ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಪೊಳ್ಳು ಭರವಸೆಗಳ ಮಹಾಪೂರ

Srinivasa Murthy VN
Updated On : 13 Aug 2013, 10:09 am

ವೆಂಕಟಾಪುರ ಗ್ರಾಪಂ ವ್ಯಾಪ್ತಿಯ ವಿವಿಧ ತಾಂಡಾಗಳಲ್ಲಿ ಸೌಲಭ್ಯ ಮರೀಚಿಕೆ
ಕನ್ನಡಪ್ರಭ ವಾರ್ತೆ ಚಿಂಚೋಳಿ ಆ.12
ತಾಲೂಕಿನ ಕುಂಚಾವರಂ ಗಡಿಭಾಗದ ವೆಂಕಟಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ವಿವಿಧ ತಾಂಡಾಗಳಲ್ಲಿ ನಿರ್ಗತಿಕರಿಗೆ ಮನೆ ಕಲ್ಪಿಸುವುದರ ಜೊತೆಗೆ ಅಗತ್ಯ ಸೌಲಭ್ಯ ಒದಗಿಸುವುದಾಗಿ ಹಲವಾರು ಸಚಿವರು, ಶಾಸಕರು ತಾಂಡಾಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಭರವಸೆಗಳ ಮಹಾಪೂರವೇ ಹರಿಸಿದ್ದರು. ಆದರೆ, ಇದುವರೆಗೂ ಯಾವುದೇ ಅನುದಾನ ಬಂದಿಲ್ಲ.
ಅನೇಕ ತಾಂಡಾಗಳಲ್ಲಿ ಇನ್ನು ಬಡತನದ ಭೂತ ಬಿಟ್ಟಿಲ್ಲ. ಅನಕ್ಷರತೆ, ಮೂಢನಂಬಿಕೆ ಕೆಲವು ಧಾರ್ಮಿಕ ಸಂಪ್ರದಾಯಗಳಿಂದಾಗಿ ಇಲ್ಲಿನ ವಂಟಿಗುಡುಸಿ ಮತ್ತು ವಂಟಿಚಿಂತಾ, ಮೋಟಿಮೋಕ ತಾಂಡಾ, ಪೆದ್ದಾತಾಂಡಾ, ಜವಾಹರ ನಗರ ತಾಂಡಾ, ಭಿಕ್ಕು ನಾಯಕ ತಾಂಡಾಗಳಲ್ಲಿ 2011-12ನೇ ಸಾಲಿನಲ್ಲಿ ಬಡತನದಿಂದಾಗಿ ತಮ್ಮ ಕರುಳಿನ ಕುಡಿಗಳನ್ನೇ ಮಾರಾಟ(ಹೆಣ್ಣು ಶಿಶುಗಳ ಮಾರಾಟ ಪ್ರಕರಣ) ನಡೆದಿರುವ ವಿಷಯ ಬಯಲಿಗೆ ಬಂದಿತ್ತು.
ಸೌಲಭ್ಯ ಮರೀಚಿಕೆ: ವಂಟಿಚಿಂತಾ ತಾಂಡಾದ ಕವಿತಾ ಗಂಡ ವಿಠ್ಠಲ್ ಎಂಬುವವರಿಗೆ 3 ಹೆಣ್ಣು ಮಕ್ಕಳು, ಇನ್ನು ವಂಟಿಗುಡುಸಿ ತಾಂಡಾದ ಕವಿತಾ ತಾರಾಸಿಂಗ್ ಎಂಬುವವರಿಗೆ 5 ಜನ ಹೆಣ್ಣು ಮಕ್ಕಳಿರುವುದರಿಂದ ಬಡತನದಿಂದಾಗಿ ತಮ್ಮ ಹೆಣ್ಣು ಶಿಶುಗಳನ್ನು ಅನಾಥಾಶ್ರಮಕ್ಕೆ ಸೇರಿಸಲು ಮುಂದಾಗಿದ್ದರು. ಆಗ ಈ ದಂಪತಿ ಕುಟುಂಬಕ್ಕೆ ಆಗಿನ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಮಾಜಿ ಸಚಿವ ರೇವುನಾಯಕ, ಬಂಜಾರ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಸವರಾಜ ನಾಯಕ, ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಸಿ. ಮಂಜುಳಾ ಮತ್ತು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಅಧ್ಯಕ್ಷೆ ಸರೋಜನಿ ಭಾರದ್ವಾಜ್ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮಾಜಿ ಸಚಿವ ಕಳಕಪ್ಪ ಮತ್ತು ಸ್ಥಳೀಯ ಮಾಜಿ ಸಚಿವ ಸುನೀಲ್ ವಲ್ಯಾಪುರೆ ತಾಂಡಾಗಳಿಗೆ ಭೇಟಿ ನೀಡಿ ಭರವಸೆಯ ಮಹಾಪೂರವೇ ಹರಿಸಿದರು. ಆದರೆ ಬಡತನದಲ್ಲಿದ್ದ ಈ ಎರಡು ಕುಟುಂಬಗಳಿಗೆ ಸರ್ಕಾರದಿಂದ ಯಾವುದೇ ಸಹಾಯ ಸೌಲಭ್ಯಗಳು ದೊರೆಯಲ್ಲಿಲ್ಲವೆಂದು ಕವಿತಾ ತಾರಾಸಿಂಗ್ ನೊಂದು ಹೇಳುತ್ತಾರೆ.
