ಬೇಡಿಕೆ ಈಡೇರಿಸಿ: ಸಾರಿಗೆ ನೌಕರರ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮೇ 23
ಕಾರ್ಮಿಕರಿಗೆ ಸಲ್ಲಬೇಕಿರುವ ಬಾಕಿ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳದ ನೇತೃತ್ವದಲ್ಲಿ ನೂರಾರು ನೌಕರರು ಇಲ್ಲಿಯ ಗೋಕುಲ ರಸ್ತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಮಹಾಮಂಡಳದ ಅಧ್ಯಕ್ಷ ಡಾ. ಕೆ.ಎಸ್. ಶರ್ಮಾ ನೇತೃತ್ವದಲ್ಲಿ ವಿಶ್ವಶ್ರಮ ಚೇತನದಿಂದ ಮೆರವಣಿಗೆ ಮೂಲಕ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಗೆ ತೆರಳಿದ ಪ್ರತಿಭಟನಾಕಾರರು, ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವಾಯುವ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಉಮೇಶ ಕುಸುಗಲ್ ಅವರಿಗೆ ಮನವಿ ಸಲ್ಲಿಸಿದರು.
ಬಾಕಿ ವೇತನವನ್ನು ತಕ್ಷಣ ಬಟವಡೆ ಮಾಡಬೇಕು. ಅರ್ಜಿ-4ರಲ್ಲಿನ ಕಾನೂನು ಬಾಹಿರ ಅಂಶಗಳನ್ನು ತಿದ್ದಬೇಕು. ರಜೆ ಮಂಜೂರಾತಿಯಲ್ಲಿನ ಅನ್ಯಾಯ, ಕಿರುಕುಳ ಪರಿಹರಿಸಬೇಕು. ಮೋಬೈಲ್ ಫೋನ್ ಬಳಕೆ ನಿಷೇಧ ರದ್ದುಗೊಳಿಸಬೇಕು ಹಾಗೂ ಮತ್ತಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕ ಉಮೇಶ ಕುಸುಗಲ್, ನಿಗಮದ ವ್ಯಾಪ್ತಿಯಲ್ಲಿನ 26 ಸಾವಿರ ನೌಕರರಿಗೆ ಬಾಕಿ ಇರುವ ವೇತನ, ತುಟ್ಟಿಭತ್ಯೆ ಬಾಕಿಗಳನ್ನು ಜೂನ್‌ನಿಂದ ಮೂರು ಕಂತುಗಳಲ್ಲಿ ವಿತರಣೆ ಮಾಡುವುದಾಗಿ ಹಾಗೂ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಪರಿಶೀಲಿಸುವುದಾಗಿ ಭರವಸೆ ನೀಡಿದರು.
ಮಹಾಮಂಡಳದ ಎನ್.ಆರ್. ಕಾನಗೋ, ಪ್ರಕಾಶ ಮೂರ್ತಿ, ಸಿ.ಎ. ಕೋಟಿ, ಸಿ.ಎನ್. ಹಿರೇಮಠ, ಸುಭಾಷ ಪಾಟೀಲ, ವೆಂಕಟೇಶ ದಾಸರ, ಎಂ.ಎಸ್. ಪವಾರ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.