ಹುಣಸಗಿ ವಿತರಣಾ ಕಾಲುವೆಗೆ ಬಾಗಿನ
ಕ.ಪ್ರ. ವಾರ್ತೆ ಹುಣಸಗಿ ಆ. 11
ಜಲಾಶಯಗಳಿಂದ ನೀರನ್ನು ಉಪಯೋಗಿಸುವ ಪ್ರತಿಯೊಬ್ಬ ರೈತನೂ ನೀರಾವರಿ ತಜ್‌ಞನಾಗಬೇಕು. ಜಲಾಶಯದಲ್ಲಿ ನೀರಿನ ಮಟ್ಟ ಎಷ್ಟಿದೆ ಎಷ್ಟು ದಿನಗಳ ಕಾಲ ನಾವು ನೀರನ್ನು ಬಳಸಬಹುದಾಗಿದೆ ಎಂದು ಜಲಾಶಯದ ಸಂಪೂರ್ಣ ಮಾಹಿತಿಗಳು ಪ್ರತಿಯೊಬ್ಬ ರೈತರು ತಿಳಿದುಕೊಳ್ಳುವುದು ಅವಶ್ಯವಾಗಿದೆ ಎಂದು ಭಾರತೀಯ ಕಿಸಾನ್ ಸಂಘದ ಉತ್ತರ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಾಮನಟಗಿ ಹೇಳಿದರು.
ಇಲ್ಲಿಗೆ ಸಮೀಪದ ದ್ಯಾಮನಹಾಳ ಗ್ರಾಮದ ಹುಣಸಗಿ ವಿತರಣಾ ಕಾಲುವೆಯಲ್ಲಿ ನಡೆದ ಕೃಷ್ಣೆಗೆ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನೀರು ಪೂರೈಸಿ: ನಮ್ಮ ಜಲಾಶಯ, ಮುಖ್ಯ ಕಾಲುವೆ, ವಿತರಣಾ ಕಾಲುವೆಗಳ ರಕ್ಷಣೆ ಮತ್ತು ಕಾಳಜಿ ನಮ್ಮ ಹೊಣೆಯಾಗಿರುತ್ತದೆ. ಕೃಷ್ಣಾ ಅಚ್ಚಕಟ್ಟು ಪ್ರದೇಶಕ್ಕೆ 173 ಟಿಎಂಸಿ. ನೀರನ್ನು ನಿಗದಿಪಡಿಸಿ, ಅದೇ ನೀರಲ್ಲಿ ಕೊಪ್ಪಳ ಜಿಲ್ಲೆ ಕುಷ್ಟಗಿ, ಯಲಬುರ್ಗ, ಕೊಪ್ಪಳ, ರೋಣ, ಬಾಗಲಕೋಟಿ, ಹುನಗುಂದ, ವಿಜಾಪುರ, ಬಾಗೇವಾಡಿ, ಸಿಂದಗಿ, ಇಂಡಿ, ಜೇವರ್ಗಿ, ಸುರಪುರ, ಶಹಾಪುರ, ದೇವದುರ್ಗ, ಲಿಂಗಸ್ಗೂರು, ಹಾಗೂ ಮಾನವಿ ತಾಲೂಕಿನ ಅಂದಾಜು 18 ಲಕ್ಷ ಎಕರೆಗೆ ನೀರಾವರಿ ಪೂರೈಸಬೇಕು.
ನಮಗೆ ಬೇಕಾದಷ್ಟು ಮಾತ್ರ ನೀರನ್ನು ಉಪಯೋಗಿಸಿದಾಗ ಮಾರ್ಚ್ ಕೊನೆವರೆಗೆ ನೀರು ಹರಿಯಲು ಸಾಧ್ಯವಾಗಬಹುದು.
ಹುಣಸಗಿ ವಿತರಣಾ ಕಾಲುವೆ (ಎಚ್ಬಿಸಿ) ದ್ಯಾಮನಹಾಳ ಕಕ್ಕೇರಾ, ದೇವಾಪುರ, ತಿಂಥಣಿ, ದೇವತಕಲ್ ಗ್ರಾಮಗಳು ಸೇರಿದಂತೆ ಸುಮಾರು 50 ಸಾವಿರ ಎಕರೆಗೆ ನಿರುಣಿಸುವ ಸಾಮರ್ಥ್ಯ ಈ ಕಾಲುವೆ ಹೊಂದಿರುತ್ತದೆ. ಅವಳಿ ಜಲಾಶಯಗಳ ಸಂಪೂರ್ಣ ನೀರಿನ ಬಳಕೆಗೆ ಆಡಳಿತ ನಡೆಸುವ ಶಾಸಕರುಗಳಿಗೆ ಕೆಬಿಜೆಎನ್‌ಎಲ್ ಅಧಿಕಾರಿಗಳಿಗೆ ಪರಸ್ಪರ ಸಹಕಾರ ನೀಡಬೇಕಾಗಿದೆ ಎಂದು ತಿಳಿಸಿದರು.
ಹೊಣೆಗಾರಿಕೆ: ಹುಣಸಗಿ ವೃತ್ತ ನಿರೀಕ್ಷಕ, ಎಂ.ಜಿ. ಸತ್ಯನಾರಾಯಣರಾವ್, ವರುಣನ ಅನುಗ್ರಹದಿಂದ ಕೃಷ್ಣೆ ಮೈದುಂಬಿ ಹರಿಯುವುದನ್ನು ನೋಡಿ ಸಂತಸವಾಗಿದೆ. ರೈತರು ಕಾಳಜಿ ಪೂರ್ವಕವಾಗಿ ನೀರನ್ನು ಉಪಯೋಗಿಸಬೇಕು ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾಮದ ಹಿರಿಯ ಮನೋಹರರಾವ್ ಕುಲಕರ್ಣಿ, ಭೂಮಿಯಲ್ಲಿ ಮೂರು ಪಾಲು ನೀರು ಇದೆ.
ಅದರಲ್ಲಿ ಉಪಯೋಗಕ್ಕಾಗಿ ಲಭ್ಯವಿರುವ ನೀರು ಅಲ್ಪಪ್ರಮಾಣದ್ದು, ವ್ಯರ್ಥ ಮಾಡದೇ ಪ್ರತಿಯೊಬ್ಬ ರೈತರು, ಹಸಿರೇ ಉಸಿರು ಎಂದು ಸಂಕಲ್ಪ ಮಾಡಿದಾಗ ವರುಣ ನಮಗೆ ಸುಭಿಕ್ಷತೆಯಿಂದ ಮಳೆ ನೀಡಿ ರೈತನನ್ನು ಸಲಹುತ್ತಾನೆ. ರೈತರಾದ ನಮ್ಮ ಬದ್ಧತೆ ಹೊಣೆಗಾರಿಕೆ ನಾವು ಮರೆಯಬಾರದು ಎಂದು ಕಿವಿಮಾತು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹುಣಸಗಿ ನೀಲಕಂಠೇಶ್ವರ ಮಹಿಳಾ ಪತ್ತಿನ ಬ್ಯಾಂಕಿನ ಅಧ್ಯಕ್ಷೆ, ಕವಿತಾ ಗುರಲಿಂಗಪ್ಪ ರೇವಡಿ ಕೃಷ್ಣೆಗೆ ಪೂಜೆಯನ್ನು ಸಲ್ಲಿಸಿದರು. ಗೌಡಪ್ಪಗೌಡ ಕುಪ್ಪಿ ಅತಿಥಿಗಳಾಗಿದ್ದರು.
ಕಾರ್ಯಕ್ರಮದಲ್ಲಿ ಐನೂರಕ್ಕೂ ಹೆಚ್ಚು ಮುತ್ತೈದೆಯರು, ಹುಣಸಗಿ, ಬಲಶೆಟ್ಟಿಹಾಳ, ಕುಪ್ಪಿ, ಕೊಡೇಕಲ್ಲ, ನಾರಾಯಣಪುರ ಗ್ರಾಮಗಳ ರೈತರು ಭಾಗವಹಿಸಿದ್ದರು. ರೈತ ಗೀತೆ ಮೂಲಕ ಸ್ಥಳಿಯ ಶಾಲಾ ವಿದ್ಯಾರ್ಥಿಗಳು ಸ್ವಾಗತಿಸಿದರು. ನಂತರ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು. ಕಾಲುವೆಯ ಮುಂದುಗಡೆ ದೊಡ್ಡ ಗಾತ್ರದ ರಂಗೋಲಿ ನೋಡುಗರ ಕಣ್ಮನಸೆಳೆಯಿತು. ಗ್ರಾಮದ ಲಕ್ಷ್ಮೀಬಾಯಿ ಬಿರಾದಾರ, ಸರಸ್ವತಿ ಕುಲಕಣರ್, ಅಂಜನಾ, ವಿಜಯಲಕ್ಷ್ಮೀ ಸೇರಿದಂತೆ ಇತರರು ವಾಸುದೇವ ನಿರೂಪಿಸಿದರು. ಲಕ್ಷ್ಮೀಕಾಂತ ವಂದಿಸಿದರು.