ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಪ್ರತಿಭಟನೆ- ರಸ್ತೆತಡೆ- ಡಿಸಿ ಕಚೇರಿಗೆ ಮುತ್ತಿಗೆ- ಸಂವಾದ

Srinivasa Murthy VN
Updated On : 9 Mar 2013, 10:16 am

ನಗರದಲ್ಲಿ ಪ್ರತಿಭಟನೆ, ರಸ್ತೆತಡೆ, ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವ ಮೂಲಕ ಹಾಗೂ ಮಹಿಳೆಯರ ಸಮಸ್ಯೆ- ಸವಾಲುಗಳನ್ನೆಲ್ಲ ಮುಂದಿಟ್ಟುಕೊಂಡು ಅವುಗಳ ದಿಕ್ಕು- ದೆಸೆ ಬಗ್ಗೆ ಸಂವಾದಿಸುವುದರೊಂದಿಗೆ ಹತ್ತು ಹಲವು ರೂಪಗಳಲ್ಲಿ ಶುಕ್ರವಾರ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ಮಹಿಳಾ ಸಮುದಾಯದ ಮೇಲೆ ಹೆಚ್ಚುತ್ತಿರುವ ಅಪರಾಧಗಳನ್ನು ವಿರೋಧಿಸಿ ಎಐಎಂಎಸ್‌ಎಸ್ ಸಂಘಟನೆ ಸರ್ದಾರ್ ಪಟೇಲ್ ವೃತ್ತದಿಂದ ಮೆರವಣಿಗೆ ಆರಂಭಿಸಿತು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಇರುವ ವಿಕಾಸ ಭವನಕ್ಕೆ ಬಂದ ಮೆರವಣಿಗೆಯಲ್ಲಿ ನೂರಾರು ಕಾಲೇಜು ವಿದ್ಯಾರ್ಥಿನಿಯರು ಸೇರಿದ್ದರು. ಮಹಿಳೆಯರ ಪ್ರತಿಯಾಗಿ ಸಾಗಿರುವ ಅಪರಾಧಗಳು ನಿಲ್ಲಬೇಕೆಂದು ಹಾಗೂ ಆರೋಪಿಗಳನ್ನು ಶಿಕ್ಷಿಸುವಂತೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು.
ನಾಗರಿಕ ಸಮಾಜ ತಲೆತಗ್ಗಿಸಲಿ: ಶೋಷಣೆಗೊಳಗಾದ ಮಹಿಳೆಯರ ವಿಮೋಚನೆಗೆ ಈ ದಿನ ಸ್ಫೂರ್ತಿ ಕೊಡುತ್ತದೆ. ಅಪರಾಧಗಳ ವಿರುದ್ಧ ಮಹಿಳೆಯರು ಸಿಡಿದೇಳಬೇಕು. ಅತ್ಯಾಚಾರ-ಅನಾಚಾರಗಳಂತಹ ಕುಕೃತ್ಯಗಳು ಹೆಚ್ಚುತ್ತಿವೆ. ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಮಾನವೀಯತೆ, ಸೂಕ್ಷ್ಮ ಸಂವೇದನೆಗಳು ನಾಶವಾಗುತ್ತಿರುವುದರಿಂದಲೇ ಇಂತಹ ಅಪರಾಧಗಳು ಹೆಚ್ಚುತ್ತಿವೆ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರಾಜ್ಯ ಖಜಾಂಚಿ ವಿ. ನಾಗಮ್ಮಾಳ ವಿಷಾದಿಸಿದರು.
ಸಂಘಟನೆ ಅಧ್ಯಕ್ಷೆ ಡಾ. ಸೀಮಾ ದೇಶಪಾಂಡೆ ಮಾತನಾಡಿ, ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ಧ ಜನಾಂದೋಲನವೇ ನಡೆಯಬೇಕಾಗಿದೆ ಎಂದು ನುಡಿದರು. ಹೋರಾಟಗಳು ಬಲಗೊಂಡಾಗ ಮಾತ್ರ ಅಪರಾಧಗಳು ಕಮ್ಮಿಯಾಗುತ್ತವೆ. ಅಪರಾಧಿಗಳು ತಮ್ಮ ಬಾಲ ಬಿಚ್ಚದೆ ಮುದುಡಿಕೊಂಡಿರುತ್ತಾರೆ ಎಂದರು. ಜಿಲ್ಲಾ ಕಾರ್ಯದರ್ಶಿ ಗುಂಡಮ್ಮ, ಉಪಾಧ್ಯಕ್ಷೆ ವಿಶಾಲಾಕ್ಷಿ ಪಾಟೀಲ್ ಮಾತನಾಡಿದರು. ಜಿಲ್ಲಾಧಿಕಾರಿ ಕಚೇರಿ ಮುಂದಿನ ರಸ್ತೆಯಲ್ಲಿ ಮಾನವ ಸರಪಣಿ ನಿರ್ಮಿಸಲಾಯಿತು. ಕಚೇರಿಗೆ ಮುತ್ತಿಗೆ ಹಾಕಿ ಮನವಿ ಪತ್ರ ಸಲ್ಲಿಸಲಾಯಿತು.
ಹೋರಾಟದ ಪಂಚ್: ಜೇವರ್ಗಿಯಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿ ಹಾಗೂ ಇತ್ತೀಚೆಗೆ ನಡೆದ ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದು ಒತ್ತಾಯಿಸಿ ಎಂ.ಎಸ್. ಪಾಟೀಲ್ ನರಿಬೋಳ ನೇತೃತ್ವದಲ್ಲಿ ಪಂಚ ಜಿಲ್ಲೆಗಳ ಜನಪರ ಹೋರಾಟ ಸಮಿತಿ ಗುಲ್ಬರ್ಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮುಖಾಂತರ ಸಿಎಂ ಜಗದೀಶ ಶೆಟ್ಟರ್ ಅವರಿಗೆ ಮನವಿ ಸಲ್ಲಿಸಿತು.
ಗುರುರಾಜ ಕುಲಕರ್ಣಿ, ಸಂತೋಷ, ಸುನೀಲ್ ಪಾಟೀಲ್, ರವಿ ಹೂಗಾರ, ದೇವು ಚಿಗರಹಳ್ಳಿ, ಲಕ್ಷ್ಮೀಕಾಂತ ಮಾವಿನ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಮಹಿಳಾ ಸಾಧಕಿಯರಿಗೆ ಸತ್ಕಾರ: ಗುಲ್ಬರ್ಗದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಾನೂನು ಸೇವೆಗಳ ಪ್ರಾಧಿಕಾರ ಸಂಯುಕ್ತವಾಗಿ ಏರ್ಪಡಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಸಾಧಕಿಯರಾದ ಗ್ಲೋಬಲ್ ಪುರಸ್ಕಾರ ವಿಜೇತೆ ಶಾರಾದ ಯಾಕಾಪುರ, ನ್ಯಾಷನಲ್ ವರ್ಚುವಲ್ ಅಕಾಡೆಮಿಯ ವಿಜಯಲಕ್ಷ್ಮೀ ಇವರನ್ನು ಸತ್ಕರಿಸಲಾಯಿತು. ನ್ಯಾಯಾಧೀಶ ಎಂ.ಕೆ. ಪಠಾಣ, ಜಿಪಂ ಸಿಇಒ ಪಲ್ಲವಿ ಆಕುರಾತಿ, ಮಹಿಳಾ- ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ರತ್ನಾ ಕಲಂದಾನಿ, ಪಾಪಮ್ಮ ಹಾಬಾಳಕರ್ ಅನೇಕರು ಇದ್ದರು.
ಮಹಿಳಾ ಸಬಲೀಕರಣ- ದಿಕ್ಕು ದೆಸೆ ಸಂವಾದ: ಕರ್ನಾಟಕ ಪೀಪಲ್ಸ್ ಶಿಕ್ಷಣ ಸಂಸ್ಥೆಯವರು ಪ್ರಜ್ಞಾ ಕಾನೂನು ಸಲಹಾ ಸಮಿತಿ ಸಹಯೋಗದಲ್ಲಿ ಡಾ. ಅಂಬೇಡ್ಕರ್ ಕಾಲೇಜಿನಲ್ಲಿ ಮಹಿಳಾ ಸಬಲೀಕರಣ- ದಿಕ್ಕು ದೆಸೆ ವಿಷಯವಾಗಿ ಏರ್ಪಡಿಸಿದ್ದ ಸಂವಾದ, ವಿಚಾರ ಸಂಕಿರಣವನ್ನು ಸಾಹಿತಿ ಡಾ. ಸ್ವಾಮೀರಾವ ಉದ್ಘಾಟಿಸಿದರು.
ಪ್ರಾಚಾರ್ಯ ಡಾ. ಬಸವರಾಜ ಕುಮ್ನೂರ್, ಸಂಸ್ಥೆಯ ಮಾರುತಿರಾವ ಮಾಲೆ, ಎಸ್.ಬಿ. ವಿಜ್ಞಾನ ವಿದ್ಯಾಲಯ ಉಪನ್ಯಾಸಕಿ ಡಾ. ನೀಲಾಂಬಿಕಾ ಶೇರಿಕಾರ್, ಪ್ರಜ್ಞಾ ಕಾನೂನು ಸಲಹಾ ಸಮಿತಿಯ ಡಾ. ಮೀನಾಕ್ಷಿ ಬಾಳಿ ಸೇರಿದಂತೆ ಅನೇಕರು ಸಂವಾದದಲ್ಲಿ, ಉಪನ್ಯಾಸಗಳಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement