ಅಯ್ಯಪ್ಪ ಮಾಲಾಧಾರಿಗಳಿಗೆ ಪ್ರೋತ್ಸಾಹ ಧನಕ್ಕೆ ಆಗ್ರಹ
ಯಾದಗಿರಿ: ಪ್ರತಿವರ್ಷ ಕೇರಳದ ಅಯ್ಯಪ್ಪ ದೇವಸ್ಥಾನಕ್ಕೆ ರಾಜ್ಯದಿಂದ ತೆರಳುವ ಲಕ್ಷಾಂತರ ಭಕ್ತರಿಗೆ ರಾಜ್ಯ ಸರ್ಕಾರ ತಲಾ 5 ಸಾವಿರ ಪ್ರೋತ್ಸಾಹ ಧನ ನೀಡಲು ಆಗ್ರಹಿಸಿ ಶ್ರೀರಾಮ ಸೇನಾ ತಾಲೂಕಾ ಘಟಕ ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಒತ್ತಾಯಿಸಿದರು. ದೇಶದ ರಾಜಕಾರಣಿಗಳು ನಮ್ಮದು ಜಾತ್ಯಾತೀತ ರಾಷ್ಟ್ರ ಎಂದು ಹೇಳುವ ಅವರು ಇಲ್ಲಿ ವಾಸಿಸುತ್ತಿರುವ ಮುಸ್ಲಿಂರಿಗೆ ಬೇರೆ ದೇಶದ ಹಜ್ಯಾತ್ರೆಗೆ ತೆರಳುವ ಪ್ರತಿಯೊಬ್ಬರಿಗೆ 42 ಸಾವಿರ ನೀಡುತ್ತಾರೆ. ಆದರೆ ಹಿಂದುಗಳ ಧಾರ್ಮಿಕ ಕ್ಷೇತ್ರ ಶಬರಿ ಮಲೆಗೆ ತೆರಳಲು ಪ್ರೋತ್ಸಾಹ ಹಣ ನೀಡುತ್ತಿಲ್ಲ. ಈ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಪ್ರತಿ ತಾಲೂಕ ಕೇಂದ್ರದಲ್ಲಿ ಅಯ್ಯಪ್ಪ ಭವನ ನಿರ್ಮಿಸಬೇಕು. ಕೇರಳ ಪ್ರವೇಶಿಸುವ ಭಕ್ತರ ವಾಹನಗಳಿಗೆ ಅಲ್ಲಿನ ಸರ್ಕಾರ ಬೇಕಾಬಿಟ್ಟಿ ತೆರಿಗೆ ವಿಧಿಸುತ್ತಿದೆ. ಅದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು. ದೇವಸ್ಥಾನದಲ್ಲಿ ಭಕ್ತರ ಅನುಕೂಲಕ್ಕಾಗಿ ರಾಜ್ಯದ ಸರ್ಕಾರಿ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಹಾಗೂ ಆರೋಗ್ಯ ಇಲಾಕೆ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಬೇಕೆಂದು ಮನವಿ ಪತ್ರದಲ್ಲಿ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸೇನೆಯ ತಾಲೂಕ ಘಟಕದ ಅಧ್ಯಕ್ಷ ಸಿದ್ದಗೌಡ ಪಾಟೀಲ್, ರಘು ಚವ್ಹಾಣ, ರವಿ ಬಿದರಿ, ಮುನ್ನಾಸಿಂಗ್ ಠಾಕೂರ್, ಭೀಮಾಶಂಕರ್, ವಿಶಾಲ, ಗಣೇಶ ಪೂಜಾರಿ, ಕುಲದೀಪ್ ಜೈನ್, ಮಹೇಶ ಕಿರಗಿ, ಬಸವರಾಜ ಸಿಂದೆ, ಕೃಷ್ಣಮೂರ್ತಿ, ಮಹೇಂದ್ರ ಮಡ್ಡಿ ಇತರರು ಇದ್ದರು.