ಸಮಸ್ಯೆ ಬಗೆಹರಿಸಲು ಟ್ರ್ಯಾಕ್ಟರ್ ಮಾಲೀಕರ ಮನವಿ
ಯಾದಗಿರಿ: ಜಿಲ್ಲೆಯಲ್ಲಿ ಮರಳು ಮತ್ತು ಮಣ್ಣು ಸಾಗಾಣಿಕೆ ನಿಷೇದ ಹೇರಿರುವದರಿಂದ ಟ್ರಾಕ್ಟರ್ ಮಾಲೀಕರಿಗೆ ಹಾಗೂ ಕಟ್ಟಡ ಮತ್ತು ಕೂಲಿ ಕಾರ್ಮಿಕರಿಗೆ ಇದರಿಂದ ತುಂಬಾ ತೊಂದರೆ ಆಗಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ತಾಲೂಕಿನಲ್ಲಿ ಸುಮಾರು 350ಕ್ಕೂ ಹೆಚ್ಚು ಟ್ರ್ಯಾಕ್ಟರಗಳು ಇದ್ದು ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್‌ಗಳಲ್ಲಿ ಸಾಲ ಮಾಡಿಕೊಂಡು, ಹೊಲ, ಮನೆ, ಕಲ್ಲು, ಮಣ್ಣು ಮರಂ ಸಾಗಿಸುವ ಕೆಲಸ ಮಾಡಿಕೊಂಡು ಬಂದ ಹಣದಲ್ಲಿ ಬ್ಯಾಂಕಿನ ಸಾಲ ತೀರಿಸಬೇಕು. ಜೊತೆಯಲ್ಲಿಯೇ ಸಂಸಾರವನ್ನು ನೀಗಿಸಬೇಕು. ಹಾಗಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಕಿರುಕುಳ: ಕಟ್ಟಡಗಳಿಗೆ ಮರಳು ಇಲ್ಲದೆ ಇರುವುದರಿಂದ ಕೂಲಿ ಕಾರ್ಮಿಕರಿಗೆ ಇದರಿಂದ ತುಂಬಾ ತೊಂದರೆ ಆಗುತ್ತದೆ. ರೈತರಿಗೆ ತಾವು ಮಾಡಿದ ಟ್ರಾಕ್ಟರ್ ಸಾಲ ಕೊಡುವದಾಗಲಾರದೆ ಬ್ಯಾಂಕಿನವರ ಕಿರುಕುಳದಿಂದ ಬೇಸತ್ತು ಪರದಾಡುತ್ತಿರುತ್ತಾರೆ. ಅಧಿಕಾರಿಗಳಿಗೆ ಕಣ್ಣು ತಪ್ಪಿಸಿ ಮರಳು ತಂದರೆ ಅರಣ್ಯ ಇಲಾಖೆ ಕಂದಾಯ ಹಾಗೂ ಪೋಲಿಸರ ಕಿರುಕುಳ ಹೆಚ್ಚಾಗಿದೆ. ರೈತರಿಗೆ ಕಿರುಕುಳ ತಪ್ಪಿಸಿ ಎಂದು ಮನವಿ ಮಾಡಿದರು.
ಟೆಂಡರ್ ಅಗತ್ಯ: ಜಿಲ್ಲಾದ್ಯಂತ ಮರಳು, ಕಲ್ಲು, ಮಣ್ಣು, ಮರಮ್ ಜಿಲ್ಲೆಯ ನೈಸರ್ಗಿಕ ಸಂಪತ್ತು ಜಿಲ್ಲೆಯ ಅಭಿವೃದ್ಧಿಗೆ ಬಳಸಲು ತಕ್ಷಣ ಅನುವು ಮಾಡಿಕೊಡಬೇಕು. ಸರ್ಕಾರಿ ಹಳ್ಳಗಳನ್ನು ನಿಗದಿಪಡಿಸಿ ಮರಳು ಟೆಂಡರ್ ಶೀಘ್ರದಲ್ಲೇ ಕರೆಯಬೇಕು. ಟ್ರ್ಯಾಕ್ಟರ್ ಮಾಲೀಕರಿಗೆ ಅರಣ್ಯ ಇಲಾಖೆಯಿಂದ, ಪೊಲೀಸ್ ಇಲಾಖೆಯಿಂದ, ಗಣಿ ಇಲಾಖೆಯಿಂದ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ನಿರಂತರ ಕಿರುಕುಳ ಕೊಟ್ಟು ಹಣ ವಸೂಲಿ ಮಾಡುವುದನ್ನು ತಕ್ಷಣ ತಡೆಯಬೇಕು. ರಾಷ್ಟ್ರೀಕೃತ ಬ್ಯಾಂಕಗಳಲ್ಲಿ ಸಾಲ ಪಡೆದ ಟ್ರ್ಯಾಕ್ಟರ್ ಮಾಲೀಕರಿಗೆ ರಾಜ್ಯ ಸರ್ಕಾರದಿಂದ ಸಂಪೂರ್ಣ ಸಾಲ ಮನ್ನ ಮಾಡಬೇಕು. ರೈತಾಪಿ ಜನತೆ ಟ್ರಾಕ್ಟರ್‌ಗಳ ವಿಮಾ ಹಣ ರಾಜ್ಯ ಸರ್ಕಾರವೇ ಭರಿಸಬೇಕು ಎಂದು ಮನವಿ ಮಾಡಿದರು.
ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ದ್ವಂದ್ವ ನಿಲುವಿನಿಂದ ಟ್ರ್ಯಾಕ್ಟರ್ ಮಾಲೀಕರು ಮತ್ತು ಕೂಲಿ ಕಾರ್ಮಿಕರ ಬದುಕು ಬೀದಿ ಪಾಲಾಗುತ್ತಿದೆ.
ಈ ಹಿಂದೆ ಪ್ರತಿಭಟನಾ ರ್ಯಾಲಿ ಮುಖಾಂತರ ಸಾಕಷ್ಟು ಬಾರಿ ಮನವಿ ಕೊಟ್ಟರೂ, ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಮಾತ್ರ ಗಮನಹರಿಸದಿರುವುದರಿಂದ ಬಡ ಟ್ರ್ಯಾಕ್ಟರ್ ಮಾಲಿಕರಿಗೆ ತೊಂದರೆಯಾಗುತ್ತಿದೆ. ಬೇಡಿಕೆಗಳನ್ನು ಈಡೇರಿಸದೆ ಇದ್ದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.