ಸಿಡಿಲಿಗೆ 13ಕ್ಕೂ ಹೆಚ್ಚು ಜಾನುವಾರು ಬಲಿ
ಯಲಬುರ್ಗಾ: ಗುಡ್ಡದಲ್ಲಿ ಮೇಯುತ್ತಿದ್ದ ಆಕಳು, ಕರುಗಳು ಸೇರಿದಂತೆ 13ಕ್ಕೂ ಹೆಚ್ಚು ಜಾನುವಾರುಗಳು ಸಿಡಿಲು ಬಡಿದು ಮೃತಪಟ್ಟ ಘಟನೆ ತಾಲೂಕಿನ ವಜ್ರಬಂಡಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ. ಸೋಮವಾರ ಸಂಜೆ ಭಾರೀ ಮಳೆ ಸುರಿಯಿತು. ಈ ಸಂದರ್ಭದಲ್ಲಿ ಸಿಡಿಲು ಬಡಿದು 9 ಆಕಳು ಹಾಗೂ 4 ಕರುಗಳು ಸ್ಥಳದಲ್ಲಿಯೇ ಮೃತಪಟ್ಟಿವೆ. ಈ ಗ್ರಾಮದ ಶರಣಪ್ಪ ತಳವಾರ, ಶಂಕ್ರಪ್ಪ, ರಾಮಣ್ಣ ದೇವಪ್ಪ ತಳವಾರ ಎಂಬುವರಿಗೆ ಸೇರಿದ ಈ ಜಾನುವಾರುಗಳನ್ನು ಮೇಯಿಸಿಕೊಂಡು ಮನೆಗೆ ಬರುವ ಹೊತ್ತಿನಲ್ಲಿ ಈ ಅವಘಡ ಸಂಭವಿಸಿದೆ. ಅಧಿಕಾರಿಗಳು ರೈತರಿಗೆ ಸೂಕ್ತ ಪರಿಹಾರ ದೊರಕಿಸಿಕೊಡಬೇಕು ಎಂದು ವಿವಿಧ ಸಂಘಟನೆಗಳ ಮುಖಂಡರಾದ ಚಂದ್ರಯ್ಯ ಹಿರೇಮಠ, ಎಸ್.ಎಸ್. ಪಾಟೀಲ, ರಾಮಣ್ಣ ಪೂಜಾರ, ಹುಲಗಪ್ಪ ವಡ್ಡರ, ಇಮಾಮಸಾಬ ಮುಜಾವರ್ ಮತ್ತಿತರರು ಆಗ್ರಹಿಸಿದ್ದಾರೆ.