ತೊಗರಿ ಬೆಂಬಲ ಬೆಲೆಗೆ ಆಗ್ರಹಿಸಿ ರಸ್ತೆ ತಡೆ
ಕ.ಪ್ರ. ವಾರ್ತೆ ಚಿಂಚೋಳಿ ಡಿ.23
ತಾಲೂಕಿನ ರಟಕಲ್ ಗ್ರಾಮದಲ್ಲಿ ತೊಗರಿಗೆ ಬೆಂಬಲ ಬೆಲೆ ನೀಡಿ ಖರೀದಿಸುವಂತೆ ಒತ್ತಾಯಿಸಿ ರಟಕಲ್ ತೊಗರಿ ಬೆಳೆಗಾರರ ಹೋರಾಟ ಸಮಿತಿ ವತಿಯಿಂದ ಇತ್ತೀಚೆಗೆ ಗುಲ್ಬರ್ಗ-ಚಿಂಚೋಳಿ ರಾಜ್ಯ ಹೆದ್ದಾರಿ ಮೇಲೆ ರಸ್ತೆ ತಡೆ ನಡೆಸಿ ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಮಾತನಾಡಿ, ರೈತ ಆಯೋಗದ ಅಧ್ಯಕ್ಷ ಡಾ. ಎಂ.ಎಸ್. ಸ್ವಾಮಿನಾಥನ್ ಆಯೋಗದ ವರದಿಯಂತೆ ತೊಗರಿಯನ್ನು ಬೆಂಬಲ ಬೆಲೆ 6450 ರು. ಗಳಲ್ಲಿ ರೈತರಿಂದ ಖರೀದಿಸಬೇಕೆಂದು ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ಆದರೂ ಸರ್ಕಾರ ರೈತರ ತೊಗರಿಗೆ ಬೆಂಬಲ ಬೆಲೆ ಘೋಷಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರು ತೊಗರಿ ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ. ಜಿಲ್ಲಾ ತೊಗರಿ ಮಂಡಳಿಗೆ 100 ಕೋಟಿ ಬಿಡುಗಡೆಗೊಳಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಚಂದ್ರಕಾಂತ ಬೈರಪ್ಪ, ಬಸವರಾಜ ಚೌಕಾ, ಮುರುಗಯ್ಯ ಪುರಾಣಿಕ, ಕಲ್ಯಾಣರಾವ ತಳಕೇರಿ, ತಿಪ್ಪಣ್ಣ ಆರಿ, ಹಮೀದಮಿಯ್ಯ ಸುಲೇಗಾಂವ, ಚಂದ್ರಶೇಖರ ಚೌಕಾ, ಏಕಯ್ಯ ಸ್ವಾಮಿ ಬುಕಟಿ, ವೈಜನಾಥ, ಯೋಗೇಶ ಜಾಕೀರಾ, ಬೇಲೂರ ಮಲ್ಲಮ್ಮ, ರಮಕಬಾಯಿ ಸೇರಿದಂತೆ ಇತರರು ಭಾಗವಹಿಸಿದ್ದರು. ಉಪ ತಹಸೀಲ್ದಾರ್ ಬಿ.ಜಿ. ಕುದರಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಖರೀದಿ ಕೇಂದ್ರ ಆರಂಭಕ್ಕೆ ಆಗ್ರಹ
ಗುರುಮಠಕಲ್: ದಿನೇ ದಿನೇ ಕುಸಿಯುತ್ತಿರುವ ತೊಗರಿ ಬೆಲೆಯಿಂದ ರೈತರನ್ನು ರಕ್ಷಿಸಲು ಸರ್ಕಾರ ಮುಂದಾಗಿ ಪ್ರತಿಯೊಂದು ಹೋಬಳಿ ಕೇಂದ್ರಗಳಲ್ಲಿ ತೊಗರಿ ಕೇಂದ್ರಗಳನ್ನು ತೆರೆದು ಅವುಗಳ ಮೂಲಕ ತೊಗರಿ ಖರೀದಿ ಮಾಡಬೇಕು. ರೈತರು ಬೆಳೆದ ತೊಗರಿಗೆ ಬೆಂಬಲ ನೀಡಲು ಆಗ್ರಹಿಸಿ ಗುರುಮಠಕಲ್ನಲ್ಲಿ ರೈತ ಕೃಷಿ ಕಾರ್ಮಿಕರ ಸಂಘಟನೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಇಲ್ಲಿನ ವಿಶೇಷ ತಹಸೀಲ್ದಾರ್ ಮೂಳಕವಾಗಿಗೆ ಮನವಿ ಪತ್ರ ಸಲ್ಲಿಸಿದರು.
ಕೇಂದ್ರದ ಬೆಂಬಲ ಬೆಲೆಯೂ ಪ್ರತಿ ಕ್ವಿಂಟಲ್ಗೆ 4500 ಇದೆ. ಆದರೆ ಅದನ್ನು ಯಾರೊಬ್ಬರು ಪಾಲಿಸುತ್ತಿಲ್ಲ. ಇದರಿಂದಾಗಿ ರೈತರು ತೀವ್ರ ನಷ್ಟ ಅನುಭವಿಸುತ್ತಿದ್ದಾರೆಂದು ಸಂಘಟನೆಯ ಅಧ್ಯಕ್ಷ ಶರಣಗೌಡ ಗೂಗಲ್ ಆರೋಪಿಸಿದ್ದಾರೆ.
ಸಂಘಟನೆಯ ಕಾರ್ಯದರ್ಶಿಗಳಾದ ವೆಂಕಟ ರಡ್ಡಿ, ಸೋಮಶೇಖರ, ಸಿದ್ದಪ್ಪ, ರುದ್ರಪ್ಪ ಪೊಲೀಸ್ ಪಾಟೀಲ್, ಖಾಜಾ ಮೈನೊದ್ದೀನ್, ಆಶಪ್ಪ, ಸಿದ್ದಪ್ಪ ಬೂದುರ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದರು.