ಭಾವೈಕ್ಯತಾ ಪಾದಯಾತ್ರೆ
ಕೆಂಭಾವಿ: ಸಮೀಪದ ಕರಡಕಲ್ ಗ್ರಾಮದ ಕೋರಿಸಿದ್ದೇಶ್ವರ ಶಾಖಾ ಮಠದ ಶಾಂತರುದ್ರಮುನಿ ಮಹಾಸ್ವಾಮಿ ಆ. 21 ರಿಂದ 25ರವರೆಗೆ ವಿಶ್ವಶಾಂತಿಗಾಗಿ ಕರಡಕಲ್ ಗ್ರಾಮದಿಂದ ಸುಕ್ಷೇತ್ರ ನಾಲವಾರ ಗ್ರಾಮಕ್ಕೆ ಭಾವೈಕ್ಯತೆ ಹಾಗೂ ಶೈಕ್ಷಣಿಕ 21ನೇ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ. ಈ ಪಾದಯಾತ್ರೆಯಲ್ಲಿ ಪೇಠ ಅಮ್ಮಪುರದ ರಾಮಲಿಂಗ ಶರಣರು, ಮುದನೂರ ಗ್ರಾಮದ ಕೋರಿಸಿದ್ದೇಶ್ವರ ಪುಣ್ಯಾಶ್ರಮದ ಮಲ್ಲಿಕಾರ್ಜುನ ದೇವರು, ಕೆಂಭಾವಿ ಕೋರಿಸಿದ್ದೆಶ್ವರ ಪುಣ್ಯಾಶ್ರಮದ ಬೀರಪ್ಪ ಶರಣರು ಸೇರಿದಂತೆ ತಾಲೂಕಿನ ಎಲ್ಲ ಗ್ರಾಮದ ಅನೇಕ ಭಜನಾ ಮಂಡಳಿಗಳು, ಡೊಳ್ಳಿನ ಮೇಳಗಳು, ಸಗರನಾಡು ಸೇವಾ ಪ್ರತಿಷ್ಠಾನದ ಕಾರ್ಯಕರ್ತರು, ಕರವೇ ಕಾರ್ಯಕರ್ತರು, ಅನೇಕ ಶಾಲೆಯ ಲೇಜಿಮ್ ತಂಡಗಳು ಭಾಗವಹಿಸಲಿವೆ ಎಂದು ಮಠದ ವಕ್ತಾರ ಶಿವಪ್ರಕಾಶ ತಿಳಿಸಿದ್ದಾರೆ.
ನಾಗರ ಪಂಚಮಿ; ಸಡಗರದ ಆಚರಣೆ
ಕೆಂಭಾವಿ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಾನುವಾರ ನಾಗರ ಪಂಚಮಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಬೆಳಿಗ್ಗೆಯಿಂದಲೆ ಮಹಿಳೆಯರು ದೇವಸ್ಥಾನಕ್ಕೆ ತೆರಳಿ ಅಲ್ಲಿರುವ ನಾಗದೇವತೆ ಮೂರ್ತಿಗಳಿಗೆ ಹಾಲೆರೆಯುವುದರ ಮೂಲಕ ಹಬ್ಬದ ಸಂಭ್ರವನ್ನು ಆಚರಿಸಿದರು. ಸಂಜೀವನಗರ ಬಡಾವಣೆಯ ಆಂಜನೇಯ ಹಾಗೂ ಕಾಶಿ ವಿಶ್ವನಾಥ ದೇವಸ್ಥಾನದ ಅವರಣದಲ್ಲಿರುವ ನಾಗ ಮೂರ್ತಿಗಳಿಗೆ ಹೆಂಗಳೆಯರು ಹಾಲೆರೆದು ಪೂಜೆ ಮಾಡಿದರು.
ಟ್ರ್ಯಾಕ್ಟರ್ ಡಿಕ್ಕಿ: ಪಾದಚಾರಿ ಸಾವು
ಶಹಾಪುರ: ಟ್ರ್ಯಾಕ್ಟರ್ ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದು, ಮತ್ತೊಬ್ಬ ವ್ಯಕ್ತಿ ಗಾಯಗೊಂಡ ಘಟನೆ ಯಾದಗಿರಿ- ಶಹಾಪುರ ಮುಖ್ಯ ರಸ್ತೆಯ ಜೀವ ವಿಮಾ ಕಚೇರಿ ಹತ್ತಿರ ಭಾನುವಾರ ಬೆಳಗ್ಗೆ ನಡೆದಿದೆ. ಮೃತನನ್ನು ಗುಲ್ಬರ್ಗ ಜಿಲ್ಲೆ ಚಿಂಚೋಳಿ ತಾಲೂಕಿನ ಶಾಲೆ ಬಿರನೂರ ಗ್ರಾಮದ ಮಲ್ಲಿಕಾರ್ಜುನ (24) ಎಂದು ಗುರುತಿಸಲಾಗಿದೆ. ಗಾಯಗೊಂಡವನನ್ನು ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯ ನಂತರ ಟ್ರ್ಯಾಕ್ಟರ್ ಚಾಲಕ ಪರಾರಿಯಾಗಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಶಹಾಪುರ ಪೋಲಿಸರು ಪರಾರಿಯಾದ ಚಾಲಕನ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ. ಮೃತ ಮಲ್ಲಿಕಾರ್ಜುನ ಹಾಗೂ ಗಾಯಗೊಂಡ ರವಿಕಾಂತ ತಂದೆ ನಾಗಪ್ಪ(23) ಕಳೆದ ಎರಡು ವರ್ಷಗಳಿಂದ ಪಟ್ಟಣದ ಬಾರೊಂದರಲ್ಲಿ ಕೆಲಸ ಮಾಡುತ್ತಿದ್ದರು. ನಡೆದುಕೊಂಡು ಹೋಗುತ್ತಿರುವಾಗ ಘಟನೆ ಸಂಭವಿಸಿದ್ದು, ತನಿಖೆ ಪ್ರಗತಿಯಲ್ಲಿದೆ.