ಇನ್ನೂ ಎದ್ದೇಳದ ಕುಂಭಕರ್ಣ ಸರ್ಕಾರ
ಶೇಷಮೂರ್ತಿ ಅವಧಾನಿ/ಕುಮಾರಸ್ವಾಮಿ
ಕ.ಪ್ರ. ವಾರ್ತೆ ಗುಲ್ಬರ್ಗ/ಗುರುಮಠಕಲ್ ಡಿ.23
ತೊಗರಿ ರೈತರ ದುರಾದೃಷ್ಟ ಎಂದೇ ಹೇಳಬೇಕು, ಲೆಹರ್, ಹೆಲನ್ ಚಂಡಮಾರುತಗಳು ಸೃಷ್ಟಿಸಿದ್ದ ಹವಾಮಾನ ವೈಪರಿತ್ಯಗಳನ್ನೆಲ್ಲ ಮೆಟ್ಟಿ ಈ ಬಾರಿ ತೊಗರಿ ಬಂಪರ್ ಫಸಲು ಬಂದರೂ ಬೆಲೆ ಪಾತಾಳ ಸೇರಿದೆ.
ಸುಗ್ಗಿ ಆರಂಭದಲ್ಲೇ ಕಂಡಿರುವ ಈ ಬೆಳವಣಿಗೆ ರೈತರ ನೆಮ್ಮದಿ ಕದಡಿದೆ. ತೊಗರಿ ಫಸಲು ವೈನಾಗೈತಿ, ಬಂಗಾರದ ಬೆಳೆಯಿಂದ ಮನೆ- ಮನ ತುಂಬಿಸಿಕೊಳ್ಳಬಹುದು... ಎಂಬ ರೈತರ ಲೆಕ್ಕಾಚಾರ ಬೆಲೆ ಕುಸಿತದ ಭೂತ ನುಚ್ಚುನೂರು ಮಾಡಿದೆ.
ಬೆಲೆ ಅದೆಷ್ಟು ಪರಿ ಕುಸಿದಿದೆ ಎಂದರೆ ಕೇಂದ್ರ ಸರ್ಕಾರ ಕ್ವಿಂಟಲ್ ತೊಗರಿಗೆ ನಿಗದಿಪಡಿಸಿರುವ 4,300 ಹಾಗೂ ಈಗಿನ ಮಾರುಕಟ್ಟೆ ಬೆಲೆಗೆ ಹೋಲಿಸಿದಲ್ಲಿ 400 ಬೆಲೆಯಲ್ಲಿ ಕುಸಿತ ಕಂಡಿದೆ. ಮಾರುಕಟ್ಟೆಯಲ್ಲಿ ಕ್ವಿಂಟಲ್ ತೊಗರಿ 3,875ರಿಂದ 3,900 ಬೆಲೆಯಲ್ಲಿ ಮಾರಾಟವಾಗುತ್ತಿದೆ.
ಕೇಂದ್ರ ನಿಗದಿಪಡಿಸುವ ಬೆಂಬಲ ಬೆಲೆಗಿಂತ ಕಡಿಮೆ ದರ ಮಾರುಕಟ್ಟೆಯಲ್ಲಿ ನಿಗದಿಯಾಗಿ ಮಾರಾಟ ಸಾಗಿದರೆ ಇದನ್ನು ಸಂಕಷ್ಟದ ಸಂದರ್ಭ ಎಂದು ಸರ್ಕಾರವೇ ಮಧ್ಯಪ್ರವೇಶ ಮಾಡಿ ಲಾಭದಾಯಕ ಬೆಲೆ ನಿಗದಿಪಡಿಸಿ ತೊಗರಿ ಖರೀದಿಸಬೇಕು ಎಂಬುದು ನಿಯಮ. ಆದರೀಗ ಬೆಂಬಲ ಬೆಲೆಗಿಂತ 400ರಿಂದ 500 ರುಪಾಯಿನಷ್ಟು ಬೆಲೆ ಕುಸಿತ ಕಂಡರೂ ಸಹ ಸರ್ಕಾರ ಇನ್ನೂ ತೊಗರಿ ರೈತರತ್ತ ಕ್ಯಾರೆ ಎನ್ನುತ್ತಿಲ್ಲ.
ಬಂಪರ್ ಫಸಲು: ಕೃಷಿ ಇಲಾಖೆ ಅಂಕಿ- ಸಂಖ್ಯೆ ಪ್ರಕಾರ, ಗುಲ್ಬರ್ಗ ಜಿಲ್ಲೆಯೊಂದರಲ್ಲೇ ಈ ಬಾರಿ 4 ಲಕ್ಷ ಹೆಕ್ಟೇರ್ ತೊಗರಿ ಬಿತ್ತನೆಯಾಗಿದೆ, ಇಳುವರಿ ಚೆನ್ನಾಗಿರುವ ಕಾರಣ ಈ ಬಾರಿ ಮಾರುಕಟ್ಟೆಯಲ್ಲಿ ತೊಗರಿ ಆವಕ ಹಿಗ್ಗುವುದು ಸಹಜ. ಡಿಸೆಂಬರ್ ಆರಂಭದಲ್ಲೇ ಗುಲ್ಬರ್ಗ ಮಾರುಕಟ್ಟೆಗೆ 1 ಲಕ್ಷ ಕ್ವಿಂಟಲ್ ತೊಗರಿ ಆವಕವಾಗಿದೆ ಎಂದರೆ ಬರುವ ದಿನಗಳಲ್ಲಿ ಈ ಪ್ರಮಾಣ ಇನ್ನೂ ಅಧಿಕವಾಗುವುದು ಸಹಜ.
ಮೂಲಗಳ ಪ್ರಕಾರ, ಈಗಾಗಲೇ ಅಕ್ಕಪಕ್ಕದ ಜಿಲ್ಲೆಗಳಾದ ಯಾದಗಿರಿ, ಬೀದರ್, ರಾಯಚೂರುಗಳಲ್ಲಿಯೂ ತೊಗರಿ ಆವಕ ಹೆಚ್ಚುತ್ತ ಸಾಗಿದೆ. ಈಗಾಗಲೇ ಈ ಜಿಲ್ಲೆಗಳಲ್ಲಿ 2 ಲಕ್ಷ ಆಚೀಚೆ ತೊಗರಿ ಮಾರುಕಟ್ಟೆಗೆ ಬಂದಿದೆ. ಆರಂಭದಲ್ಲೇ ಬೆಲೆ ಈ ಪರಿಯಲ್ಲಿ ಬಿದ್ಹೋಗಿರುವಾಗ ಆವಕ ಹೆಚ್ಚಿದರೆ ಅದ್ಯಾವ ಹಂತ ತಲುಪಬಹುದು ಎಂಬುದನ್ನು ನೆನೆದೇ ರೈತರು ಕಂಗಾಲಾಗುತ್ತಿದ್ದಾರೆ.
ಹೆಚ್ಚಿದ ಖರ್ಚು- ವೆಚ್ಚ: ಸುಮಾರು 10 ಬಾರಿ ಕೀಟನಾಶಕ ಸಿಂಪರಣೆ, ಬಿತ್ತುವ ಸಂದರ್ಭದಲ್ಲಿ ರಸಗೊಬ್ಬರ ಬಳಕೆ, ಕಳೆ ನಿರ್ವಹಣೆ... ಹೀಗೆ ಹಲವು ಹಂತಗಳಲ್ಲಿ ರೈತರು ತೊಗರಿ ಉಳುಮೆಗೆ ಹೆಚ್ಚಿನ ವೆಚ್ಚ ಮಾಡಿದ್ದಾರೆ. ಎಕರೆಗೆ ಏನಿಲ್ಲವೆಂದರೂ 10ರಿಂದ 12 ಸಾವಿರ ಉತ್ಪಾದನಾ ವೆಚ್ಚ ಮಾಡಿರುವ ರೈತರು ಕ್ವಿಂಟಲ್ಗೆ 6 ಸಾವಿರಕ್ಕೂ ಅಧಿಕ ಬೆಲೆ ನಿರೀಕ್ಷಿಸಿದ್ದಾರೆ.
ಆದರೆ ತೊಗರಿ ರಾಶಿಯೊಂದಿಗೆ ಮಾರುಕಟ್ಟೆಗೆ ಹೋದರೆ ಅಲ್ಲಿ ಬೆಲೆ ಪಾತಾಳ ಸೇರಿರುವುದು ಕಂಡ ಹೌಹಾರುತ್ತಿದ್ದಾರೆ, ತೊಗರಿಯನ್ನು ಮನೆಯಲ್ಲಿಯೂ ಸಂಗ್ರಹಿಸಿಡಲಾಗದೆ, ಇತ್ತ ಅಗ್ಗದ ದರದಲ್ಲಿ ಮಾರಲು ಆಗದೆ ರೈತರು ಪರದಾಡುತ್ತಿದ್ದಾರೆ.
ಸಣ್ಣ- ಅತಿಸಣ್ಣ ರೈತರೇ ಸುಗ್ಗಿ ಆರಂಭದಲ್ಲಿ ಹೆಚ್ಚು(ಶೇ.60ರಷ್ಟು ತೊಗರಿ ಇಳುವರಿ ಸಣ್ಣ ರೈತರ ಕೊಡುಗೆ) ಮಾರುಕಟ್ಟೆಗೆ ಮಾಲು ಸಮೇತ ಬರೋದು. ಲಾಭದ ಬೆಲೆ ಅದೇನಿದ್ದರೂ ಇವರಿಗೆ ದೊರಕಿದರಷ್ಟೇ ಸರ್ಕಾರದ ಬೆಂಬಲ ಬೆಲೆ, ಖರೀದಿ ಇತ್ಯಾದಿ ನೀತಿಗಳು ಸಾರ್ಥಕತೆ ಪಡೆಯೋದು. ಇಲ್ಲಿ ನೋಡಿದರೆ ಸರ್ಕಾರ ಇನ್ನೂ ತೊಗರಿ ಖರೀದಿ ವಿಚಾರದಲ್ಲಿ ಮಾತನ್ನೇ ಆಡದಿರುವುದು ರೈತರ ಚಿಂತೆಗೆ ಕಾರಣವಾಗಿದೆ.
ಮಲಗಿದೆ ತೊಗರಿ ಮಂಡಳಿ: ತೊಗರಿ ರೈತರ ಹಿತಾಸಕ್ತಿ ಕಾಪಾಡುವ ಉದ್ದೇಶದೊಂದಿಗೆ ದಶಕದ ಹಿಂದೆಯೇ ಸ್ಥಾಪನೆಯಾಗಿರುವ ತೊಗರಿ ಮಂಡಳಿ ಇದ್ಯಾವುದರ ಪರಿವೆಯೇ ಇರದಂತೆ ಬೆಚ್ಚಗೆ ಮಲಗಿದೆ. ಮಂಡಳಿಗೆ ವ್ಯವಸ್ಥಾಪಕರಿಲ್ಲ, ಇತರೆ ಪೂರಕ ಸಿಬ್ಬಂದಿಯೂ ಇಲ್ಲ, ಮೇಲಾಗಿ ಅಧ್ಯಕ್ಷರೂ ಇದಕ್ಕಿಲ್ಲ. ಎಪಿಎಂಸಿ ಪಕ್ಕದಲ್ಲೇ ಕಚೇರಿ ಹೊಂದಿದ್ದರೂ ಮಾರುಕಟ್ಟೆ ಬೆಳವಣಿಗೆ ಮೇಲೆ ಗಮನವಿರದೆ ಇದ್ಯಾವ ಉಸಾಬರಿ ತನಗ್ಯಾಕೆ ಎಂಬಂತೆ ನಿರ್ಲಿಪ್ತವಾಗಿದೆ. ಏನಾದರೂ ವಿಚಾರಿಸಿದರೆ ಗೊತ್ತಿಲ್ಲ ಎಂಬುದೇ ಮಂಡಳಿಯ ಸಿದ್ಧ ಉತ್ತರವಾಗಿದೆ.
ಹೋರಾಟಗಳ ಧ್ವನಿ ಕ್ಷೀಣ: ತೊಗರಿ ಆಮದಾಗುತ್ತಿರುವುದೇ ಬೆಲೆ ಬೀಳಲು ಕಾರಣ, ಆಮದು ಮೇಲೆ ಶೇ.30 ಸುಂಕ ವಿಧಿಸಬೇಕು, ಕೇಂದ್ರದ ಕನಿಷ್ಠ ಬೆಂಬಲ ಬೆಲೆ(ಕ್ವಿಂಟಲ್ಗೆ) 4,300ಕ್ಕೆ ರಾಜ್ಯ ಸರ್ಕಾರವೂ ತನ್ನ ಪಾಲು ಸೇರಿಸಿ ಪ್ರೋತ್ಸಾಹಕರ ಬೆಲೆ ಘೋಷಣೆ ಮಾಡಿ ರೈತರ ನೆರವಿಗೆ ಬರಬೇಕು ಎಂದು ವಿವಿಧ ರೈತ ಸಂಘಟನೆಗಳು ಅಲ್ಲಲ್ಲಿ ಹೋರಾಟ ಆರಂಭಿಸಿವೆಯಾದರೂ ಅವುಗಳ ತೀವ್ರತೆ ಅಷ್ಟಾಗಿಲ್ಲ. ಹೀಗಾಗಿ ತೊಗರಿ ಬೆಲೆ ಕನಿಷ್ಠ ಬೆಂಬಲ ಬೆಲೆಗಿಂತಲೂ ಕುಸಿದಿದೆ ಎಂಬಂಶ ಎಲ್ಲಿಯೂ ಚರ್ಚೆಯಲ್ಲಿಲ್ಲದಂತಾಗಿದೆ.
ಸಿಎಂ, ಕೃಷ್ಣ ನುಡಿದಂತೆ ನಡೆಯುವರೇ...?
ಸಿಎಂ ಸಿದ್ದರಾಮಯ್ಯ ಹಾಗೂ ಕೃಷಿ ಸಚಿವ ಕೃಷ್ಣ ಬೈರೇಗೌಡ ಗುಲ್ಬರ್ಗಕ್ಕೆ ಬಂದಾಗ ತೊಗರಿ ಬೆಲೆ ಕನಿಷ್ಠ ಬೆಂಬಲ ಬೆಲೆಗಿಂತ ಕುಸಿತ ಕಂಡಲ್ಲಿ ತಕ್ಷಣ ಸರ್ಕಾರ ಪ್ರೋತ್ಸಾಹಕರ ಬೆಲೆ ನಿಗದಿಪಡಿಸಿ ಖರೀದಿಗೆ ಮುಂದಾಗುತ್ತದೆ ಎಂದು ಹೇಳಿದ್ದರು. ರೈತರು ಈ ಮಾತುಗಳನ್ನೇ ಮೆಲಕು ಹಾಕುತ್ತ ಅದ್ಯಾವಾಗ ಸರ್ಕಾರ ತಕ್ಕಡಿ- ಗೋಣಿಚೀಲದೊಂದಿಗೆ ನೆರವಿಗೆ ಬರುವುದೋ ಎಂಬ ನಿರೀಕ್ಷೆಯಲ್ಲಿದ್ದಾರೆ
ಬಕ್ಳ ಲಾಗೋಡಿ ಮಾಡೀವ್ರಿ
