ಗುಲ್ಬರ್ಗ; 15ರಂದು ಉಚಿತ ಚಿಕಿತ್ಸಾ ಶಿಬಿರ
ಗುಲ್ಬರ್ಗ: ನಗರದ ರೋಟರಿ ಕ್ಲಬ್, ಇನ್ನರ್ ವ್ಹೀಲ್ ಕ್ಲಬ್ ಹಾಗೂ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜಗಳ ಸಂಯುಕ್ತಾಶ್ರಯದಲ್ಲಿ ಸ್ವಾತಂತ್ರ್ಯುತ್ಸವ ನಿಮಿತ್ತ ಆ.15ರಂದು ಶಹಾಬಜಾರದ ಜಗದಂಬಾ ದೇವಾಲಯದ ಸಭಾಂಗಣದಲ್ಲಿ ಉಚಿತ ನೇತ್ರ ಮತ್ತು ಸಾಮಾನ್ಯ ಆರೋಗ್ಯ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 10.30ರಿಂದ ಸಂಜೆ 4ರವರೆಗೆ ಈ ಶಿಬಿರ ನಡೆಯಲಿದ್ದು, ಎಲಬು, ಕೀಳು ನೋವು, ಅಸ್ತಮಾ, ಮಕ್ಕಳ ಕುರಿತಾದ ರೋಗಗಳಿಗೆ ಚಿಕಿತ್ಸೆ ನೀಡಲಾಗುವುದು ಮತ್ತು ನೇತ್ರತಪಾಸಣೆ ನಡೆಸಿ ಅರ್ಹರಿಗೆ ಸರ್ಕಾರಿ ಆಸ್ಪತ್ರೆಗೆ ಶಿಫಾರಸ್ಸು ಮಾಡಿ ಶಸ್ತ್ರಚಿಕಿತ್ಸೆ ಕೈಗೊಂಡು ಕನ್ನಡಕ ವಿತರಿಸಲಾಗುವುದು ಎಂದು ಪ್ರೊ. ಶಿವರಾಜ ಪಾಟೀಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ನೇತ್ರ ತಜ್ಞಾರಾದ ದೇವೀಂದ್ರ ಚಿಂಚೋಳಿ, ಶ್ರೀನಿವಾಸ ಚಿಂಚೋಳಿ, ಡಾ. ಉದಯ ಪಾಟೀಲ್, ಶ್ರೀನಿವಾಸ ಪಟವಾರಿ, ಎಲಬು- ಕೀಳು ತಜ್ಞಾರಾದ ಡಾ. ಕಿಶೋರ ಮೇಂಗಜಿ, ಡಾ. ಸದಾಶಿವ ಜಿಡಗೆಕರ್, ಮಕ್ಕಳ ತಜ್ಞಾರಾದ ಡಾ. ವೀರಭದ್ರಪ್ಪ, ಡಾ. ರಮೇಶ ಮತ್ತು ಡಾ. ಮೋರೆ ಸೇರಿದಂತೆ 12 ಜನ ವೈದ್ಯರು ಮತ್ತು ಇಬ್ಬರು ಲೋಬರೋಟರಿ ತಜ್ಞರು ಪಾಲ್ಗೊಳ್ಳಲಿದ್ದಾರೆ.
ಮಹಾಜನ್ ಬಂಧನಕ್ಕೆ ಆಗ್ರಹ
ಗುಲ್ಬರ್ಗ: ಸರ್ಕಾರಿ ಕಟ್ಟಡಗಳನ್ನು ನೆಲಸಮಗೊಳಿಸಿ ಅಲ್ಲಿನ ಜಾಗವನ್ನು ಕಬಳಿಸಲು ಯತ್ನಿಸಿದ್ದಲ್ಲದೆ ತಡೆಯಲು ಬಂದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾಗಿ ಈಗ ನಾಪತ್ತೆಯಾಗಿರುವ ಪ್ರಮುಖ ಆರೋಪಿ ಎನ್ನಲಾದ ಶಿವಕಾಂತ ಮಹಾಜನ್ ಅವರನ್ನು ಕೂಡಲೇ ಬಂಧಿಸುವಂತೆ ಕರ್ನಾಟಕ ದಲಿತ ಸಮರ ಸಂಘರ್ಷ ಸಮಿತಿ ಒತ್ತಾಯಿಸಿದೆ.
ಪ್ರಕರಣ ನಡೆದು ಮೂರು ನಾಲ್ಕು ದಿನಗಳಾದರೂ ಪ್ರಮುಖ ಆರೋಪಿಯನ್ನೆ ಬಂಧಿಸಿಲ್ಲ. ಈ ಆರೋಪಿ ಹಿಂದೆ ರಾಜಕೀಯ ಕೈವಾಡಗಳು ಇರುವ ಶಂಕೆ ಇದೆ. ಹಿಂದಿನ ಸರ್ಕಾರದಲ್ಲಿ ಕೆಲ ಮುಗ್ದ ಮತ್ತು ಹಿರಿಯ ರಾಜಕೀಯ ನಾಯಕರ ಹೆಸರು ಬಳಸಿ ಅಂದಿನ ಲೋಕೋಪಯೋಗಿ ಸಚಿವ ಉದಾಸಿ ಮತ್ತು ಇಲ್ಲಿನ ಪ್ರಮುಖ ಹುದ್ದೆಯಲ್ಲಿರುವ ಎಂಜಿನಿಯರ್‌ಗಳ ಮೂಲಕ ಅನೇಕ ಕೋಟಿ ರು. ಕೆಲಸಗಳನ್ನು ಮಾಡಿದ್ದು ಕಳಪೆಯಾಗಿದೆ. ಇದು ತನಿಖೆಯಾಗಬೇಕೆಂದ ಸೇನೆ ಅಧ್ಯಕ್ಷ ಲಕ್ಷ್ಮಣ ದೊಡ್ಮನಿ ಮತ್ತು ಕಾರ್ಯದರ್ಶಿ ಅಂಬರೀಷ ಆಡಕಿ ಆಗ್ರಹಿಸಿದ್ದಾರೆ. ಈ ಕುರಿತು ಸಿಎಂ, ಗೃಹ ಸಚಿವ, ಲೋಕೋಪಯೋಗಿ ಸಚಿವರಿಗೆ ಮನವಿ ಕಳುಹಿಸಿರುವ ಅವರು, ಪೊಲೀಸ್ ಇಲಾಖೆ ನಿರ್ಲಕ್ಷ್ಯ ವಹಿಸಿದರೆ ಬೀದಿಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ರಕ್ತದಾನ ಶಿಬಿರ ಯಶಸ್ವಿ
ಗುಲ್ಬರ್ಗ: ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ವತಿಯಿಂದ ನಗರದ ಎಪಿಎಂಸಿ ಹೊಸ ತಕರಾರು ಮಾರುಕಟ್ಟೆಯ ಯಾರ್ಡ್‌ನಲ್ಲಿ ನಡೆಯುತ್ತಿರುವ ಎನ್‌ಸಿಸಿ ವಾರ್ಷಿಕ ತರಬೇತಿ ಶಿಬಿರದಲ್ಲಿ ಸರ್ಕಾರಿ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಸಂಸ್ಥೆಯ ನೆರವಿನೊಂದಿಗೆ ರಕ್ತದಾನ ಶಿಬಿರ ನಡೆಸಲಾಗಿತ್ತು.
ಸುಮಾರು 25 ಕೆಡೆಟ್‌ಗಳು ರಕ್ತದಾನ ಮಾಡಿದರು. ಕ್ಯಾಂಪ್ ಮುಖ್ಯಸ್ಥರಾದ ಕರ್ನಲ್ ಎಸ್.ಜೆ. ಸಿಂಗ್ ಶಿಬಿರಕ್ಕೆ ಚಾಲನೆ ನೀಡಿದರು. ರಕ್ತನಿಧಿ ವೈದ್ಯಾಧಿಕಾರಿ ಡಾ. ಶಾಲಿನಿ ಸಜ್ಜನಶೆಟ್ಟಿ ರಕ್ತದಾನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು. ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆಯ ಅಧ್ಯಕ್ಷ ಅಪ್ಪಾರಾವ ಅಕ್ಕೋಣಿ ರಕ್ತದಾನದ ಮಹತ್ವ ತಿಳಿಸಿದರು. ಕ್ಯಾಪ್‌ನ ವಿಠ್ಠಲ್ ರೆಡ್ಡಿ ಸ್ವಾಗತಿಸಿದರು. ರೆಡ್‌ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ಅಧ್ಯಕ್ಷ ಅರುಣಕುಮಾರ್ ಲೋಯಾ ವಂದಿಸಿದರು.