ಪಡೆದಿದ್ದನ್ನು ಸಮಾಜಕ್ಕೆ ಹಿಂದಿರುಗಿಸಿ
ಕನ್ನಡಪ್ರಭ ವಾರ್ತೆ, ಬೀದರ್, ಆ. 11
ಯಾದಗಿರಿ: ಸಮಾಜದಿಂದ ನಾವು ಎಲ್ಲವನ್ನೂ ಪಡೆದುಕೊಂಡಿರುತ್ತೇವೆ. ಅದನ್ನು ಅದೇ ಸಮಾಜಕ್ಕೆ ಹಿಂತಿರುಗಿಸಿದಾಗ ಮಾತ್ರ ಮಾನವನ ಜೀವನ ಸಾರ್ಥಕವಾಗುವುದರ ಜೊತೆಗೆ ಮನಸ್ಸಿಗೆ ತೃಪ್ತಿ ದೊರಕುತ್ತದೆ ಎಂದು ಸಹಾಯಕ ಆಯುಕ್ತ ಬಿ.ಪಿ. ವಿಜಯ ಹೇಳಿದರು.
ಸಮಾಜದ ಏಳ್ಗೆ: ನಗರದ ಬಾಲಾಜಿ ಮಂದಿರದಲ್ಲಿ ನೂತನ ಮಾರವಾಡಿ ಯುವ ಮಂಚದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು, ಸಮಾಜ ನಮಗೆ ಎಲ್ಲವನ್ನು ಕೊಡುತ್ತದೆ. ಆದರೆ ನಾವು ಅದಕ್ಕೆ ಏನೂ ಕೊಡದೆ ಸ್ವಾರ್ಥ ಬದುಕಿನತ್ತ ಸಾಗುತ್ತವೆ. ಇದು ಸರಿಯಾದ ಬದುಕಿನ ದಾರಿಯಲ್ಲ. ನಮ್ಮ ಗಳಿಕೆಯಲ್ಲಿ ಸ್ವಲ್ಪವಾದರೂ ಕಡುಬಡವರ ಬದುಕಿನ ಏಳ್ಗೆಗೆ ಬಳಕೆಯಾದಲ್ಲಿ ಅದರಿಂದ ಅಪಾರ ತೃಪ್ತಿ ಸಿಗುತ್ತದೆ ಎಂದು ನುಡಿದರು.
ಸರಕಾರ ಎಷ್ಟೇ ಯೋಜನೆಗಳನ್ನು ಜಾರಿಗೆ ತಂದರೂ ಅವು ಸಮರ್ಪಕವಾಗಿ ಅನುಷ್ಠಾನಗೊಳ್ಳದೆ ನಿಜವಾದ ಫಲಾನುವಿಗಳಿಗೆ ತಲುಪುವುದಿಲ್ಲ. ಅದರೆ ಇಂತಹ ಸಂಘ ಸಂಸ್ಥೆಗಳು ಸಮಾಜದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಲ್ಲಿ ಯೋಜನೆಗಳು ನಿಜವಾದ ಫಲಾನುಭವಿಗಳಿಗೆ ತಲುಪಲು ಸಾಧ್ಯ. ಅದಕ್ಕಾಗಿ ಯುವಕರು ಯಾವುದೆ ದುಶ್ಚಟಕ್ಕೆ ಬಲಿಯಾಗದೆ ರಾಷ್ಟ್ರದ ಏಕತೆ ಮತ್ತು ಸಮಾಜದ ಪ್ರಗತಿಗೆ ಶ್ರಮಿಸಲು ಮುಂದಾಗಬೇಕು ಎಂದು ಕರೆ ನೀಡಿದರು.
ಸಕ್ರಿಯ ಕೆಲಸಗಳು: ರಾಷ್ಟ್ರದಲ್ಲಿ 700 ಮಾರಾವಾಡಿ ಮಂಚಗಳು ಇದ್ದು, ಸುಮಾರು 7000 ಕಾರ್ಯಕರ್ತರು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಪ್ರತಿಯೊಂದು ಸಂಘದಲ್ಲಿ ಬಡ ಜನರ ಸೇವೆಗಾಗಿ ಒಂದು ಅಂಬುಲೆನ್ಸ್ ಒದಗಿಸಲಾಗಿದೆ. ಅಲ್ಲದೆ ಸಮಾಜದ ಕಡುಬಡವರ ಪ್ರಗತಿಗಾಗಿ ಹಲವರು ಕಾರ್ಯಕ್ರಮಗಳನ್ನು ಮಂಚದವತಿಯಿಂದ ಪ್ರತಿ ವರ್ಷನಡೆಸಲಾಗುತ್ತದೆ ಎಂದು ರಾಜ್ಯ ಮಾರಾವಾಡಿ ಯುವ ಸಂಘದ ರಾಜ್ಯಾಧ್ಯಕ್ಷ ಅಶೋಕ ಕಥಾರಿಯಾಜಿ ತಿಳಿಸಿದರು.
ಸೆ.15ರಂದು ಬೆಂಗಳೂರಿನಲ್ಲಿ ಮಾರಾವಾಡಿ ಯುವ ಮಂಚದ ಬೃಹತಿ ಅಧಿವೇಶನ ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶದಲ್ಲಿ ರಾಜ್ಯದ ಮಾರಾವಾಡಿ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದರು. ಸಮಾರಂಭದಲ್ಲಿ ಜಿಪಂ ಅಧ್ಯಕ್ಷ ಶರನಿಕ ಕುಮಾರ ದೋಖಾ, ಶ್ರಿ ಬಾಲಾಜಿ ಮಂದಿರದ ಅಧ್ಯಕ್ಷೆ ವಿದ್ಯಾದೇವಿ ವ್ಯಾಸ ಭಾಗವಹಿಸಿದ್ದರು. ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೀಡಲಾಯಿತು. ಕಾಂತಿಲಾಲ ಧೋಖಾ ಮತ್ತು ವಿನೋಧ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ನೂತನ ಅಧ್ಯಕ್ಷ ವಿಜಯಕುಮಾರ ಗೌರ ಸ್ವಾಗತಿಸಿದರು. ಕಾರ್ಯದರ್ಶಿ ಅಶೋಕ ಜೈನ್ ವಂದಿಸಿದರು.