪಾಲಿಕೆಯ ನಗರ ಯೋಜನಾಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. 15 ದಿನದೊಳಗೆ ಕ್ರಮ ಕೈಗೊಳ್ಳದಿದ್ದರೆ ಮತ್ತೆ ಲೋಕಾಯುಕ್ತರಿಗೆ ದೂರು ನೀಡಲಾಗುವುದು ಎಂದು ಮೇಟಿ ಎಚ್ಚರಿಕೆ ನೀಡಿದರು.
ಜಿ.ಎಸ್. ಪಾಟೀಲ, ಎನ್.ಎಸ್. ನಾಡಿಗೇರ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement