ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಚೆಕ್ ವಿತರಣೆ ವಿಳಂಬ: ಪ್ರತಿಭಟನೆ

Srinivasa Murthy VN
Updated On : 24 Dec 2013, 10:00 am

ಸುರಪುರ: ಇಲ್ಲಿಯ ಪುರಸಭೆ ಅಧಿಕಾರಿಗಳು ವಿವಿಧ ವಸತಿ ಯೋಜನೆಯಡಿಯಲ್ಲಿ ಮನೆ ಕಟ್ಟಿಕೊಂಡ ಫಲಾನುಭವಿಗಳಿಗೆ ಚೆಕ್‌ವಿತರಣೆ ವಿಳಂಬ. ಸಾರ್ವಜನಿಕರಿಗೆ ಮೂಲ ಸೌಕರ್ಯ ಒದಗಿಸುವಲ್ಲಿ ಸಂಪೂರ್ಣ ವಿಫಲ ಎಂದು ಆರೋಪಿಸಿ ಮಾಜಿ ಸಚಿವ ರಾಜೂಗೌಡ ನೇತೃತ್ವದಲ್ಲಿ ನೂರಾರು ಜೆಡಿಎಸ್ ಕಾರ್ಯಕರ್ತರು ಪುರಸಭೆ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು.
ನೇತೃತ್ವ ವಹಿಸಿದ್ದ ಮಾಜಿ ಸಚಿವ ರಾಜೂಗೌಡ ಮಾತನಾಡಿ, ಸಾಲ- ಸೂಲ ಮಾಡಿ ಸೂರು ಕಟ್ಟಿಕೊಂಡ ಬಡ ಫಲಾನುಭವಿಗಳಿಗೆ ಸಹಾಯ ಧನ ವಿತರಿಸದೆ ಪುರಸಭೆ ಅಧಿಕಾರಿಗಳು ಬಡವರ ಗೋಳು ಇಟ್ಟು ಕೊಳ್ಳುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. ಬಡವರಿಂದ ಹಣ ಪಡೆಯದೆ ಮನೆ ಕಟ್ಟಿಕೊಂಡ ಫಲಾನುಭವಿಗಳಿಗೆ ಪ್ರಾಮಾಣಿಕವಾಗಿ ಚೆಕ್ ವಿತರಣೆಯಾಗಬೇಕು. ಒಂದು ವೇಳೆ ವಿಳಂಬ ತೋರಿದರೆ ನಿಮಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತೆರಳಿ ಮಂಜೂರಾತಿ ತರುತ್ತೇವೆ: ನಾನು ಶಾಸಕ ಮತ್ತು ಸಚಿವನಾದ ಸಂದರ್ಭದಲ್ಲಿ ಪುರಸಭೆಗೆ 1500 ಮನೆಗಳ ಮಂಜೂರಾಗಿ, ಅದರಲ್ಲಿ ಕೇವಲ 900 ಮನೆಗಳ ಮಂಜೂರಾಗಿವೆ. ಆದರೆ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇನ್ನುಳಿದ 600 ಮನೆಗಳು ಮಂಜೂರಾಗಿಲ್ಲ. ಇವುಗಳಿಗೂ ಸರ್ಕಾರ ಮಂಜೂರಾತಿ ದೊರಗಿಸಿಕೊಡಬೇಕು. ನಿಮ್ಮಿಂದ ಆಗದೆ ಇದ್ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಸತಿ ಸಚಿವ ಅಂಬರೀಶ್ ಬಳಿ ಫಲಾನುಭವಿಗಳ ಕುಟುಂಬ ಸಮೇತ ತೆರಳಿ ಮಂಜೂರಾತಿ ತರುತ್ತೇವೆ ಎಂದು ನುಡಿದರು.
ಹೋರಾಡಲು ಸಿದ್ಧ: ಪಟ್ಟಣದಲ್ಲಿ ಮೂಲ ಸೌಕರ್ಯ ಮರಿಚಿಕೆಯಾಗಿದ್ದು, ಬಹುತೇಕ ಯೋಜನೆಗಳಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದರು. ತಾಲೂಕಿನ ಜನರ ಸಮಸ್ಯೆಗಳಿಗೆ ವಿವಿಧ ಇಲಾಖೆಯ ಅಧಿಕಾರಿಗಳು ಸ್ಪಂದಿಸದಿದ್ದಲ್ಲಿ ಹೋರಾಡಲು ಸದಾ ಸಿದ್ಧನಾಗಿರುತ್ತೇನೆ ಎಂದು ಭರವಸೆ ನೀಡಿದರು.
ಪುರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ ಜಡಿಮರಳ್, ವಿಪ ನಾಯಕ ವೇಣೂಮಾಧವ ನಾಯಕ, ಸಲೀಂ ವತರ್, ಶರಣಪ್ಪ ದಖನಿ, ಮಲ್ಲಿಕಾರ್ಜುನ ರೆಡ್ಡಿ ಇನ್ನಿತರರು ಮಾತನಾಡಿದರು.
ಪುರಸಭೆ ಸದಸ್ಯರಾದ ಪಾರಪ್ಪ ಗುತ್ತೇದಾರ, ಭೀಮಾಶಂಕರ ಬಿಲ್ಲವ್, ರಾಜಾ ಜೈರಾಮ ನಾಯಕ, ವೆಂಕಟೇಶ ಆಲ್ಟಿ, ರಾಜಾ ರಾಮಪ್ಪನಾಯಕ(ಜೇಜಿ), ಯಲ್ಲಪ್ಪ ಕುರುಕುಂದಿ, ಚಂದ್ರಕಾಂತ ಕಡೇಚೂರು, ತಾತಯ್ಯ ಕಡಬೂರು, ಪಕ್ಷದ ಮುಖಂಡರು, ನೂರಾರು ಕಾರ್ಯಕರ್ತರು, ಫಲಾನುಭವಿಗಳು, ಮಹಿಳೆಯರು ಇದ್ದರು. ಜಿಲ್ಲಾ ಯೋಜನಾ ನಿರ್ದೇಶಕ ಬಲಭೀಮ ಕಾಂಬ್ಳೆ ಅವರಿಗೆ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಲಾಯಿತು. ತಹಸೀಲ್ದಾರ್ ಅರುಣಕುಮಾರ ಕುಲಕರ್ಣಿ, ಪುರಸಭೆ ಮುಖ್ಯಾಧಿಕಾರಿ ಏಜಾಜ್‌ಹುಸೇನ್, ವ್ಯವಸ್ಥಾಪಕ ಯಲ್ಲಪ್ಪನಾಯಕ ಡೊಣ್ಣೀಗೇರಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement