ವಸಂತ ಹೊರಟ್ಟಿಗೆ ಪಕ್ಷಾತೀತ ಬೆಂಬಲ
ಹುಬ್ಬಳ್ಳಿ: ಇದು ಪ್ರಜ್ಞಾವಂತರ ಮತ ಕ್ಷೇತ್ರ. ಇಲ್ಲಿ ಅಭ್ಯರ್ಥಿಯ ಸಾಮರ್ಥ್ಯ ನೋಡಿ ಮತದಾರರು ಮತ ನೀಡುತ್ತಾರೆ. ಇಲ್ಲಿ ಯಾವ ಅಲೆಯೂ ಕೆಲಸ ಮಾಡುವುದಿಲ್ಲ. ವಸಂತ ಹೊರಟ್ಟಿ ಗೆಲುವಿಗೆ ಪಕ್ಷಾತೀತವಾಗಿ ಬೆಂಬಲ ವ್ಯಕ್ತವಾಗಿದೆ ಎಂದು ಮಾಜಿ ಸಚಿವ ಬಸವರಾಜ ಹೊರಟ್ಟಿ ಹೇಳಿದರು.
ಪಶ್ಚಿಮ ಪದವೀಧರ ಮತ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವಸಂತ ಹೊರಟ್ಟಿಯವರ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ದಿನಮಾನದಲ್ಲಿ ರಾಜಕೀಯ ಕ್ಷೇತ್ರ ಹದಗೆಟ್ಟಿದೆ. ಪಕ್ಷ ನಿಷ್ಠೆ, ತತ್ವ ಎಲ್ಲವೂ ಮರೆಯಾಗುತ್ತಿದೆ. ಹಣಕ್ಕಾಗಿ ರಾಜಕೀಯ ಎನ್ನುವಂತಾಗಿದೆ. ಇಂಥ ಹೊಲಸು ರಾಜಕೀಯದಿಂದ ಹೊರ ಬರಬೇಕಾದರೆ ಪ್ರಜ್ಞಾವಂತ ಯುವಕರು ರಾಜಕೀಯಕ್ಕೆ ಬರಬೇಕಿದೆ. ವಸಂತ ಹೊರಟ್ಟಿ ಯಾವುದೇ ಕಾರಣಕ್ಕೂ ನನ್ನ ಅಧಿಕಾರ ದುರುಪಯೋಗ ಮಾಡಿಕೊಂಡಿಲ್ಲ. ನಾನು ಸಚಿವನಾಗಿದ್ದಾಗ ನನ್ನ ಮಗ, ಕುಟುಂಬದವರನ್ನು ರಾಜಕೀಯ ವಿಷಯದಲ್ಲಿ ಮೂಗು ತೂರಿಸಲು ಬಿಟ್ಟಿಲ್ಲ. ನೀತಿಗೆಟ್ಟು ರಾಜಕೀಯ ಮಾಡುವ ಜಾಯಮಾನ ನನ್ನದಲ್ಲ. ವಸಂತ ಹೊರಟ್ಟಿಯನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಕಾಲಕ್ಕೂ ಪಕ್ಷದ ಮುಖಂಡರಿಂದ ವ್ಯಕ್ತವಾದ ಅಭಿಪ್ರಾಯಕ್ಕೆ ಮಣೆ ಹಾಕಿದ್ದೇನೆ, ಯಾವುದೇ ಲಾಬಿ ನಡೆಸಲ್ಲ ಮುಂದೆಯೂ ನಡೆಸುವುದಿಲ್ಲ ಎಂದ ಹೊರಟ್ಟಿ, ಸಭೆ, ಸಮಾರಂಭಗಳನ್ನು ಆಯೋಜಿಸಿ ಆರ್ಭಟಿಸುವುದನ್ನು ಬಿಟ್ಟು ಪ್ರತಿಯೊಬ್ಬ ಮತದಾರರನ್ನು ಭೇಟಿಯಾಗಿ ಮತಯಾಚನೆ ಮಾಡಬೇಕೆಂದರು.
ಶಾಸಕ ಎನ್.ಎಚ್. ಕೊನರಡ್ಡಿ ಮಾತನಾಡಿ, ವಿಧಾನಪರಿಷತ್ತಿನಲ್ಲಿ ಉತ್ತರ ಕರ್ನಾಟಕದ ದನಿಯಾದವರೇ ಹೊರಟ್ಟಿ. ಉತ್ತರ ಕರ್ನಾಟಕದಾದ್ಯಂತ ಹೊರಟ್ಟಿ ಅಲೆ ಇದೆ. ವಸಂತ ಹೊರಟ್ಟಿ ಉದ್ಯೋಗ ಮೇಳ ಹಮ್ಮಿಕೊಳ್ಳುವ ಮೂಲಕ 2 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ದೊರಕಿಸಿಕೊಟ್ಟಿದ್ದಾರೆ. ಶಿಕ್ಷಣ ಸಂಸ್ಥೆಯ ಮೂಲಕ ಶಿಕ್ಷಣ ಕೊಡಿಸಿದ್ದಾರೆ. ಮತದಾರರು ವಸಂತ ಹೊರಟ್ಟಿ ಬೆಂಬಲಿಸಿ ಕ್ಷೇತ್ರದ ಮತದಾರರ ಸಮಸ್ಯೆ ಪರಿಹರಿಸಲು ಅವಕಾಶ ಕಲ್ಪಿಸಿ ಎಂದರು.
ವಸಂತ ಹೊರಟ್ಟಿ ಮಾತನಾಡಿ, ನಾನು ತಂದೆ ಬಸವರಾಜ ಹೊರಟ್ಟಿಯವರ ಹೆಸರು ಹೇಳಿ ರಾಜಕಾರಣ ಮಾಡುತ್ತಿದ್ದೇನೆಂದು ಕೆಲವರು ಟೀಕೆ ಮಾಡುತ್ತಿದ್ದಾರೆ. ಬಹುಶಃ ತಂದೆಯವರ ಹೆಸರಲ್ಲಿ ರಾಜಕಾರಣ ಮಾಡುವುದೇ ಆಗಿದ್ದರೆ ಏಳೆಂಟು ವರ್ಷದ ಹಿಂದೆಯೇ ಅಧಿಕಾರದಲ್ಲಿರುತ್ತಿದ್ದೆ. ಪಕ್ಷದಿಂದ ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಗಿಳಿಯುವಂತೆ ಆಹ್ವಾನ ಬಂದಿದ್ದರೂ ನಿರಾಕರಿಸಿದ್ದೇ. ಇದೀಗ ಪುನಃ ಆಹ್ವಾನ ಬಂದಿದ್ದರ ಹಿನ್ನೆಲೆಯಲ್ಲಿ ಹಾಗೂ ಪದವೀಧರನಾಗಿ ಸ್ವತಃ ಕ್ಷೇತ್ರದ ಅನುಭವಿ ಸ್ವತಃ ಕಂಡುಂಡಿರುವುದರಿಂದ ಕಣಕ್ಕಿಳಿದಿದ್ದೇನೆ. ಈ ಹಿಂದೆ ಅಧಿಕಾರದಲ್ಲಿದ್ದವರು ಮತದಾರರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಪೊಳ್ಳು ಭರವಸೆಗಳನ್ನು ನೀಡದೆ ಕ್ಷೇತ್ರದ ಮತದಾರರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನ ಮಾಡುವೆ ಎಂದರು.
ಮಾಜಿ ಶಾಸಕ ಸುನೀಲ ಹೆಗಡೆ, ಎಂ.ಎಸ್. ಅಕ್ಕಿ, ಧೀರೇಂದ್ರ ಹುಯಿಲಗೋಳ, ರಾಜಣ್ಣ ಕೊರವಿ, ಶಶಿ ಸಾಲಿ ಮಾತನಾಡಿದರು. ಫಮೀದಾ ಕಿಲ್ಲೇದಾರ, ಮುಜಾಹಿದ ಕಾಂಟ್ರಾಕ್ಟರ್, ಶ್ರೀಶೈಲ ಹುದ್ದಾರ, ಸಂತೋಷ ಹಿರೇಕೂರ ಮತ್ತಿತರರು ಇದ್ದರು.