ಶಾಲಾ ಮಕ್ಕಳಿಗೆ ಹಾಲು ವಿತರಣೆ
ಆಳಂದ: ತಾಲೂಕಿನ ಕಡಗಂಚಿ ಗ್ರಾಮದ ಸರ್ಕಾರಿ ಕನ್ಯಾ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಕ್ಷೀರಭಾಗ್ಯ ಯೋಜನೆಯಡಿ ಮಕ್ಕಳಿಗೆ ಹಾಲು ವಿತರಿಸಲಾಯಿತು. ಮುಖ್ಯೋಪಾದ್ಯಾಯಿನಿ ಮಲ್ಲಮ್ಮ ಕಂಬಾರ, ಈ ಯೋಜನೆಯ ಮಹತ್ವ ವಿವರಿಸಿ ಮಕ್ಕಳು ಶಾಲಾ ಹಾಜರಾತಿ ಹೆಚ್ಚಿಸಲು ಸರ್ಕಾರ ಜಾರಿಗೆ ತಂದಿರುವ ಕ್ಷೀರಭಾಗ್ಯ ಸದುಪಯೋಗ ಪಡೆದುಕೊಳ್ಳಲು ಮುಂದಾಗಬೇಕೆಂದರು.
ಎಸ್‌ಡಿಎಂಸಿ ಅಧ್ಯಕ್ಷ ಶರಣಬಸಪ್ಪ ತಡಕಲ್, ಶಿಕ್ಷಕರಾದ ಪ್ರಭಾವತಿ ರೇವೂರ, ವಿಜಯಲಕ್ಷ್ಮೀ, ಲಲಿತಾ ಹುಲಿಮನಿ, ಕೀರ್ತಿ ಸ್ವಾಮಿ, ಮುಖ್ಯ ಅಡುಗೆಗಾರರಾದ ಸುವರ್ಣ ಪರೀಟ್, ಮಲ್ಲಮ್ಮ ಧನ್ನಿ ಇತರರು ಪಾಲ್ಗೊಂಡಿದರು. ಸುಮಾರು 152 ಮಕ್ಕಳು ಯೋಜನೆಯ ಲಾಭ ಪಡೆಯುತ್ತಿದ್ದಾರೆ.
ಆರೋಗ್ಯ ಸೇವೆಯೇ ಮುಖ್ಯ: ಪೂಜಾರಿ
ಅಫಜಲ್ಪುರ: ನಾವು ನೀವುಗಳು ಆರೋಗ್ಯವಂತರಾಗಿದ್ದಲ್ಲಿ ಏನನ್ನಾದರು ಸಾಧಿಸಬಹುದು. ಪ್ರತಿಯೊಬ್ಬರಿಗೂ ಆರೋಗ್ಯ ಅವಶ್ಯ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಹಣಮಂತ ಪೂಜಾರಿ ಹೇಳಿದರು.
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಗೃಹರಕ್ಷಕ ಉಪಘಟಕ ಚೌಡಾಪುರ ಆಶ್ರಯದಲ್ಲಿ ನಡೆದ ಪ್ರಥಮ ಚಿಕಿತ್ಸೆ ಹಾಗೂ ಅಗ್ನಿ ಶಮನ ತರಬೇತಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಗೃಹ ರಕ್ಷಕರು ಎಲ್ಲ ಸೇವೆಗಳಿಗಿಂತ ಆರೋಗ್ಯ ಸೇವೆಯೇ ಮುಖ್ಯ ಎಂದು ತಿಳಿದುಕೊಂಡು ಕಾರ್ಯ ನಿರ್ವಹಿಸಬೇಕು. ತಮ್ಮ ಸುತ್ತಮುತ್ತಲಿನ ನಾಗರಿಕರ ಆರೋಗ್ಯ ಹಾಗೂ ಮಹಿಳೆಯರ, ಮಕ್ಕಳ ಅನಾರೋಗ್ಯ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ನೀಡಬೇಕಾಗಿದ್ದು ಗೃಹ ರಕ್ಷಕರ ಸೇವೆಯಾಗಿದೆ. ಮಹಿಳಾ ರಕ್ಷಣೆ, ಅಪಘಾತ ತುರ್ತು ಸಂದರ್ಭಗಳಲ್ಲಿ ಅತ್ಯಂತ ಜಾಗರುಕತೆಯಿಂದ ಪ್ರಥಮ ಚಿಕಿತ್ಸೆಯನ್ನು ನೀಡಬೇಕಾಗುತ್ತದೆ ಎಂದು ತಿಳಿಸಿದರು.
ಗೃಹ ರಕ್ಷಕ ದಳದ ಎಫ್ ಘಟಕ ಚವಡಾಪುರದ ಸಿದ್ದು ರಾಜಮಾನೆ ವಾರದ ಕವಾಯತ್ ಹಾಗೂ ಪ್ರಥಮ ಚಿಕಿತ್ಸೆ ಕುರಿತು ಪ್ರಾಸ್ತಾವಿಕ ಮಾತನಾಡಿದರು. ತಾಲೂಕು ಆರೋಗ್ಯ ಅಧಿಕಾರಿ ಮಹಾಂತೇಶ ಪಾಟೀಲ್, ಬಸವರಾಜರೆಡ್ಡಿ ಮತ್ತು ಮಲ್ಲಿಕಾರ್ಜುನ ಹಿರೇಮಠ ಮಾತನಾಡಿದರು. ಶ್ರೀಕಾಂತ ಟೋಣ್ಣೆ, ಶ್ರೀಶೈಲ್ ಅಂಗಡಿ, ಭಾಗಪ್ಪ ಇಸಕೂರ, ವಿನೋದ ರಾಠೋಡ ಇತರರು ಇದ್ದರು.