ಸ್ವಚ್ಛ ಸುಂದರ ನಗರ ನಿರ್ಮಿಸೋಣ: ಶಿವು ಹಿರೇಮಠ
ಹುಬ್ಬಳ್ಳಿ: ನಾಗರಿಕರು ನೈರ್ಮಲೀಕರಣಕ್ಕೆ ಸಹಕರಿಸಿದಲ್ಲೆ ಸ್ವಚ್ಛ ಮತ್ತು ಸುಂದರ ಮಹಾನಗರ ನಿರ್ಮಿಸಬಹುದು ಎಂದು ಮೇಯರ್ ಶಿವು ಹಿರೇಮಠ ಹೇಳಿದರು.
ಇತ್ತೀಚೆಗೆ ಜರುಗಿದ ಇಲ್ಲಿಯ ವಿದ್ಯಾನಗರದ ಕನಕದಾಸ ಶಿಕ್ಷಣ ಸಮಿತಿಯ ಸ್ನಾತಕೋತ್ತರ ಶಿಕ್ಷಣ ಮತ್ತು ವಾಣಿಜ್ಯ ವಿಭಾಗದ ವಾರ್ಷಿಕ ದಿನಾಚರಣೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸುಂದರ ಪರಿಸರ ನಿರ್ಮಾಣ ಪ್ರತಿಯೊಬ್ಬರ ಕರ್ತವ್ಯ ಎಂದರು. ಅತಿಥಿಯಾಗಿದ್ದ ಡಾ. ಸಿ.ಎಂ. ಕಡಕೋಳ ಮಾತನಾಡಿ, ವಿದ್ಯಾರ್ಥಿಗಳು ಸಂಶೋಧನಾ ಪ್ರವೃತ್ತಿ ಅಳವಡಿಸಿಕೊಳ್ಳಬೇಕು ಹಾಗೂ ಮಾರುಕಟ್ಟೆಯಲ್ಲಿರುವ ವಿಫುಲ ಅವಕಾಶಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ವಿಜ್ಞಾನ ಮತ್ತು ತಾಂತ್ರಿಕ ಜಗತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ಹೆಚ್ಚಿನ ಶಿಕ್ಷಣ ಪಡೆಯುವ ಮೂಲಕ ಸಮಾಜ ಗುರುತಿಸುವಂತೆ ಬೆಳೆಯಬೇಕೆಂದು ಶಿಕ್ಷಣ ಸಮಿತಿ ಕಾರ್ಯದರ್ಶಿ ರವಿ ದಂಡಿನ ತಿಳಿಸಿದರು. ಸಮಿತಿ ಉಪಾಧ್ಯಕ್ಷ ಶಾಂತಣ್ಣ ಕಡಿವಾಲ ಅಧ್ಯಕ್ಷತೆ ವಹಿಸಿದ್ದರು. ಪ್ರಾ. ಸಂದೀಪ ಬೂದಿಹಾಳ, ಜೆ.ಎಂ. ಚರಂತಿಮಠ, ಡಾ. ಎಂ.ಆರ್. ಭಟ್ ಉಪಸ್ಥಿತರಿದ್ದರು. ಡಾ. ಎಚ್.ವಿ. ಬೆಳಗಲಿ ಸ್ವಾಗತಿಸಿದರು. ಡಾ. ರೇಖಾ ಕೋಟೂರ ನಿರೂಪಿಸಿದರು. ಪ್ರೊ. ಜಿ.ಎಂ. ಸುಣಗಾರ ವಂದಿಸಿದರು.