ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ತಂಬಾಕು ಸೇವನೆ ಬಿಡಿ, ಇತರರಿಗೂ ಬಿಡಿಸಿ

Srinivasa Murthy VN
Updated On : 17 Feb 2013, 1:12 am

ಗುಲ್ಬರ್ಗ: ವಿವಿಧ ರೀತಿಯ ತಂಬಾಕು ಸೇವನೆಯಿಂದ ಉಂಟಾಗುವ ಕ್ಯಾನ್ಸರ್ ಕಾಯಿಲೆಗಳನ್ನು ನಿಯಂತ್ರಿಸಿ ಸ್ವಸ್ಥ ಸಮಾಜ ನಿರ್ಮಾಣ ಮಾಡುವ ಉದ್ದೇಶದಿಂದ ಕಾಟ್ಪಾ(ದಿ ಸಿಗರೇಟ್ಸ್ ಆಂಡ್ ಅದರ್ ಟೋಬ್ಯಾಕೋ ಪ್ರಾಡಕ್ಟ್ ಆ್ಯಕ್ಟ್) ಕಾಯ್ದೆಯನ್ನು ಜಾರಿಗೆ ತರಲಾಗಿದೆ ಎಂದು ಗುಲ್ಬರ್ಗ ಈಶಾನ್ಯ ವಲಯದ ಐಜಿಪಿ ಮಹ್ಮದ್ ವಜೀರ್ ಅಹ್ಮದ್ ಹೇಳಿದರು.
ನಗರದ ನಾಗನಹಳ್ಳಿ ಪೊಲೀಸ್ ತರಬೇತಿ ಕಾಲೇಜಿನಲ್ಲಿ ಶನಿವಾರ ಬೆಂಗಳೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆ, ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಮತ್ತು ಕ್ಯಾನ್ಸರ್ ನಿಯಂತ್ರಣ ಯೋಜನೆ ಸಹಯೋಗದಲ್ಲಿ ಆಯೋಜಿಸಿದ್ದ ಆರಕ್ಷರಿಗೆ ತಂಬಾಕು ನಿಯಂತ್ರಣ ಪಾಠ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದುರ್ವ್ಯಸನ ಬಿಡಿ, ಇತರರಿಗೂ ಬಿಡಿಸಿ: ಕ್ಯಾನ್ಸರ್ ಕಾಯಿಲೆಯನ್ನು ತಡೆಗಟ್ಟುವ ಉದ್ದೇಶದಿಂದ ಕಾಟ್ಪಾ ಕಾಯಿದೆಯನ್ನು ತಯಾರು ಮಾಡಲಾಗಿದೆ. ಭಾಗವಹಿಸಿದ ಸಿಬ್ಬಂದಿಗಳಲ್ಲಿ ತಂಬಾಕು ಸೇವನೆ ಚಟವಿದ್ದವರು ಅದರ ದುಷ್ಪರಿಣಾಮಗಳನ್ನು ಅರಿತು ಬಿಡಬೇಕು, ನಂತರ ತಮ್ಮ ನೆರೆ- ಹೊರೆ, ಬಂಧು ಬಳಗ, ಕುಟುಂಬ, ಸ್ನೇಹಿತರಿಗೆ ತಂಬಾಕು ಚಟದಿಂದ ಮುಕ್ತರಾಗುವಂತೆ ಮಾಡಬೇಕು. ಜೀವನದಲ್ಲಿ ಕನಿಷ್ಠ 100 ಮಂದಿಗಾದರೂ ತಂಬಾಕು ಚಟದಿಂದ ಮುಕ್ತರನ್ನಾಗಿಸುವ ಸಂಕಲ್ಪ ತೊಡಬೇಕು ಎಂದು ಹೇಳಿದರು.
ಕಾರ್ಯಾಗಾರದಲ್ಲಿ ಕಾಟ್ಪಾ ಕಾನೂನಿನ ಬಗ್ಗೆ ವಿಸ್ತೃತ ಮಾಹಿತಿ ನೀಡಲಾಗುವುದು, ಅದನ್ನು ಅರ್ಥೃಸಿಕೊಂಡು ಕಾರ್ಯಪ್ರವೃತ್ತರಾಗಬೇಕೆಂದು ಅವರು ತಿಳಿಸಿದರು.
ಆಯುಷ್ಯಕ್ಕೆ ಮುನ್ನ ಸಾವು: ಕ್ಯಾನ್ಸರ್ ತಜ್ಞರಾದ ಡಾ. ವಿಶಾಲ್ ಮಾತನಾಡಿ, ಕ್ಯಾನ್ಸರ್ ರೋಗವನ್ನು ತಡೆಗಟ್ಟಲು ಸರ್ಕಾರದಿಂದ ದಿಟ್ಟ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ದೇಶದಲ್ಲಿ 30 ಕೋಟಿ ಮಂದಿ ತಂಬಾಕು ಸೇವನೆಗೆ ಒಳಗಾಗಿದ್ದಾರೆ. ತಂಬಾಕು ಸೇವನೆ ಚಟಕ್ಕೊಳಗಾದ 10 ಕೋಟಿಯಷ್ಟು ಜನರು ತಮ್ಮ ಆಯುಷ್ಯ ಮುಗಿಯುವ ಮುನ್ನವೇ ಸಾವನ್ನಪ್ಪುತ್ತಿದ್ದಾರೆಂದರು.
ತಂಬಾಕು ಸೇವನೆಯಿಂದ ಖಾಯಿಲೆ ಖಾತ್ರಿ. ವಿಶ್ವದಲ್ಲಿ ನಮ್ಮ ದೇಶ ಬಾಯಿ ಕ್ಯಾನ್ಸರ್‌ನ ರಾಜಧಾನಿಯಾಗಿದೆ. ಬಾಯಿ ಕ್ಯಾನ್ಸರ್‌ನ ಅತಿ ಹೆಚ್ಚು ಪ್ರಕರಣಗಳು ವರದಿಯಾಗುವುದು ನಮ್ಮ ದೇಶದಲ್ಲಿಯೇ ಎಂದು ವಿಷಾದಿಸಿದರು.
ಪೊಲೀಸ್ ತರಬೇತಿ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಸನಾವುಲ್ಲಾಖಾನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹೆಚ್ಚುವರಿ ಎಸ್ಪಿ ಕಾಶಿನಾಥ ತಳಕೇರಿ, ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ವೈದ್ಯಾಧಿಕಾರಿ ಡಾ. ಜಗನ್ನಾಥ್, ಜಿಲ್ಲಾ ಸರ್ಜನ್ ಡಾ. ನಳಿನಿ ನಮೋಶಿ. ಪ್ರೊಬೇಷನರಿ ಐಪಿಎಸ್ ಅಧಿಕಾರಿ ಭೂಷಣ ಭೋಸಲೆ, ಡಾ. ಪ್ರಗತಿ ಹೆಬ್ಬಾರ್ ವೇದಿಕೆಯಲ್ಲಿದ್ದರು. ಡಿಎಸ್ಪಿ ಎಸ್.ಎಲ್. ಝಂಡೇಕರ್ ಸ್ವಾಗತಿಸಿದರು, ಪೊಲೀಸ್ ಇನ್ಸ್‌ಪೆಕ್ಟರ್ ಸುಬೇದಾರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement