ಬತ್ತದ ಹಸಿರಿಗೀಗ ಇನ್ನಷ್ಟು ಬಲ
ಹುಣಸಗಿ: ನಾರಾಯಣಪುರ(ಬಸವ ಸಾಗರ) ಜಲಾಶಯ, ಕೃಷ್ಣಾ ಎಡದಂಡೆ ಕಾಲುವೆಯಿಂದ ನೀರಾವರಿ ಸೌಲಭ್ಯ ಸೇರಿದಂತೆ ಹುಲುಸಾಗಿದ್ದ ಹುಣಸಗಿ ಈಗ ತಾಲೂಕು ಕೇಂದ್ರವಾಗಿ ಘೋಷಣೆಯಾಗಿದೆ. ತಾಲೂಕು ಕೇಂದ್ರಕ್ಕೆ ಅರ್ಹವಾಗಿದ್ದ ಪಟ್ಟಣಕ್ಕೆ ಬಿಜೆಪಿ ಸರ್ಕಾರ ಮಾನ್ಯತೆ ನೀಡಿದ್ದು, ಸ್ಥಳೀಯರ ಅನೇಕ ವರ್ಷಗಳ ಬೇಡಿಕೆ ಈಡೇರಿದಂತಾಗಿದೆ.
ಯಾದಗಿರಿ ಕೇಂದ್ರದಿಂದ ಹುಣಸಗಿಗೆ ಸುಮಾರು 150 ಕಿಮೀ ಅಂತರವಿದೆ. ಇದುವರೆಗೆ ತಾಲೂಕು ಕೇಂದ್ರವಾಗಿದ್ದ ಸುರಪುರ ಕೂಡ 80 ಕಿಮೀ ದೂರದಲ್ಲಿದೆ. ಆದ್ದರಿಂದ ಕಚೇರಿ ಕಾರ್ಯಕ್ಕಾಗಿ ನಿತ್ಯ ಅಲೆಯಬೇಕಾದ ಸ್ಥಿತಿಯಿತ್ತು. ವಿಶೇಷ ತಹಸೀಲ್ದಾರ್ ಕಚೇರಿ ಇದ್ದರೂ ಪ್ರಮಾಣಪತ್ರಗಳು ಹಾಗೂ ಇನ್ನಿತರ ಪ್ರಮುಖ ಕೆಲಸಗಳಿಗೆ ಸುರಪುರಕ್ಕೆ ಹೋಗಬೇಕಾಗಿತ್ತು. ಇದರಿಂದ ಹುಣಸಗಿ, ಸುತ್ತಮುತ್ತಲಿನ ಜನರಿಗೆ ತೀವ್ರ ತೊಂದರೆಯಾಗುತ್ತಿತ್ತು.
ಆದರೀಗ ಸಿಎಂ ಜಗದೀಶ್ ಶೆಟ್ಟರ್ ಅವರು ಬಜೆಟ್ನಲ್ಲಿ ಹೊಸದಾಗಿ 43 ತಾಲೂಕುಗಳನ್ನು ಘೋಷಿಸಿರುವುದರಲ್ಲಿ ಹುಣಸಗಿ ಹೆಸರೂ ಇತ್ತು. ಆದ್ದರಿಂದ ಇಲ್ಲಿಯ ಜನರ ಪಾಲಿಗೆ ಫೆ.8 ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನ.
ಸಮೃದ್ಧ ಪ್ರದೇಶ: ಹುಣಸಗಿ ಪ್ರದೇಶ ಯಾದಗಿರಿ ಜಿಲ್ಲೆಯಲ್ಲೇ ಸಮೃದ್ಧವಾಗಿದೆ. ಬತ್ತದ ಕಣಜ ಎಂದೇ ಆ ಪ್ರದೇಶವನ್ನು ಕರೆಯಲಾಗುತ್ತದೆ. ಯಾಕೆಂದರೆ- ನಾರಾಯಣಪುರ ಎಡದಂಡೆ ಕಾಲುವೆ ಜಾಲವು ಹುಣಸಗಿ ವ್ಯಾಪ್ತಿಯಲ್ಲಿ ಆರಂಭವಾಗುವುದರಿಂದ ನೀರಿಗೆ ಕೊರತೆಯೇ ಇಲ್ಲ. ವಾರ್ಷಿಕ ಎರಡು ಬೆಳೆಯನ್ನು ತೆಗೆಯುವಂಥ ಫಲವತ್ತಾದ ಕೃಷಿ ಭೂಮಿ ಇಲ್ಲಿದೆ. ಅದಕ್ಕೆ ಪೂರಕವಾಗಿರುವ ವಾತಾವರಣವೂ ಇರುವುದರಿಂದ ಅಗತ್ಯ ಸೌಲಭ್ಯಗಳೂ ಅಲ್ಲಿವೆ.
ಕೃಷಿ, ಕೈಗಾರಿಕೆ, ಹೈನುಗಾರಿಕೆಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಇಲ್ಲಿ ಕಟ್ಟಡಗಳಿಗೆ ಕೊರತೆಯಿಲ್ಲ. ಯುಕೆಪಿ ಕ್ಯಾಂಪ್ನಲ್ಲಿ ನೂರಾರು ಕಟ್ಟಡಗಳು ಖಾಲಿಯಿವೆ. ಆದ್ದರಿಂದ ಅಗತ್ಯವಿದ್ದರೆ ಆ ಕಟ್ಟಡಗಳನ್ನು ಬಳಸಿಕೊಳ್ಳಬಹುದಾಗಿದೆ.
ಸಿಗಲಿದೆ ಮೂಲ ಸೌಕರ್ಯ: ಈಗಾಗಲೇ ವಿಶೇಷ ತಹಸೀಲ್ದಾರ್ ಕಚೇರಿ, ಉಪ ನೋಂದಣಾಧಿಕಾರಿ ಕಚೇರಿ, ಉಪ ಖಜಾನೆ, ಪೊಲೀಸ್ ವೃತ್ತ, ಎಪಿಎಂಸಿ, ಸರ್ಕಾರಿ ಹಾಗೂ ಖಾಸಗಿ ಬ್ಯಾಂಕುಗಳು, ಬಿಎಸ್ಸೆನ್ನೆಲ್ ಕಚೇರಿ, ಅಂಚೆ ಕಚೇರಿ, ಪ್ರವಾಸಿ ಮಂದಿರ ಸೇರಿದಂತೆ ಅಗತ್ಯ ಸರ್ಕಾರಿ ಕಚೇರಿಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ. ತಾಲೂಕು ಕೇಂದ್ರವಾಗುವುದರಿಂದ ಇನ್ನೂ ಹೆಚ್ಚಿನ ಸೌಲಭ್ಯಗಳು ಹರಿದುಬರಲಿದೆ. ರಸ್ತೆ, ಚರಂಡಿ, ವಿದ್ಯುತ್ ಸೇರಿದಂತೆ ಮೂಲ ಭೂತ ಸೌಕರ್ಯಗಳಿಗೆ ಒತ್ತು ಸಿಗಲಿದೆ.
ವ್ಯಾಪ್ತಿ ಎಷ್ಟು?: ಹುಣಸಗಿ ತಾಲೂಕು ವ್ಯಾಪ್ತಿಗೆ ಮುದುನೂರು, ಅಗ್ನಿ, ವಜ್ಜಲ್, ಮಾಳನೂರು, ಕೋಳಿಹಾಳ, ಕಾಮನಟಗಿ, ದೇವತ್ಕಲ್, ಹೆಬ್ಬಾಳ, ಕಚಕನೂರು, ರಾಜನಕೋಳೂರು, ಬೈಲಕುಂಟಿ, ಅರಕೇರಾ(ಜೆ), ಗೆದ್ದಮಲಮರಿ, ಮಾರನಾಳ, ಬರದೇವನಾಳ, ಹಗರಟಗಿ, ಕೋಡೆಕಲ್, ಜೋಗುಂಡಬಾವಿ, ನಾರಾಯಣಪುರ ಪಂಚಾಯಿತಿ ಒಳಪಡುತ್ತವೆ. ಮುಖ್ಯವಾಗಿ ಈ ಭಾಗದ ರೈತರ ಜೀವನಾಡಿಯಾದ ಕೃಷ್ಣಾ ನದಿ ಸಮೀಪದಲ್ಲಿದೆ. ನಾರಾಯಣಪುರದ ಬಸವಸಾಗರ ಜಲಾಶಯವೂ ಇದೇ ವ್ಯಾಪ್ತಿಗೆ ಸೇರುತ್ತದೆ. ಆದ್ದರಿಂದ ಹುಣಸಗಿ ಇನ್ನು ಜಿಲ್ಲೆಗೆ ಕಳಸಪ್ರಾಯವಾಗಲಿದೆ.
13 ತಾಪಂ, 4 ಜಿಪಂ ಕ್ಷೇತ್ರ: ನೂತನ ತಾಲೂಕು ವ್ಯಾಪ್ತಿಯಲ್ಲಿ 13 ತಾಲೂಕು ಪಂಚಾಯಿತಿಗಳು ಹಾಗೂ 4 ಜಿಪಂ ಕ್ಷೇತ್ರಗಳು ಬರುತ್ತವೆ. ದೇವತ್ಕಲ್ ಜಿಪಂ ಕ್ಷೇತ್ರದ ಭಾಗಶಃ ಹಳ್ಳಿಗಳು ಇದೇ ವ್ಯಾಪ್ತಿಗೆ ಸೇರುತ್ತದೆ. ಸದ್ಯ ಬಿಜೆಪಿ ಸರ್ಕಾರದಲ್ಲಿ ಸಣ್ಣ ಕೈಗಾರಿಕಾ ಸಚಿವರಾಗಿರುವ ರಾಜುಗೌಡರು, ಇದೇ ವ್ಯಾಪ್ತಿಯ ಕೊಡೇಕಲ್ ಗ್ರಾಮದವರು. ಆದ್ದರಿಂದ ಇನ್ನು ಹುಣಸಗಿ ಅಭಿವೃದ್ಧಿಗೆ ವೇಗ ದೊರೆಯುವ ನಿರೀಕ್ಷಿಯಿದೆ. ಆದ್ದರಿಂದ ತಾಲೂಕು ಘೋಷಣೆ ಇಲ್ಲಿಯ ಜನರ ಸಂತಸವನ್ನು ಇಮ್ಮಡಿಯಾಗುವಂತೆ ಮಾಡಿದೆ. ಬರುವ ದಿನಗಳಲ್ಲಿ ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಿ ಅಧಿಕಾರಿಗಳು, ಸಿಬ್ಬಂದಿ, ಎಲ್ಲ ಇಲಾಖೆಗಳು ಕಾರ್ಯನಿರ್ವಹಿಸುವಂತೆ ಮಾಡಬೇಕಿದೆ.