ಮಕ್ಕಳ ರಕ್ಷಣಾ ಘಟಕದಿಂದ ಬಾಲ್ಯ ವಿವಾಹ ತಡೆ
ಧಾರವಾಡ: ಕಲಘಟಗಿ ತಾಲೂಕಿನ ಸೋಮನಕೊಪ್ಪ ಗ್ರಾಮದ 16 ವರ್ಷದ ಅಪ್ರಾಪ್ತ ಬಾಲಕಿ ಮದುವೆಯನ್ನು ಮಕ್ಕಳ ರಕ್ಷಣಾ ಘಟಕದ ಸಹಾಯದಿಂದ ತಡೆಯಲಾಗಿದೆ.
ಅದೇ ಗ್ರಾಮದ ಲಕ್ಷ್ಮವ್ವ ಫಕ್ಕೀರಪ್ಪ ಶಿರೂರ ಎಂಬವರ ಮಗನೊಂದಿಗೆ (26) ಮದುವೆ ನಿಶ್ಚಯಿಸಲಾಗಿತ್ತು. ಈ ಮಾಹಿತಿಯನ್ನು ಅರಿತ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮಾಹಿತಿಯನ್ವಯ ಮೇ 25ರಂದು ಕಲಘಟಗಿಯ ಕಲ್ಯಾಣ ಕಿರಣ ಸಂಸ್ಥೆಯ ಮಕ್ಕಳ ಸಹಾಯವಾಣಿ ಸಿಬ್ಬಂದಿಯವರಿಂದ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಂದ ಬಾಲಕಿಯ ಬಾಲ್ಯ ವಿವಾಹ ನಡೆಯುತ್ತಿರುವುದನ್ನು ಖಚಿತಪಡಿಸಿಕೊಂಡು ವಿವಾಹವನ್ನು ತಡೆಹಿಡಿಯಲಾಯಿತು. ಎರಡು ಕುಟುಂಬಸ್ಥರಿಂದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಬಾಲಕಿಗೆ 18 ವರ್ಷ ವಯಸ್ಸಾಗುವವರೆಗೂ ಮದುವೆ ಮಾಡುವುದಿಲ್ಲವೆಂದು ಮುಚ್ಚಳಿಕೆ ಪತ್ರ ಬರೆಯಿಸಿಕೊಳ್ಳಲಾಯಿತು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಮೇಘಾ ಮೋಖಿ, ನಿಂಗಪ್ಪ ಮಡಿವಾಳರ, ಶ್ವೇತಾ ಕಿಲ್ಲೇದಾರ ಮತ್ತು ಕಲಘಟಗಿಯ ಕಲ್ಯಾಣ ಕಿರಣ ಸಂಸ್ಥೆಯ ಮಕ್ಕಳ ಸಹಾಯವಾಣಿ ಸಿಬ್ಬಂದಿ ಇದ್ದರು.