ಡಾ. ಹಂಗರಗಾಗೆ ಹೆಚ್ಚುವರಿ ಜವಾಬ್ದಾರಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮೇ 30
ಹುಬ್ಬಳ್ಳಿಯ ಪ್ರತಿಷ್ಠಿತ ಕಿಮ್ಸ್ಗೆ ಹೆಚ್ಚುವರಿ ನಿರ್ದೇಶಕರಾಗಿ ಡಾ. ಯು.ಎಸ್. ಹಂಗರಗಾ ಅವರನ್ನು ನೇಮಕಗೊಳಿಸಿ ಸರ್ಕಾರ ಆದೇಶ ಹೊರಡಿಸಿದ್ದು, ಹಂಗರಗಾ ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ. ಇದರ ಬೆನ್ನಲ್ಲೇ ರಾಜಕಾರಣಿಗಳೂ ಬೆಸ್ತು ಬೀಳುವ ಮಟ್ಟಿಗೆ ಕಾಲೆಳೆಯುವ ರಾಜಕಾರಣವಿರುವ ಕಿಮ್ಸ್ನ್ನು ಹಂಗರಗಾ ಹೇಗೆ ನಿಭಾಯಿಸುತ್ತಾರೆ ಎನ್ನುವ ಪ್ರಶ್ನೆಯೂ ಎದುರಾಗಿದೆ.
ಹೌದು, ಕಿಮ್ಸ್ ಒಂದಲ್ಲಾ ಒಂದು ಅವಾಂತರದಿಂದ ಸುದ್ದಿಯಲ್ಲಿರುತ್ತಾ ಬಂದಿದೆ. ಇಲ್ಲಿ ನಿರ್ದೇಶಕರ ಖುರ್ಚಿಯನ್ನೇ ಅಲ್ಲಾಡಿಸುವ ರಾಜಕೀಯ ಬಲ ಹೊಂದಿರುವ ಅಧಿಕಾರಿಗಳಿದ್ದಾರೆ. ಹೀಗಾಗಿಯೇ ಕಿಮ್ಸ್ನಲ್ಲಿ, ಅವಾಂತರ ಕಚ್ಚಾಟ, ಆರೋಪ-ಪ್ರತ್ಯಾರೋಪ, ಹಗರಣ ಮಾಮೂಲಿ ಎನ್ನುವಂತಾಗಿದೆ. ಇಂಥ ವಾತಾವರಣದ ಮಧ್ಯೆಯೂ ಇದೀಗ ನಿವೃತ್ತಿ ಹೊಂದಿದ ಡಾ. ವಸಂತಾ ಕಾಮತ್ ಕಿಮ್ಸ್ ಉತ್ತಮ ನಿರ್ವಹಣೆ ಮಾಡಿದ್ದರು. ಲಾಬಿ, ರಾಜಕಾರಣ, ವಸೂಲಿ ಬಾಜಿ ಮಾಡುವ ಅಧಿಕಾರಿಗಳನ್ನು ಪಕ್ಕಕ್ಕೆ ಸರಿಸಿದ್ದರು. ಯಾರ ಲಾಬಿಗೂ ಮಣೆಯದೇ ಸ್ವಚ್ಛ, ಸುಂದರ, ಭ್ರಷ್ಟಾಚಾರ ರಹಿತ ಆಡಳಿತ ನಿರ್ವಹಣೆ ಮಾಡಿದ್ದರು. ಅದರಲ್ಲೂ ಪ್ರಮುಖವಾಗಿ ಕಿಮ್ಸ್ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸಕಾಲಕ್ಕೆ ಸೂಕ್ತ ಚಿಕಿತ್ಸೆ ನೀಡುವ ವ್ಯವಸ್ಥೆ ಕಲ್ಪಿಸಿದ್ದರು. ತನ್ಮೂಲಕ ಒಳ್ಳೆಯ ಅಧಿಕಾರಿ ಎನ್ನುವ ಹೆಸರು ಗಿಟ್ಟಿಸಿಕೊಂಡಿದ್ದರು.
