ಶೀಘ್ರ ಜೀತ ಪದ್ಧತಿ ಸಮೀಕ್ಷೆ: ಶ್ರೀನಿವಾಸ
ಧಾರವಾಡ: ರಾಜ್ಯದಲ್ಲಿ 1976ರ ಹಿಂದೆಯೇ ಜೀತಪದ್ಧತಿ ನಿರ್ಮೂಲನೆಗೆ ಆದೇಶ ಹೊರಡಿಸಿದ್ದರೂ ಅಲ್ಲಲ್ಲಿ ಈ ಪದ್ಧತಿ ಉಳಿದಿದೆ ಎಂದು ಅಪರ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ ಹೇಳಿದರು.
ಜಿಲ್ಲೆಯಲ್ಲಿ ಜೀತಪದ್ಧತಿ ಸಂಪೂರ್ಣ ನಿರ್ಮೂಲನೆಗಾಗಿ ಅಧಿಕಾರಿ, ಸಿಬ್ಬಂದಿ ಅಣಿಗೊಳಿಸುವ ದೃಷ್ಟಿಯಿಂದ ಶನಿವಾರ ನಗರದ ಆಲೂರು ವೆಂಕಟರಾವ್ ಭವನದಲ್ಲಿ ನಡೆದ ಜೀತ ಪದ್ಧತಿ ಕಾಯ್ದೆ ಅನುಷ್ಠಾನ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಈ ಸಂಬಂಧ ಸುಪ್ರೀಂಕೋರ್ಟ್ ಸಹ ಪ್ರತಿ 3 ವರ್ಷಕ್ಕೊಮ್ಮೆ ಜೀತ ಪದ್ಧತಿ ಸ್ಥಿತಿಗತಿಯನ್ನು ಪರಿಶೀಲಿಸುವ ಸೂಚನೆ ನೀಡಿದ್ದರಿಂದ, ಸರ್ಕಾರ ಈ ಕಾರ್ಯಕ್ಕೆ ಆದ್ಯತೆ ನೀಡಿದೆ. ಈ ಕಾರಣಕ್ಕಾಗಿ ಜಿಲ್ಲೆ, ತಾಲೂಕು ಹಾಗೂ ಗ್ರಾಪಂ ಹಂತದಲ್ಲಿ ಜಾಗೃತಿ ತಂಡಗಳನ್ನು ರಚಿಸಲಾಗಿದೆ. ಈ ತರಬೇತಿ ಶಿಬಿರದಲ್ಲಿ ನೀಡಲಾಗುವ ಮಾಹಿತಿಯನ್ವಯ ಇಷ್ಟರಲ್ಲೇ ತಂಡಗಳು ಜಿಲ್ಲಾದ್ಯಂತ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗುವುದು. ಸಮೀಕ್ಷೆ ಕಾಲಕ್ಕೆ ಜೀತಪದ್ಧತಿಯಲ್ಲಿ ಇನ್ನೂ ಕೆಲವರು ಇರುವುದು ಪತ್ತೆಯಾದರೆ ಅವರ ಪುನರ್ವಸತಿಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು. ಸಮೀಕ್ಷೆ ಕಾರ್ಯವನ್ನು ನಿರ್ವಹಿಸುತ್ತಿರುವ ಜೀವಿಕ (ಜೀತ ವಿಮುಕ್ತಿ ಕರ್ನಾಟಕ) ಸಂಸ್ಥೆ ಸಂಚಾಲಕ ಕಿರಣ ಕಮಲ್ ಪ್ರಸಾದ್ ಮಾತನಾಡಿ, ಜೀತ ಪದ್ಧತಿ ನಿರ್ಮೂಲನೆ ಕಾನೂನಿನಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ನ್ಯಾಯಿಕ ದಂಡಾಧಿಕಾರಿಗಳಿಗಿರುವ ಅಧಿಕಾರವನ್ನು ಸರ್ಕಾರ ನೀಡಿದೆ. ಜೀತದಲ್ಲಿದ್ದವರನ್ನು ಜಿಲ್ಲಾಧಿಕಾರಿಗಳು ಬಿಡುಗಡೆಗೊಳಿಸಿದರೆ, ಜಿಪಂ ಅವರ ಪುನರ್ವಸತಿಗೆ ಕ್ರಮ ಕೈಗೊಳ್ಳಲು ಹಲವು ಯೋಜನೆಗಳನ್ನು ಹೊಂದಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗ್ರಾಮೀಣಾಭಿವೃದ್ಧಿ ಕೋಶದ ಯೋಜನೆ ನಿರ್ದೇಶಕ ಎಂ.ಜಿ. ಕುಲಕರ್ಣಿ ಮಾತನಾಡಿ, ಈಗಿರುವ ಕಾನೂನಿಗೆ ತಿದ್ದುಪಡಿ ತರಲಾಗುತ್ತಿದೆ ಎಂದರು. ಜೀವಿಕ ಸಂಸ್ಥೆಯ ಬಸವರಾಜ ಇದ್ದರು.