ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಪಿಂಜಾರ ಸಂಘದ ಪ್ರತಿಭಟನೆ

Srinivasa Murthy VN
Updated On : 30 Apr 2013, 10:39 am

ಕ.ಪ್ರ. ವಾರ್ತೆ ಸುರಪುರ ಏ. 29
ತಾಲೂಕು ಪಿಂಜಾರ ವಿವಿಧೋದ್ದೇಶ ಸೇವಾ ಸಂಘದ ನೇತೃತ್ವದಲ್ಲಿ ಪಿಂಜಾರ, ನದಾಫ್, ಲಬ್ಬೆ ಸೇರಿದಂತೆ ಇತರೆ ಸಮುದಾಯದವರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸೋಮವಾರ ಇಲ್ಲಿನ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಗೂ ಮೊದಲು ಮೇದಾಗಲ್ಲಿಯಿಂದ ತಹಸೀಲ್ದಾರ್ ಕಚೇರಿವರೆಗೆ ಮೌನ ಮೆರವಣಿಗೆ ನಡೆಸಿದರು. ನಂತರ ತಹಸೀಲ್ದಾರ್ ಕಚೇರಿ ಎದರುಗಡೆ ಪ್ರತಿಭಟನೆ ಮಾಡಿದರು.
ಅಲೆಮಾರಿ ಜನಾಂಗ: ಪ್ರತಿಭಟನೆ ನೇತೃತ್ವ ವಹಿಸಿದ್ದ ಪಿಂಜಾರ ವಿವಿಧೋದ್ದೇಶ ಸೇವಾ ಸಂಘದ ತಾಲೂಕು ಅಧ್ಯಕ್ಷ ಅಹ್ಮದ ಪಠಾಣ ಮಾತನಾಡಿ, ರಾಜ್ಯದಲ್ಲಿಯೇ ಅಲ್ಪಸಂಖ್ಯೆಯನ್ನು ಹೊಂದಿರುವ ಪಿಂಜಾರ, ನದಾಫ್, ಲಬ್ಬೆ ಸೇರಿದಂತೆ ಇತರೆ ಪರ್ಯಾಯ ಪದಗಳಿಂದ ಕರೆಯಲ್ಪಡುವ ಜನಾಂಗವು ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಾಮಾಜಿಕವಾಗಿ, ರಾಜಕೀಯವಾಗಿ ತೀರಾ ಹಿಂದುಳಿದ ಜನಾಂಗವಾಗಿದೆ. ಕುಡುಗೋಲು, ಕುರುಪಿ, ಕೊಡಲಿ, ಗಾದಿ ಇತರೆ ಕೆಲಸ ಮಾಡಿ ಉಪಜೀವನ ಸಾಗಿಸುವ ಈ ಸಮಾಜ ಅಲೆಮಾರಿ ಜನಾಂಗವಾಗಿದೆ.
ನಮ್ಮ ಸಮಾಜವೂ ಹಿಂದಿನಿಂದ ಇವತ್ತಿನವರೆಗೂ ತುಳಿತಕೊಳಗಾಗಿದ್ದು ಶೋಷಣೆಗೆ ಒಳಗಾಗುತ್ತಾ ಬಂದಿದೆ. ಸಮಾಜಕ್ಕೆ ಸರ್ಕಾರದ ಯೋಜನೆಗಳು ಮರೀಚಿಕೆಯಾಗಿವೆ. ಎಲ್ಲಾ ರಂಗಗಳಲ್ಲಿ ಹಿಂದುಳಿದಿರುವ ಈ ಸಮಾಜ ಅಭಿವೃದ್ಧಿಗೆ ಇದುವರೆಗೂ ಯಾವ ಸರ್ಕಾರಗಳು ಪ್ರಯತ್ನಿಸಿಲ್ಲ ಎಂದು ಆರೋಪಿಸಿದರು.
ಬ್ಯಾಂಕ್ ಸಾಲ ನೀಡುತ್ತಿಲ್ಲ: ದೇವಿಕೇರಿ ಗ್ರಾಮದ ಅಲ್ಲಿಸಾಬ ಮಾತನಾಡಿ, ಶೇ.80ರಷ್ಟು ಹಿಂದುಳಿದಿರುವ ಸಮಾಜಕ್ಕೆ ಇದುವರೆಗೂ ಸರ್ಕಾರದ ಯೋಜನೆ ದೊರೆಯುತ್ತಿಲ್ಲ. ಗಂಗಾಕಲ್ಯಾಣ ಯೋಜನೆಯಲ್ಲಿ ಸಮಾಜದ ರೈತರನ್ನು ವಂಚಿಸಲಾಗುತ್ತಿದೆ. ವಿವಿಧ ವಸತಿ ಯೋಜನೆ ಅಡಿಯಲ್ಲಿ ನಮ್ಮ ಸಮಾಜವನ್ನು ಕಡೆಗಣಿಸಲಾಗುತ್ತಿದೆ. ಉದೋಗಕ್ಕಾಗಿ ಬ್ಯಾಂಕ್ ಸಾಲ ಸೌಲಭ್ಯ ನೀಡುತ್ತಿಲ್ಲ ಎಂದು ದೂರಿದರು.
ರಾಜ್ಯಪಾಲರಿಗೆ ಪತ್ರ: ಪಿಂಜಾರ, ಲದಾಫ್, ಲಬ್ಬೆ, ಕುರೇಶಿ, ಧರವೇಶಿ ಇತರೆ ಜಾತಿಗಳಿಗೆ ನೌಕರಿಯಲ್ಲಿ ಪ್ರತ್ಯೇಕ ಮೀಸಲಾತಿ ನೀಡಬೇಕು. ಸಮಾಜದ ವಿದ್ಯಾರ್ಥಿಗಳಿಗೆ ಮುಸ್ಲಿಂ ಎಂದು ನಮೂದಿಸದೆ ಉಪಜಾತಿಯನ್ನು ನೋಂದಾಯಿಸುವಂತೆ ಆದೇಶಿಸಬೇಕು ಮತ್ತು ಮೂಲ ಜಾತಿ ಪ್ರಮಾಣಪತ್ರ ನೀಡಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಯಲ್ಲಿ ಹಾಗೂ ಗಂಗಾಕಲ್ಯಾಣ ಯೋಜನೆಯಲ್ಲಿ ಮೀಸಲಾತಿ ಕಲ್ಪಿಸಬೇಕು ಎಂಬ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಕಂದಾಯ ನಿರೀಕ್ಷಕ ಅಣವೀರಪ್ಪ ಅವರ ಮುಖಾಂತರ ಸಲ್ಲಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ಅಬ್ದುಲ್ ಗಫಾರ್ ನಗನೂರಿ, ಕಕ್ಕೇರಿಯ ಕಾಸೀಂಸಾಬ, ಅಬ್ದುಲಸಾಬ ಬೇವಿನಾಳ, ಶರಮುದ್ದೀನ್ ಶಖಾಪುರ, ಮಹ್ಮದಲಿ ಪಠಾಣ, ಬುಡೇಸಾಬ ಪೇಂಟರ್, ರಾಜೇಸಾಬ ಕೋನಾಳ, ದಾವಲಸಾಬ ಹೆಬ್ಬಾಳ, ಸೋಪಿಸಾಬ ನಾಗರಾಳ, ಕಾಸಿಂಸಾಬ ನಾಗರಾಳ, ಹುಸೇನಸಾಬ ಪಠಾಣ, ದಸ್ತಗೀರ ಹೆಬ್ಬಾಳ, ಲಾಲಸಾಬ ಹೆಬ್ಬಾಳ, ಮೌನೋದ್ದೀನ ಶಖಾಪುರ, ನಭೀಲಾಲ ಮಂಡಗಳ್ಳಿ, ರಮಂಜಾನಸಾಬ, ಅಮೀನಸಾ, ಖಾಸಿಂಸಾಬ ಬಡಿಗೇರ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement