ಮಿನಿ ವಿಧಾನಸೌಧ ನೀರಿನ ವ್ಯವಸ್ಥೆಗೆ 3 ಲಕ್ಷ: ಡಿಸಿ
ಸುರಪುರ: ಇಲ್ಲಿಯ ಮಿನಿ ವಿಧಾನಸೌಧದಲ್ಲಿ ಕುಡಿಯುವ ನೀರಿನ ವ್ಯವಸ್ಥೆಗೆ 3 ಲಕ್ಷ ಅನುದಾನ ಒದಗಿಸಿಕೊಡುವುದಾಗಿ ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್ ಹೇಳಿದರು.
ಮತಯಂತ್ರಗಳ ಪರಿಶೀಲನೆ ಮತ್ತು ಮತ ಎಣಿಕೆ ವ್ಯವಸ್ಥೆ ಪರಿಶೀಲಿಸಲು ಶುಕ್ರವಾರ ಇಲ್ಲಿನ ಮಿನ ವಿಧಾನಸೌಧಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಈ ವಿಷಯ ತಿಳಿಸಿದರು.
ಕುಡಿವ ನೀರಿನ ಅವ್ಯವಸ್ಥೆ ಮತ್ತು ಗಂಭೀರತೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ತಕ್ಷಣವೇ ಪುರಸಭೆ ಅಧಿಕಾರಿಗಳನ್ನು ಘಟನಾ ಸ್ಥಳಕ್ಕೆ ಕರೆಯಿಸಿಕೊಂಡು ಚರ್ಚಿಸಿದರು. ಸೌಧದ ಕಾರ್ಯಾಲಯಕ್ಕೆ ಕುಡಿವ ನೀರು ಒದಗಿಸಲು ಈಗಾಗಲೇ 3 ಲಕ್ಷ ರು.ಗಳ ಕ್ರಿಯಾಯೋಜನೆ ಒದಗಿಸಲಾಗಿದೆ ಎಂದು ತಿಳಿಸಿದಾಗ ಅದನ್ನು ಪರಿಶೀಲಿಸಿ ಮಂಜೂರು ಮಾಡಿಸುವುದಾಗಿ ಡಿಸಿ ಭರವಸೆ ನೀಡಿದರು.
ಮತಯಂತ್ರ ಕೋಣೆ ಪರಿಶೀಲನೆ: ಇದೇ ಸಂದರ್ಭದಲ್ಲಿ ಮತಯಂತ್ರಗಳ ಕೋಣೆ ಮತ್ತು ಮತ ಎಣಿಕೆ ಸಭಾಂಗಣ ಪರಿಶೀಲಿದರು. ಮತಎಣಿಕೆ ಸುಸೂತ್ರವಾಗಿ ನಡೆಯಲು ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲು ಸೂಚಿಸಿದರು. ಎಸ್ಪಿ ವಂಶಿಕೃಷ್ಣ, ತಹಸೀಲ್ದಾರ್ ಮಹ್ಮದ ಗೌಸುದ್ದೀನ್, ಪಿಐ ರಾಜಕುಮಾರ, ಅಶೋಕ ಸುರಪುರಕರ್ ಇದ್ದರು.
ಬಂದೋಬಸ್ತ್: ಪುರಸಭೆಯ 27 ವಾರ್ಡ್‌ಗಳಿಗೆ ಗುರುವಾರ ಚುನಾವಣೆ ನಡೆದಿದ್ದು ಚುನಾವಣೆ ನಂತರ ವಿದ್ಯುನ್ಮಾನ ಮತಯಂತ್ರಗಳನ್ನು ಇಲ್ಲಿನ ಮಿನಿ ವಿಧಾನಸೌಧದಲ್ಲಿ ಕೋಣೆಯೊಂದರಲ್ಲಿ ಇಡಲಾಗಿದ್ದು, ಕೋಣೆಗೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಭದ್ರತೆ ನಿಮಿತ್ತ ಸೌಧದ ಮುಂದೆ ಕೆಎಸ್‌ಆರ್‌ಪಿ ತುಕಡಿ ಮತ್ತು ಅಗ್ನಿಶಾಮಕ ದಳ ನಿಯೋಜಿಸಲಾಗಿದೆ.
'ಮಹಿಳೆ ಸಮಾಜ ಸೃಷ್ಟಿಯ ಅವಿಭಾಜ್ಯ ಅಂಗ'
ಸುರಪುರ: ಆದಿಕಾಲದಿಂದ ಇಂದಿನವರೆಗೂ ಸಮಾಜದಲ್ಲಿ ಮಹಿಳೆ ಅಪಾರವಾದ ಕೊಡುಗೆ ನೀಡಿದ್ದಾಳೆ. ಮಹಿಳೆ ಇರದೇ ಹೋಗಿದ್ದರೆ ಸಮಾಜ ನಿರ್ಮಾಣ ಸಾಧ್ಯವೇ ಇರಲಿಲ್ಲ. ಆದ್ದರಿಂದ ಮಹಿಳೆ ಸೃಷ್ಟಿಯ ಅವಿಭಾಜ್ಯ ಅಂಗವಾಗಿದ್ದಾಳೆ ಎಂದು ಜೆಎಂಎಫ್‌ಸಿ ನ್ಯಾಯಾಲದಯ ಸಿವಿಲ್ ನ್ಯಾಯಾಧೀಶೆ ಮಂಜುಳಾ ಉಂಡಿ ಅಭಿಪ್ರಾಯಪಟ್ಟರು.
ದರ್ಬಾರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಅಜೀಂ ಪ್ರೇಮಜಿ ಫೌಂಡೇಷನ್, ಸಾರ್ವಜನಿಕ ಶಿಕ್ಷಣ ಇಲಾಖೆ, ವಕೀಲರ ಸಂಘ ಜಂಟಿಯಾಗಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಮಹಿಳೆ ರಕ್ಷಣೆಗೆ ಸಾಕಷ್ಟು ಕಾನೂನುಗಳನ್ನು ಜಾರಿ ಮಾಡಲಾಗಿದೆ. ಆದರೂ ಮಹಿಳೆಯ ಮೇಲೆ ನಿರಂತವಾಗಿ ದೌರ್ಜನ್ಯ, ಬಲತ್ಕಾರ, ಅತ್ಯಾಚಾರ, ಶೋಷಣೆ ಪ್ರಕರಣಗಳು ನಡೆಯುತ್ತಿವೆ. ಇದನ್ನು ಪ್ರತಿಭಟಿಸುವ ಎದೆಗಾರಿಕೆ ಮಹಿಳೆಯರು ಸ್ವತಃ ಪಡೆದುಕೊಳ್ಳಬೇಕೆಂದರು. ಸೋಮರೆಡ್ಡಿ ಮಂಗೀಹಾಳ ಅಧ್ಯಕ್ಷತೆ ವಹಿಸಿದ್ದರು. ವಕೀಲರದ ಸಂಘದ ಅಧ್ಯಕ್ಷ ವಿ.ಸಿ ಪಾಟೀಲ, ಅರವಿಂದ ಕಲ್ಬುರ್ಗಿಕರ್, ವಿಎಸ್ ಜೋಷಿ, ಎಸ್.ಸಿದ್ರಾಮಪ್ಪ, ನಿಂಗಣ್ಣ ಚಿಂಚೋಡಿ, ಬಿಇಒ ಕೆಂಪರಂಗಯ್ಯ, ಥಾಮಸ್ ದೊಡ್ಡಮನಿ, ಮಹಾದೇವ ಮೂಲಗೆ, ದೇವರಾಜ ಕೊಡಬಾಳ್, ಜ್ಯೋತಿ ನಾಯಕ ವೇದಿಕೆಯಲ್ಲಿದ್ದರು.