ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸ್ವಸಹಾಯ ಸಂಘಗಳು ಆರ್ಥಿಕ ಶಕ್ತಿ ಹೊಂದಲಿ: ಸಚಿವ ಪಾಟೀಲ್

Srinivasa Murthy VN
Updated On : 13 Aug 2013, 10:13 am

ಕನ್ನಡಪ್ರಭ ವಾರ್ತೆ ಸೇಡಂ ಆ.12
ಸ್ವಸಹಾಯ ಸಂಘಗಳು ಆರ್ಥಿಕವಾಗಿ ಶಕ್ತಿಯುತವಾಗಬೇಕು. ಬ್ಯಾಂಕುಗಳ ಸಹಕಾರದಿಂದ ನಿರಂತರ ಚಟುವಟಿಕೆಗಳಲ್ಲಿ ತೊಡಗಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದರು.
ಇಲ್ಲಿನ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಭಾನುವಾರ ಜಿಲ್ಲಾ ಪಂಚಾಯ್ತಿ, ಜಿಲ್ಲಾ ಜಲಾನಯನ ಅಭಿವೃದ್ಧಿ ಇಲಾಖೆ, ಹಾಗೂ ಹಿಡಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಜರುಗಿದ ಸಮಗ್ರ ಜಲಾನಯನ ನಿರ್ವಹಣಾ ಹಾಗೂ ಸ್ವಸಹಾಯ ಗುಂಪುಗಳಿಗೆ ಸುತ್ತು ನಿಧಿಯ ಚೆಕ್ ವಿತರಣಾ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
371ನೇ ಕಲಂ ಜಾರಿಯಾದಲ್ಲಿ ಈ ಭಾಗಕ್ಕೆ ಹೆಚ್ಚಿನ ಮೀಸಲಾತಿ ದೊರೆಯಲಿದೆ. ಆಗ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಲಿದೆ ಎಂದ ಅವರು ರೈತ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಸುಧಾರಣೆಯಾದಾಗ ದೇಶದಲ್ಲಿನ ಬಡತನ ನಿರ್ಮೂಲನೆ ಮಾಡಬಹುದು ಎಂದರು.
ಜಿಲ್ಲಾ ಜಲಾನಯನ ಅಭಿವೃದ್ಧಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ವಿ. ಲಕ್ಷ್ಮಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಪಂ ಅಧ್ಯಕ್ಷ ಶರಣಪ್ಪ ಪಾಟೀಲ್ ತೇಲ್ಕೂರ್ ಮಾತನಾಡಿದರು. ತಾಪಂ ಸದಸ್ಯರಾದ ಸರೋಜಾ ಎಸ್. ಪೂಜಾರಿ, ಯಾದಮ್ಮ ಕೊಳ್ಳಿ, ತೇಲ್ಕೂರ್ ಗ್ರಾಪಂ ಅಧ್ಯಕ್ಷೆ ಭಾಗೀರಥಿ ಮೋನಪ್ಪ, ಶಿವಯ್ಯಸ್ವಾಮಿ ಬಿಬ್ಬಳ್ಳಿ ಇದ್ದರು.
ಬುಗ್ಗಪ್ಪ ಮಾಸ್ತರ್ ಹಾಗೂ ವಾಸುದೇವ ಬಿಬ್ಬಳ್ಳಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ರಾಜೇಶ್ವರಿ ಪಂಚಾಳ ಸ್ವಾಗತ ಗೀತೆ ಹಾಡಿದರು. ಸರ್ಕಾರಿ ಕನ್ಯಾ ಪ್ರೌಢ ಶಾಲೆಯ ಮಕ್ಕಳು ರೈತಗೀತೆ ಹಾಡಿದರು. ಕುರಕುಂಟಾ ಸರಸ್ವತಿ ಮಹಿಳಾ ಸ್ವಸಹಾಯ ಸಂಘ ಕಾರ್ಯಕರ್ತೆಯರು ಸಂಘದ ಗೀತೆ ಹಾಡಿದರು. ಲಕ್ಷ್ಮೀ ಕಟ್ಟಿಮನಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಶನ್ಮುಖ ನಿರೂಪಿಸಿದರು. ಜಗನ್ನಾಥ ಪೊಲೀಸ್ ಪಾಟೀಲ್ ವಂದಿಸಿದರು.
ಚೆಕ್ ವಿತರಣೆ: 40 ಸ್ವಸಹಾಯ ಗುಂಪುಗಳಿಗೆ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಸುತ್ತು ನಿಧಿಯ ಚೆಕ್ ವಿತರಿಸಿದರು.

ಇಂದು ಧ್ವಜಾರೋಹಣ ತರಬೇತಿ ಶಿಬಿರ
ಗುಲ್ಬರ್ಗ: ರಾಜ್ಯ ಭಾರತ ಸೇವಾ ದಳದ ಶಿಕ್ಷಕರ ಸಂಘ ಮತ್ತು ಡಿ.ಇಡಿ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಆ.13ರಂದು ಬೆಳಗ್ಗೆ 11 ಗಂಟೆಗೆ ನಗರದ ಜಗತ್ ದರ್ಗಾ ರಸ್ತೆಯಲ್ಲಿರುವ ಸರ್ಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆಯಲ್ಲಿ ರಾಷ್ಟ್ರ ಧ್ವಜಾರೋಹಣದ ವಿಧಿ ವಿಧಾನಗಳನ್ನು ಪ್ರಾಯೋಗಿಕ ಮತ್ತು ಬೌದ್ಧಿಕವಾಗಿ ಒಂದು ದಿನದ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ.
ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಈ ತರಬೇತಿ ಶಿಬಿರ ನಡೆಸಿಕೊಡಲಿದ್ದಾರೆ. ತರಬೇತಿಗೆ ಹಾಜರಾಗುವ ಶಾಲಾ- ಕಾಲೇಜಿನ ಶಿಕ್ಷಕರಿಗೆ, ಮುಖ್ಯೋಪಾಧ್ಯಾಯರಿಗೆ, ವಿವಿಧ ಇಲಾಖೆಯ ಮುಖ್ಯಸ್ಥರಿಗೆ ಧ್ವಜಾರೋಹಣ ಕಾರ್ಯ ನೆರವೇರಿಸುವ ಕುರಿತು ತರಬೇತಿ ನೀಡಲಾಗುವುದು.
ತಮ್ಮ ಕಚೇರಿಯಲ್ಲಿನ ರಾಷ್ಟ್ರ ಧ್ವಜ ಹಾಗೂ ಧ್ವಜ ಕಟ್ಟುವ ದಾರ ಮತ್ತು ತಮ್ಮ ಸಂಸ್ಥೆಯಿಂದ ಬಿಡುಗಡೆ ಪತ್ರದೊಂದಿಗೆ ಬಿಳಿಯ ಸಮವಸ್ತ್ರ ಧರಿಸಿ ತರಬೇತಿಗೆ ಹಾಜರಾಗಬೇಕು. ತರಬೇತಿಗೆ ಹಾಜರಾದವರಿಗೆ ಹಾಜರಾತಿ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಗುವುದು. ಆ.15ರ ಸ್ವಾತಂತ್ರ್ಯ ದಿನಾಚರಣೆಯಂದು ವ್ಯವಸ್ಥಿತವಾಗಿ ಹಾಗೂ ಸರಿಯಾದ ವಿಧಾನದಲ್ಲಿ ಧ್ವಜಾರೋಹಣ ಮಾಡಲು ಈ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಶಾಲಾ-ಕಾಲೇಜುಗಳ, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಭಾಗವಹಿಸಬೇಕು ಎಂದು ಶಿವಲಿಂಗಪ್ಪ ಗೌಳಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement