ಲಂಬಾಣಿ, ಭೋವಿ ಸಮಾಜದ ಚಿಂತನಾ ಸಭೆ
ಗುಲ್ಬರ್ಗ: ಯಾವುದೇ ಕಾರಣಕ್ಕೂ ಬಂಜಾರ, ಭೋವಿ, ಭಜಂತ್ರಿ ಇನ್ನಿತರ ಸಮುದಾಯಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ತೆಗೆಯಬಾರದು ಎಂದು ಶನಿವಾರ ನಗರದಲ್ಲಿ ನಡೆದ ಲಂಬಾಣಿ ಮತ್ತು ಭೋವಿ ಸಮಾಜದ ಚಿಂತನಾ ಸಭೆಯಲ್ಲಿ ಒಕ್ಕೊರಲಿನಿಂದ ಆಗ್ರಹಿಸಲಾಯಿತು. ನಗದರ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ನಡೆದ ಚಿಂತನಾ ಸಭೆಯಲ್ಲಿ ಸುದೀರ್ಘ ಚರ್ಚೆಯ ನಂತರ, ಚಿಂಚೋಳಿ ಶಾಸಕ ಉಮೇಶ ಜಾಧವ ನೇತೃತ್ವದಲ್ಲಿ ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ, ಸಂಸದ ಧರ್ಮಸಿಂಗ್ ಅವರ ಬಳಿ ಸಮಾಜದ ಮುಖಂಡರ ನಿಯೋಗವೊಂದನ್ನು ತೆಗೆದುಕೊಂಡು ಬೇಡಿಕೆಯನ್ನು ಮಂಡಿಸಲು ನಿರ್ಧರಿಸಲಾಯಿತು. ಉಭಯ ನಾಯಕರಿಂದ ಯುಪಿಎ ಅಧ್ಯಕ್ಷ ಸೋನಿಯಾ ಗಾಂಧಿ, ಪ್ರಧಾನಿ ಡಾ. ಮನಮೋಹನ ಸಿಂಗ್, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷರಿಗೆ ಮತ್ತು ಮುಖ್ಯಮಂತ್ರಿಗೆ ಪತ್ರ ಬರೆದು ಜನರ ಭಾವನೆಗಳಿಗೆ ಸ್ಪಂದಿಸುವಂತೆ ಆಗ್ರಹಿಸಲಾಯಿತು.
ಮಾಜಿ ಸಚಿವ ರೇವುನಾಯಕ ಬೆಳಮಗಿ, ಮಾಜಿ ಶಾಸಕ ವಾಲ್ಮೀಕಿ ನಾಯಕ, ಮುಖಂಡರಾದ ಸುಭಾಷ ರಾಠೋಡ, ನಾಮದೇವ ರಾಠೋಡ, ಶಂಕರ ಚವ್ಹಾಣ, ಮಲ್ಲಿಕಾರ್ಜುನ ಕುಸ್ತಿ, ಸುಭಾಷ ಪವಾರ, ಭಜಂತ್ರಿ ಇತರರು ಮಾತನಾಡಿ, ಹಲವು ದಶಕಗಳಿಂದ ಈ ಸಮುದಾಯಗಳು ಶೋಷಣೆಗೊಳಗಾಗುತ್ತಲೇ ಬಂದಿವೆ. ಈ ಒಂದು ವರದಿಯನ್ನು ಆಧರಿಸಿ ಇಲ್ಲವೇ ಒಂದು ಸಮುದಾಯವನ್ನು ಓಲೈಸಲು ತಂತ್ರ ನಡೆಸಿ ಉಳಿದ ನಾಲ್ಕಾರು ಸಮಾಜಗಳಿಗೆ ಅನ್ಯಾಯ ಮಾಡುವುದು ಸರಿಯಲ್ಲ ಎಂದರು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುತುವರ್ಜಿ ವಹಿಸಬೇಕು. ಒಂದು ವೇಳೆ ಅನ್ಯಾಯವಾದರೆ ಹೋರಾಟ ನಡೆಸಲು ಸಿದ್ಧ ಎಂದು ಮುಖಂಡರು ಘೋಷಣೆ ಮಾಡಿದರು. ಶೀಘ್ರವೇ ದಿನಾಂಕ ನಿಗದಿ ಮಾಡಿ ನಾಯಕರನ್ನು ಭೇಟಿ ಮಾಡಲು ಸಹ ತೀರ್ಮಾನಿಸಲಾಯಿತು.
ಮೃತರ ಸಂಖ್ಯೆ ಮೂರಕ್ಕೆ
ಗುಲ್ಬರ್ಗ/ಶಹಾಬಾದ್: ಹೊನಗುಂಟಾ ರಸ್ತೆಯಲ್ಲಿ ಶನಿವಾರ ಜೀಪ್ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ತೀವ್ರ ಗಾಯಗೊಂಡು ಗುಲ್ಬರ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶರಣಪ್ಪ ಕಳಶೆಟ್ಟಿ (32) ಭಾನುವಾರ ಬೆಳಿಗ್ಗೆ ಮೃತಪಟ್ಟಿದ್ದಾನೆ. ಮೂರು ಜನರ ಅಂತ್ಯಕ್ರಿಯೆ ಭಾನುವಾರ ನಡೆಯಿತು. ಹೊಟ್ಟೆ ಪಾಡಿಗೆ ನಗರದಿಂದ ಹೊನಗುಂಟಾ ವಡ್ಡರವಾಡಿಯ ಗಣಿ ಪ್ರದೇಶದಲ್ಲಿ ಚಹಾದ ಹೋಟೆಲ್ ನಡೆಸುತ್ತಿದ್ದ ಶರಣಪ್ಪ ಕಳಶೆಟ್ಟಿ, ಅಕ್ಕ ಲಕ್ಷ್ಮೀಬಾಯಿ (36), ಮಗ ಸಂಗಪ್ಪ ಕಲಶೆಟ್ಟಿ (7) ಅವರೊಂದಿಗೆ ಶನಿವಾರ ಬೈಕ್ನಲ್ಲಿ ಬರುತ್ತಿದ್ದಾಗ ಜೀಪ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಶರಣಪ್ಪ ಕಲಶೆಟ್ಟಿ (32) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಮೂರು ಜನರ ಶವಗಳನ್ನು ಮರಣೋತ್ತರ ಪರೀಕ್ಷೆಯ ನಂತರ ಕುಟುಂಬದವರು ಭಾನುವಾರ ಪಡೆದುಕೊಂಡರು. ಅಂತಿಕ್ರಿಯೆಯಲ್ಲಿ ಗುಲ್ಬರ್ಗ ಗ್ರಾಮೀಣ ಕ್ಷೇತ್ರದ ಶಾಸಕ ಜಿ. ರಾಮಕೃಷ್ಣ, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ, ಪಿಎಸ್ಐ ರಘು ಎನ್. ಶಹಾಬಾದ್ ನಗರಸಭೆ ಸದಸ್ಯರಾದ ಸೂರ್ಯಕಾಂತ ಕೋಬಾಳ, ಡಾ. ಅಹ್ಮದ್ ಪಟೇಲ್, ಹೊನಗುಂಟಾ ಗ್ರಾಮದ ಮುಖಂಡರಾದ ಶಿವಪ್ಪ ಅಲ್ಲಮಶೆಟ್ಟಿ, ರುದ್ರಗೌಡ, ಭೀಮುಗೌಡ, ಮಹಿಬೂಬ್ ಪಟೇಲ್, ಗಣಿ ಮಾಲೀಕರು, ಕಾರ್ಮಿಕರು ಸೇರಿದಂತೆ ನೂರಾರು ಜನ ಪಾಲ್ಗೊಂಡರು.
ಅಪಘಾತ: ಮತ್ತೊಬ್ಬ ಸಾವು
ಗುಲ್ಬರ್ಗ: ಬೀದರ್- ಗುಲ್ಬರ್ಗ ರಸ್ತೆಯ ಕುದುರೆಮುಖ ಹತ್ತಿರ ಈಚೇಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಸೋಲಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗುಲ್ಬರ್ಗದ ಸಾಯಿಮಂದಿರ ನಿವಾಸಿ ಆನಂದ ತಂದೆ ಚಂದ್ರಪ್ಪ ಭೀಮನೂರ (21) ಎಂಬಾತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಆಗಸ್ಟ್ 3ರಂದು ಕುದುರೆ ಮುಖ ಹತ್ತಿರ ಕಾರು ಉರುಳಿ ಬಿದ್ದ ಪರಿಣಾಮ 4 ಜನರು ಮೃತಪಟ್ಟಿದ್ದರು. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಆನಂದ ಸೋಲಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ಚಿಕಿತ್ಸೆ ಫಲಕಾರಿಯಾಗದೆ ಆತ ಭಾನುವಾರ ಸಾವಿಗೀಡಾಗಿದ್ದಾನೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.