ತೊಗರಿಗೆ ಲಾಗೋಡಿ(ಖರ್ಚು) ಬಕ್ಳ(ಬಹಳ) ಆಗ್ಯದ್ರಿ, ಮಂಜ ಮುಸುಕಿದಾಗ, ಕೀಟಗಳು ಕಂಡಾಗ ಔಷಧಿ(ಕೀಟನಾಶಕ) ಹೊಡದೇವಿ. ಹೀಂಗಾಗಿ ಫಸಲು ವೈನಾಗೈತಿ. ಇಳುವರಿನೂ ಎಕರೆಗೆ 3ರಿಂದ 4 ಕ್ವಿಂಟಲ್ ಸರಾಸರಿ ಬರ್ಲಿಕತ್ತೈತಿ. ಈಗ ನೋಡಿದ್ರ ಬೆಲೆ ಬಿದ್ಹೋಗ್ಯದ, ನಮ್ಮ ಹಣಿಬಾರ ಖರಾಬ್, ಕ್ವಿಂಟಲ್ಗೆ ಕನಿಷ್ಠ 6 ಸಾವಿರ ಬೆಲೆ ಸಿಕ್ರ ವೈನದ, ಇಲ್ಲಾಂದ್ರ ಸಾಲ- ಸೋಲದಲ್ಲೇ ಕೊಳೀಬೇಕು, ಸರ್ಕಾರ ತಕ್ಷಣ ಖರೀದಿಗೆ ಬಂದ್ರ ಚಂದದ, ಇಲ್ಲಾಂದ್ರ ನಮ್ಮ ಗೋಳು ದೇವರೇ ಬಲ್ಲ.
ಭೀಮರಾಯ ಪೂಜಾರಿ, ತೊಗರಿ ರೈತ, ಫರತಾಬಾದ್
ರೈತರು ಬೆಳೆದ ಬೆಳೆಗೆ ಸರಿಯಾದ ಬೆಂಬಲ ಬೆಲೆಯನ್ನು ನೀಡಬೇಕಾದ ಸರ್ಕಾರ ಇದರ ಬಗ್ಗೆ ಗಮನ ಹರಿಸುತ್ತಿಲ್ಲ. ರೈತ ವಿರೋಧಿ ಧೋರಣೆಯನ್ನು ಸರ್ಕಾರ ಅನುಸರಿಸುತ್ತಿದೆ. ಕೂಡಲೇ ಪ್ರತಿಯೊಂದು ಹೋಬಳಿಗಳಲ್ಲಿ ತೊಗರಿ ಖರೀದಿ ಪ್ರಾರಂಭ ಮಾಡಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯವಾಗುತ್ತದೆ.
ಸೋಮಶೇಖರ, ರೈತ ಕೃಷಿ ಕಾರ್ಮಿಕ ಸಂಘಟನೆ ಅಧ್ಯಕ್ಷ, ಯಾದಗಿರಿ
ಸರ್ಕಾರವು ಕಳೆದ ವರ್ಷ ನೀಡಿದಂತೆ ತೊಗರಿಗೆ ಬೆಂಬಲ ಬೆಲೆ ನಿಗದಿ ಮಾಡಿದ್ದಾರೆ. ನಾವು ಬೆಳೆದ ಬೆಳೆಯನ್ನು ಮಾರಿದ ದುಡ್ಡಿನಲ್ಲಿ ಸಾಲವನ್ನು ಸಹ ತೀರಿಸಲು ಆಗದೆ ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗುತ್ತದೆ. ಅದಕ್ಕೆ ಸರ್ಕಾರ ಬೆಂಬಲ ಬೆಲೆಯನ್ನು ಘೋಷಣೆ ಮಾಡಿ ಮುಂದಾಗಿ ರೈತರ ಜೀವ ಉಳಿಸಬೇಕಾಗಿದೆ.
ಸಿದ್ದಲಿಂಗರಡ್ಡಿ, ಕಂದಕೂರು