ಧಾರವಾಡ: ಈಜುಗೊಳಕ್ಕೆ ರು. 1 ಕೋಟಿ
ಕನ್ನಡಪ್ರಭ ವಾರ್ತೆ, ಧಾರವಾಡ, ಮೇ 25
ಧಾರವಾಡದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಈಜುಗೊಳ ನಿರ್ಮಾಣಕ್ಕೆ ಪಾಲಿಕೆಯ ರು. 100 ಕೋಟಿ ಅನುದಾನದಲ್ಲಿ ರು. 1 ಕೋಟಿ ಈಗಾಗಲೇ ತೆಗೆದಿರಿಸಲಾಗಿದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
ಕಳೆದ ಮೂರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಇಲ್ಲಿನ ಈಜುಗೊಳಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಧಾರವಾಡದಲ್ಲಿ ಈಗಿರುವ ಈಜುಗೊಳ ಬರೀ 33 ಮೀಟರ್ ಉದ್ದವಿದ್ದು, ಕನಿಷ್ಠ 50 ಮೀಟರ್ ಉದ್ದದ ಈಜುಗೊಳ ನಿರ್ಮಾಣ ಮಾಡಬೇಕಿದೆ. ಬರುವ ದಿನಗಳಲ್ಲಿ ನೂತನ ಯೋಜನೆ ಮೂಲಕ ಗುಣಮಟ್ಟದ ಈಜುಗೊಳ ನಿರ್ಮಾಣ ಮಾಡಲಾಗುವುದು ಎಂದರು.
ಶಾಸಕ ವಿನಯ ಕುಲಕರ್ಣಿ ಮಾತನಾಡಿ, ಪ್ರಸ್ತುತ ಈಜುಗೊಳ ಸುಮಾರು 40 ವರ್ಷದ ಹಳೆಯದಾಗಿದ್ದು ಇನ್ನಷ್ಟು ಸುಧಾರಣೆಯಾಗಬೇಕಿದೆ. ಪ್ರಸ್ತುತ ತಾತ್ಕಾಲಿಕವಾಗಿ ಆರಂಭವಾಗಿದ್ದು, ಇನ್ನಷ್ಟು ಸೌಲಭ್ಯಗಳ ಮೂಲಕ ನವೀಕರಣವಾಗಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಇನ್ನಷ್ಟು ಅನುದಾನ ತರಲು ಹೆಚ್ಚಿನ ಪ್ರಯತ್ನ ಮಾಡುತ್ತೇನೆಂದು ಭರವಸೆ ನೀಡಿದರು.
ಹು-ಧಾ ಪಾಲಿಕೆ ವ್ಯಾಪ್ತಿ ಪ್ರದೇಶದಲ್ಲಿ ಸ್ವಚ್ಛತೆ ಇಲ್ಲದಾಗಿದ್ದು, ಸಾರ್ವಜನಿಕ ಸ್ಥಳಗಳು ರೋಗಗಳ ಕೇಂದ್ರಗಳಾಗುತ್ತಿವೆ. ಕಸದ ಗುತ್ತಿಗೆ ಪಡೆದ ಗುತ್ತಿಗೆದಾರರು ಪಾಲಿಕೆ ಸದಸ್ಯರೊಂದಿಗೆ ಹೊಂದಾಣಿಕೆ ಮಾಡಿಕೊಂಡವರಂತೆ ಮಾತನಾಡುತ್ತಾರೆ. ಪಾಲಿಕೆ ಅಧಿಕಾರಿಗಳು ಹಾಗೂ ಸದಸ್ಯರು ಗುತ್ತಿಗೆದಾರರ ಮೇಲೆ ಕ್ರಮ ಕೈಗೊಂಡು ಸ್ವಚ್ಛತೆ ಕಾಪಾಡಬೇಕೆಂದು ಹೇಳಿದರು.
ಪಾಲಿಕೆ ಸದಸ್ಯ ಶಿವಾನಂದ ಮುತ್ತಣ್ಣವರ ಮಾತನಾಡಿ, ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿರುವ ಈಜುಗೊಳ ಲಾಭಕ್ಕಾಗಿ ಅಲ್ಲ. ಶೇ. 60 ನಷ್ಟದೊಂದಿಗೆ ಈಜುಗೊಳಗಳು ನಡೆಯುತ್ತಿದ್ದು, ಸಿಬ್ಬಂದಿ ಸಾರ್ವಜನಿಕರಿಂದ ಸರಿಯಾಗಿ ಹಣ ಪಡೆದು ಪಾಲಿಕೆಯ ನಷ್ಟದ ಪ್ರಮಾಣವನ್ನು ಕಡಿಮೆ ಮಾಡಬೇಕು. ಆರೋಗ್ಯ ಕೇಂದ್ರವಾಗಿರುವ ಈಜುಗೊಳವನ್ನು ಸಾರ್ವಜನಿಕರು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಮೇಯರ್ ಶಿವು ಹಿರೇಮಠ, ಧಾರವಾಡ ಜನತೆಯ, ಶಾಸಕರ ಒತ್ತಾಯದ ಮೇರೆಗೆ ಬೇಸಿಗೆ ಮುಗಿಯುವ ಒಳಗೆ ತರಾತುರಿಯಲ್ಲಿ ಈಜುಗೊಳ ಆರಂಭಿಸಲಾಗಿದೆ. ರು. 60 ಲಕ್ಷ ವೆಚ್ಚದಲ್ಲಿ ನವೀಕರ ಮಾಡುವ ಚಿಂತನೆ ಇದ್ದರೂ, ರು. 6 ಲಕ್ಷದೊಳಗೆ ಜಲಮಂಡಳಿ, ಹೆಸ್ಕಾಂ ಹಾಗೂ ಪಾಲಿಕೆ ಸಿಬ್ಬಂದಿ ಸಹಕಾರದಿಂದ ಆರಂಭಿಸಲಾಗಿದೆ. ಬಹಳಷ್ಟು ಜನರು ಮದ್ಯ ಸೇವಿಸಿ ಈಜುಗೊಳಕ್ಕೆ ಬರುತ್ತಾರೆಂಬ ದೂರಿದ್ದು, ಈ ಹಿನ್ನೆಲೆಯಲ್ಲಿ ಮದ್ಯ ಸೇವನೆ ಗುರುತಿಸುವ ಮಶಿನ್ ತರುವ ಚಿಂತನೆ ಇದೆ. ಲೈಫ್ ಗಾರ್ಡ್ ಹಾಗೂ ಮೇಲ್ವಿಚಾರಕರು ಈಜುಗೊಳ ನಿರ್ವಹಣೆ ಮಾಡಲಿದ್ದಾರೆ ಎಂದರು.
ಧಾರವಾಡದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಈಜುಗೊಳ ನಿರ್ಮಾಣಕ್ಕೆ ಬರೀ ರು. 1 ಕೋಟಿ ಸಾಲೋದಿಲ್ಲ. ಬದಲಾಗಿ ಸರ್ಕಾರ ಕನಿಷ್ಟ 3 ಕೋಟಿ ನೀಡಬೇಕೆಂದು ಮನವಿ ಮಾಡಿದರು.
ಉಪ ಮೇಯರ್ ಮಂಜುನಾಳ ಅಕ್ಕೂರ, ಪಾಲಿಕೆ ಸದಸ್ಯರಾದ ಶಂಕರ ಶೆಳಕೆ, ವಿಜಯಾನಂದ ಶೆಟ್ಟಿ, ನಿರ್ಮಲಾ ಜವಳಿ, ಈಶ್ವರ ಸಾಣಿಕೊಪ್ಪ, ಮೋಹನ ರಾಮದುರ್ಗ ಇದ್ದರು.