ಇದೀಗ ಹೆಚ್ಚುವರಿ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿರುವ ಡಾ. ಯು.ಎಸ್. ಹಂಗರಗಾ ಕಿಮ್ಸ್ನ ಪ್ರಾಂಶುಪಾಲರಾಗಿ ಇಲ್ಲಿನ ವ್ಯವಸ್ಥೆಯ ಆಳ ಅಗಲ ಬಲ್ಲವರಾಗಿದ್ದಾರೆ. ಪ್ರಮುಖವಾಗಿ ಅಧಿಕಾರಕ್ಕೆ ಅಡ್ಡಿಯಾಗುವವರು, ವಸೂಲಿ ಬಾಜಿ ಮಾಡುವವರ್ಯಾರು ಎಂಬೆಲ್ಲ ಸಂಗತಿಗಳನ್ನು ಹತ್ತಿರದಿಂದ ಬಲ್ಲವರಾಗಿದ್ದಾರೆ. ಇಂಥವರನ್ನು ಪಕ್ಕಕ್ಕೆ ಸರಿಸಿದ್ದಲ್ಲಿ ಮಾತ್ರ ಡಾ. ಹಂಗರಗಾ ಉತ್ತಮ ಕೆಲಸ ನಿರ್ವಹಿಸಲು ಸಾಧ್ಯ. ಪ್ರಮುಖವಾಗಿ ಕಿಮ್ಸ್ ಅಭಿವೃದ್ಧಿಯತ್ತ ಕೊಂಡೊಯ್ಯಲು ಸಾಧ್ಯ.
ಸಂಘಟನೆಗಳ ಬಳಕೆ: ಕಿಮ್ಸ್ ನಿರ್ದೇಶಕರು ತಮ್ಮ ಮೂಗಿನ ನೇರಕ್ಕೆ ಕೆಲಸ ಮಾಡಿಲ್ಲ ಎಂದಾದರೆ ಕೆಲ ಅಧಿಕಾರಿಗಳು ವಿವಿಧ ಸಾಮಾಜಿಕ ಸಂಘಟನೆಗಳನ್ನು ಬಳಸಿಕೊಂಡು ನಿರ್ದೇಶಕರ ವಿರುದ್ಧ ಪ್ರತಿಭಟನೆ ಮಾಡಿಸುವುದು ಇಲ್ಲಿ ಮಾಮೂಲಿ ಎಂಬಂತಾಗಿದೆ. ಕೆಲಸವಿರದ, ಅಧಿಕಾರಿಗಳನ್ನು ಹೆದರಿಸುವುದೇ ಕಾಯಕ ಮಾಡಿಕೊಂಡಿರುವ ಸಂಘಟನೆಗಳು ಹಣಕ್ಕಾಗಿ ಬಲಿ ಬಿದ್ದು ಹಾದಿ ತಪ್ಪುತ್ತಿವೆ. ಇಂಥ ದಾರಿ ತಪ್ಪಿದ ಸಂಘಟನೆಗಳಿಗೆ ಬೆಲೆ ಕೊಟ್ಟಿದ್ದೇ ಆದಲ್ಲಿ ಕಿಮ್ಸ್ ನಿರ್ವಹಣೆ ಅಸಾಧ್ಯದ ಮಾತು. ಅನಗತ್ಯ ಸಂಗತಿಗಳ ಬಗ್ಗೆ ಅಥವಾ ಹಣಕ್ಕಾಗಿ ಪ್ರತಿಭಟನೆ ನಡೆಸುವ ಸಂಘಟನೆಗಳಿಗೆ ಸೊಪ್ಪು ಹಾಕಬಾರದು. ಇಲ್ಲದೇ ಹೋದ ಪಕ್ಷದಲ್ಲಿ ಕಿಮ್ಸ್ ದಾರಿ ತಪ್ಪುವುದು ಖಚಿತ.
ಗುತ್ತಿಗೆದಾರರ ಲಾಬಿ: ಇದರೊಟ್ಟಿಗೆ ಕಿಮ್ಸ್ನಲ್ಲಿ ಗುತ್ತಿಗೆದಾರರ ಲಾಬಿಯೂ ಜೋರಾಗಿದೆ. ಕಿಮ್ಸ್ ನಿರ್ದೇಶಕರ ಮೇಲೆ ಒತ್ತಡ ಹೇರಿ ಗುತ್ತಿಗೆ ಪಡೆದುಕೊಳ್ಳುವುದು, ಅಧಿಕಾರಿಗಳು ತಮಗೆ ಬೇಕಾದವರಿಗೆ ಗುತ್ತಿಗೆ ನೀಡುವಂತೆ ನಿರ್ದೇಶಕರ ಮೇಲೆ ಒತ್ತಡ ತರುವುದು ಮಾಡುತ್ತಾರೆ. ಇಂಥವರಿಗೆ ಮಣೆ ಹಾಕಿದ್ದರಿಂದಲೇ ಕೆಲ ನಿರ್ದೇಶಕರು ಭ್ರಷ್ಟಾಚಾರದ ಆರೋಪಕ್ಕೆ ಕಾರಣರಾಗಿದ್ದರು. ಹೀಗಾಗಿ ಡಾ. ಹಂಗರಗಾ ಗುತ್ತಿಗೆದಾರರನ್ನು ಸನೀಹಕ್ಕೆ ಬಿಟ್ಟುಕೊಳ್ಳದೆ, ಪಾರದರ್ಶಕವಾಗಿ ಗುತ್ತಿಗೆ ನೀಡುವ ಕೆಲಸ ಮಾಡಬೇಕಿದೆ.
ಆಸ್ಪತ್ರೆ ನಿರ್ವಹಣೆ: ಪ್ರಮುಖವಾಗಿ ಕಿಮ್ಸ್ ಆಸ್ಪತ್ರೆಗೆ ಬರುವವರು ಬಡಬಗ್ಗರು. ಐಶಾರಾಮಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಹಣ ಖರ್ಚು ಮಾಡಲಾಗದವರು ಕಿಮ್ಸ್ಗೆ ಬರುತ್ತಾರೆ. ಬಡವರು ಎನ್ನುವ ಕಾರಣಕ್ಕೆ ರೋಗಿಯನ್ನು ಉಪಚರಿಸುವಲ್ಲಿ ನಿಷ್ಕಾಳಜಿ ತೋರಬಾರದು. ರೋಗಿಗಳನ್ನು ಕಡೆಗಣಿಸಿರುವುದರಿಂದಲೇ ರೋಗಿಗಳ ಸಂಬಂಧಿಕರು ಕಿಮ್ಸ್ ಆಸ್ಪತ್ರೆಯಲ್ಲಿ ದಾಂಧಲೆ ಮಾಡಿರುವ ಸಾಕಷ್ಟು ಉದಾಹರಣೆಗಳಿವೆ. ರೋಗಿಗಳ ಆರೈಕೆಯ ಜತೆಗೆ ಅವರನ್ನು ಪ್ರೀತಿಯಿಂದ ಕಾಣುವ ಗುಣಧರ್ಮ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ವೈದ್ಯರಿಗೆ ತರಬೇತಿ ಮುಖೇನು ತಿಳಿ ಹೇಳುವ ಕೆಲಸವೂ ಆಗಬೇಕಿದೆ. ಇದರೊಟ್ಟಿಗೆ ಕಿಮ್ಸ್ ಆಸ್ಪತ್ರೆಯ ಸ್ವಚ್ಛತೆ ದೊಡ್ಡ ಸವಾಲಾಗಿದೆ. ಆಸ್ಪತ್ರೆಯ ಆವರಣ ಸ್ವಚ್ಛವಾಗಿಟ್ಟುಕೊಳ್ಳುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ಜತೆಗೆ ಅತ್ಯಾಧುನಿಕ ಚಿಕಿತ್ಸಾ ಉಪಕರಣಗಳು, ಹೆಚ್ಚಿನ ವಾರ್ಡ್, ಹೊಸ ಕಟ್ಟಡ, ಖಾಲಿ ಇರುವ ಹುದ್ದೆಗಳ ಭರ್ತಿಯಂತಹ ಸಾಕಷ್ಟು ಜವಾಬ್ದಾರಿಗಳು ಡಾ. ಹಂಗರಗಾ ಹೆಗಲೇರಿದೆ. ಇದೆಲ್ಲವನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ಡಾ. ಹಂಗರಗಾ ಯಶಸ್ವಿಯಾಗುವರೋ ಎಂಬುದನ್ನು ಕಾದು ನೋಡಬೇಕಿದೆ.
- ಪ್ರಕಾಶ ಎಸ್. ಶೇಟ್