ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಮಹದಾಯಿ: ಮೋದಿ ಮಧ್ಯಸ್ಥಿಕೆ ವಹಿಸಲಿ

Lingaraj Badiger
Updated On : 24 May 2014, 11:36 am

ಕನ್ನಡಪ್ರಭ ವಾರ್ತೆ, ಧಾರವಾಡ, ಮೇ 23
ಮಹದಾಯಿ ನದಿ ನೀರಿನ ಹಂಚಿಕೆ ಕುರಿತು ನಿಯೋಜಿತ ಪ್ರಧಾನಿ ಮಧ್ಯಸ್ಥಿತಿಕೆ ವಹಿಸಿ ಸಮಸ್ಯೆ ಪರಿಹರಿಸಬೇಕು ಎಂದು ಇಲ್ಲಿಯ ಕರ್ನಾಟಕ ರೈತ ಸೇನಾ ಕಾರ್ಯಕರ್ತರು ಜಿಲ್ಲಾಧಿಕಾರಿ ಮೂಲಕ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು.
ಮುಂಬೈ ಕರ್ನಾಟಕ ಭಾಗದ ಜಿಲ್ಲೆಗಳಾದ ಧಾರವಾಡ, ಬೆಳಗಾವಿ, ಗದಗ, ಬಾಗಲಕೋಟಿ ಹಾಗೂ 13 ಪಟ್ಟಣ ಪ್ರದೇಶಗಳ ನಾಗರಿಕರ ಮತ್ತು ರೈತರ ದಶಕಗಳ ಹೋರಾಟದ ಭಾಗವಾದ ಮಹಾದಾಯಿ ನದಿಯನ್ನು ಮಲಪ್ರಭೆಗೆ ಜೋಡಿಸಬೇಕೆಂಬ ಬೇಡಿಕೆ ಬಹುದಿನಗಳದ್ದು. ಹಿಂದಿನ ಸರ್ಕಾರ ಈ ಸಮಸ್ಯೆಗಾಗಿ ನ್ಯಾಯಾಧೀಕರಣ ರಚಿಸಿ, ಆ ನಂತರ ನ್ಯಾಯಾಧೀಕರಣದ ಎದುರು ಸರಿಯಾದ ವಾದ ಮಂಡನೆ ಮಾಡದೆ ಹಾಗೂ ಸರಿಯಾದ ಮಾಹಿತಿ ನೀಡದೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.
2002ರಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಈ ಯೋಜನೆಗೆ ಅನುಮೋದನೆ ನೀಡಿದ್ದರು. ಆದರೆ ಸ್ಥಳೀಯ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಯೋಜನೆ ಜಾರಿಗೆ ತರುವಲ್ಲಿ ವಿಳಂಬಗೊಳಿಸಿ ಯೋಜನೆಯನ್ನು ಕಾನೂನಿನ ತೊಡಕಿನಲ್ಲಿ ಸಿಲುಕುವಂತೆ ಮಾಡಿ ಮೋಸ ಮಾಡಿದ್ದಾರೆ ಎಂದು ದೂರಿದರು.
ಆದಕಾರಣ ರೈತರ ಬಹುದಿನಗಳ ಬೇಡಿಕೆ ಪರಿಶೀಲಿಸಿ ಈ ಭಾಗದ ಜನರಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಮನವಿ ಮೂಲಕ ಆಗ್ರಹಿಸಿದರು. ರೈತ ಸೇನಾ ಅಧ್ಯಕ್ಷ ವೀರೇಶ ಸೊಬರದಮಠ, ಕಾರ್ಯದರ್ಶಿ ಶಂಕರಪ್ಪ ಅಂಬಲಿ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement