ಕೃಷಿ, ರೈತರಿಗೆ ತೊಂದರೆ ಆಗದಂತೆ ಅಭಿವೃದ್ಧಿ: ಪೇಜಾವರ ಶ್ರೀ ಸಲಹೆ
ಧಾರವಾಡ: ನೂತನ ಹಾಗೂ ಭರವಸೆಯ ಕೇಂದ್ರ ಸರ್ಕಾರ ದೇಶದ ಆಡಳಿತದ ಚುಕ್ಕಾಣಿ ಹಿಡಿದಿದ್ದು, ಕೃಷಿ ಕ್ಷೇತ್ರಕ್ಕೆ ಹಾಗೂ ರೈತರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಪ್ರಧಾನಿ ನರೇಂದ್ರ ಮೋದಿ ಅಭಿವೃದ್ಧಿ ಕೈಗೊಳ್ಳಲಿ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದರು ಸಲಹೆ ನೀಡಿದರು.
ಧಾರವಾಡದ ಜೆಎಸ್ಸೆಸ್ ಕಾಲೇಜು ಆವರಣದಲ್ಲಿ ಗುರುವಾರ 'ಸನ್ನಿಧಿ ಕಲಾಕ್ಷೇತ್ರ' ಉದ್ಘಾಟಿಸಿದ ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಉದ್ದಿಮೆ, ತಂತ್ರಜ್ಞಾನ ಹೀಗೆ ಹಲವು ಕ್ಷೇತ್ರಗಳಲ್ಲಿ ದೇಶ ಎಷ್ಟೇ ಪ್ರಗತಿ ಹೊಂದಿದರೂ ಕೃಷಿ ಹಾಗೂ ರೈತರಿಗೆ ಅಭಿವೃದ್ಧಿಯ ಹೆಸರಿನಲ್ಲಿ ಪೆಟ್ಟು ಬೀಳಬಾರದು. ರೈತರ ಆರ್ಥಿಕ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ ನೂತನ ಕೇಂದ್ರ ಸರ್ಕಾರ ಎಚ್ಚರಿಕೆಯಿಂದ ಆಡಳಿತ ನಡೆಸಬೇಕು. ಕೃಷಿ ಪ್ರಧಾನವಾಗಿರುವ ಭಾರತದಲ್ಲಿ ಕೃಷಿಗೆ ಹೆಚ್ಚಿನ ಮಾನ್ಯತೆ ದೊರೆಯುವಂತಾಗಬೇಕು ಎಂದು ತಿಳಿಸಿದರು.
ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾಗಬೇಕು ಎನ್ನುವುದು ಬಹು ದಿನಗಳ ಬೇಡಿಕೆ. ಅದೇ ರೀತಿಯಲ್ಲಿ ಕೇಂದ್ರ ಸರ್ಕಾರ ಗೋ ಮಾತೆಯನ್ನು ರಕ್ಷಣೆ ಮಾಡಲು ಗೋ ಹತ್ಯೆ ಕಾಯ್ದೆ ಜಾರಿಗೆ ತಂದು ಗೋವುಗಳನ್ನು ರಕ್ಷಣೆ ಮಾಡಲಿದೆ ಎಂಬ ನಂಬಿಕೆ ತಮಗಿದೆ. ಗಂಗಾ ಪವಿತ್ರ ನದಿಯಾಗಿದ್ದು, ಅದನ್ನು ಸ್ವಚ್ಛಗೊಳಿಸಬೇಕೆಂಬುದು ಪ್ರತಿಯೊಬ್ಬರ ಆಶಯ. ಗಂಗಾ ನದಿಯನ್ನು ಶೀಘ್ರದಲ್ಲಿಯೇ ಸ್ವಚ್ಛಗೊಳಿಸುವ ಮೂಲಕ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಸಚಿವೆ ಉಮಾಭಾರತಿ ಕ್ರಮ ಕೈಗೊಳ್ಳಬೇಕಿದೆ ಎಂದರು.
ಒಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮೇಲೆ ದೇಶದ ಸಾಕಷ್ಟು ನಿರೀಕ್ಷೆಗಳಿದ್ದು, ಅವುಗಳನ್ನು ಈಡೇರಿಸುವ ಶಕ್ತಿ ಮೋದಿ ಹಾಗೂ ಅವರ ತಂಡಕ್ಕಿದೆ ಎಂದು ಸ್ವಾಮೀಜಿ ವಿಶ್ವಾಸ ವ್ಯಕ್ತಪಡಿಸಿದರು.