ಭೂ ಮಾಫಿಯಾ ವಿರುದ್ಧ ಕ್ರಿಮಿನಲ್ ಕೇಸ್‌ಗೆ ಸೂಚನೆ
ಜಿಲ್ಲಾಧಿಕಾರಿಗೆ ಆದೇಶಿಸಿದ ಪೌರಾಡಳಿತ ಸಚಿವ ಖಮರುಲ್ ಇಸ್ಲಾಂ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಆ.11
ಅಕ್ರಮವಾಗಿ ಆಶ್ರಯ ಮನೆಗಳನ್ನು ವಶಪಡಿಸಿಕೊಂಡಿರುವ ಭೂ ಮಾಫಿಯಗಳ ವಿರುದ್ಧ ಕೂಡಲೇ ಕ್ರಿಮಿನಲ್ ಕೇಸ್ ದಾಖಲಿಸಿ ಕ್ರಮ ಜರುಗಿಸಬೇಕೆಂದು ಗುಲ್ಬರ್ಗ ಉಸ್ತುವಾರಿ ಮತ್ತು ಪೌರಾಡಳಿತ ಸಚಿವ ಖಮರುಲ್ ಇಸ್ಲಾಂ ಜಿಲ್ಲಾಧಿಕಾರಿಗೆ ಸೂಚಿಸಿದರು.
ನಗರದ ನಗರಾಭಿವೃದ್ಧಿ ಪ್ರಾಧಿಕಾರದ ಸಭಾಂಗಣದಲ್ಲಿ ಭಾನುವಾರ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಭೂ ಮಾಫಿಯ ಮತ್ತು ಈ ಬಡಾವಣೆಗೆ ಸಂಬಂಧಿಸಿದ ಕಂದಾಯ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕೆಂದು ಹೇಳಿದರು.
ಅಧಿಕಾರಿಗಳನ್ನು ತರಾಟೆಗೆ: ನಗರದ ಶೋಖರೋಜಾ ಮತ್ತು ಎಸ್.ಎಂ. ಕೃಷ್ಣ ಆಶ್ರಯ ಕಾಲೋನಿಗಳಲ್ಲಿ ಮಹಾನಗರ ಪಾಲಿಕೆ ವತಿಯಿಂದ ನಿರ್ಮಿಸಿದ ಆಶ್ರಯ ಮನೆಗಳ ಪೈಕಿ ಕೆಲವು ಮನೆಗಳನ್ನು ಭೂ ಮಾಫಿಯಗಳು ನಕಲು ದಾಖಲೆ ಸೃಷ್ಟಿಸಿ ತಮ್ಮದಾಗಿಸಿಕೊಂಡಿದ್ದಾರೆ. ಮತ್ತೆ ಕೆಲವು ಮನೆಗಳನ್ನು ತೆರವುಗೊಳಿಸಿ ಅಲ್ಲಿ ಆಸ್ಪತ್ರೆ, ಶಾಲಾ ಮತ್ತು ಬಿಲ್ಡಿಂಗ್‌ಗಳನ್ನು ನಿರ್ಮಿಸಿರುವ ಕುರಿತು ಜಿಲ್ಲಾಧಿಕಾರಿ ಪ್ರಸನ್ನಕುಮಾರ್ ಸಚಿವರ ಗಮನಕ್ಕೆ ತಂದಾಗ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಮನೆಗಳ ಹಂಚಿಕೆ ಮಾಡಿ: ಕೂಡಲೇ ಆ ಆಶ್ರಯ ಮನೆಗಳ ಬಗ್ಗೆ ಪರಿಶೀಲನೆ ನಡೆಸಿ ಮನೆಗಳ ಹಕ್ಕುದಾರರಿಗೆ ಮನೆಗಳ ಹಂಚಿಕೆ ಮಾಡಿ ಹಕ್ಕು ಪತ್ರ ನೀಡಬೇಕೆಂದು ಇಸ್ಲಾಂ ಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ಆ.31 ರಂದು ಗುಲ್ಬರ್ಗ ಹೈಕೋರ್ಟ್ ಸಂಚಾರಿ ಪೀಠ ಖಾಯಂ ಪೀಠವಾಗಲಿದ್ದು, ಅಂದು ನಡೆಯುವ ಉದ್ಘಾಟನಾ ಸಮಾರಂಭಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿ ಸದಾಶಿವಂ ಸೇರಿದಂತೆ ಹಲವಾರು ನ್ಯಾಯಾಧೀಶರು, ಸಚಿವರು ಆಗಮಿಸಲಿದ್ದಾರೆಂದು ಸಚಿವರು ತಿಳಿಸಿದರು.
ಆ.31 ರೊಳಗಾಗಿ ಹದಗಟ್ಟಿರುವ ನಗರದ ಎಲ್ಲ ರಸ್ತೆಗಳನ್ನು ದುರಸ್ತಿ ಕಾರ್ಯ ಕೈಗೊಳ್ಳಬೇಕೆಂದು ಸಚಿವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ್, ಪಾಲಿಕೆ ಆಯುಕ್ತ ಎಸ್.ಬಿ. ಕಟ್ಟಿಮನಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರವಿಕುಮಾರ ಒಂಟಿ ಸೇರಿದಂತೆ ಹಲವಾರು ಅಧಿಕಾರಿಗಳು ಉಪಸ್ಥಿತರಿದ್ದರು.