ರಾಜ್ಯ ವಿಧಾನ ಪರಿಷತ್ ಸದಸ್ಯ ಅಲ್ಲಂಪ್ರಭು ಪಾಟೀಲ್ ವಂಟಿಗುಡುಸಿ ಮತ್ತು ವಂಟಿಚಿಂತಾ ತಾಂಡಾಗಳಿಗೆ ಭೇಟಿ ನೀಡಿ ತಮ್ಮ ಶಾಸಕರ ನಿಧಿಯಿಂದ ಮನೆ ನಿರ್ಮಾಣಕ್ಕಾಗಿ 1 ಲಕ್ಷ ಮಂಜೂರುಗೊಳಿಸಲಾಗುವುದೆಂದು ಕಳೆದ ವರ್ಷ ಸೆಪ್ಟೆಂಬರ್ 7ರಂದು ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಆದರೆ ಇನ್ನುವರೆಗೆ ಶಾಸಕರ ನಿಧಿಯಿಂದ ಒಂದು ಪೈಸೆ ಕೂಡ ಅನುದಾನ ಬಂದಿಲ್ಲ.
ಪೊಳ್ಳು ಆಶ್ವಾಸನೆ: ಶಾಸಕರು, ಸಚಿವರು ನೀಡಿದ ಭರವಸೆಯಂತೆ ಇನ್ನುವರೆಗೂ ಅನುದಾನ ನೀಡಿಲ್ಲ. ಕೇವಲ ಪೊಳ್ಳು ಆಶ್ವಾಸನೆ ನೀಡಿ ಜನರನ್ನು ಮರಳು ಮಾಡಿದ್ದಾರೆಂದು ತಾಂಡಾದ ಜನರು ಆರೋಪಿಸಿದ್ದಾರೆ. ಮಳೆಗಾಲದಲ್ಲಿ ಸೋರುವ ಮನೆಗಳಲ್ಲಿ ಮತ್ತು ಕತ್ತಲೆಮಯದಿಂದ ಕೂಡಿದ ಮನೆಗಳಲ್ಲಿ ಜೀವನ ನಡೆಸುವ ಇಂತಹ ಕುಟುಂಬಗಳಿಗೆ ಅಪೂರ್ಣಗೊಂಡಿರುವ ಮನೆಗಳು ಪೂರ್ಣಗೊಳಿಸಿ ಬಡಪಾಯಿಗಳಿಗೆ ಬೆಳಕಿನ್ನು ಹರಿಸಿಲ್ಲ. ನೂತನ ಶಾಸಕ ಡಾ. ಉಮೇಶ ಜಾಧವ ಕುಂಚಾವರಂ ಗಡಿಯಲ್ಲಿರುವ ಅನೇಕ ತಾಂಡಾಗಳಲ್ಲಿ ವಾಸಿಸುವ ಬಡವರಿಗೆ ವಿಶೇಷ ಪ್ಯಾಕೇಜ್‌ನಲ್ಲಿ ಅನುದಾನವನ್ನು ಸರ್ಕಾರದಿಂದ ಮಂಜೂರುಗೊಳಿಸಬೇಕಾಗಿದೆ ಎಂದು ತಾಂಡಾದ ಸಾರ್ವಜನಿಕರ ಅಭಿಪ್ರಾಯವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement