ಯಾವ ಜಾಗವೂ ಮಹಿಳೆಗೆ ಸುರಕ್ಷಿತವಲ್ಲವಾಗಿ ಉಳಿದಿಲ್ಲ
ಯಾದಗಿರಿ: ಇಂದು ಮಹಿಳೆಯರು ದುಡಿಯುವ ಸ್ಥಳಗಳು ಮಾತ್ರವಲ್ಲ, ಯಾವ ಜಾಗವೂ ಅವಳಿಗೆ ಸುರಕ್ಷಿತವಾಗಿ ಉಳಿದಿಲ್ಲ. ಎಲ್ಲೆಡೆ ಮಹಿಳೆಯರ ಮೇಲೆ ದಿನನಿತ್ಯ ನಡೆಯುತ್ತಿರುವ ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳು ಮತ್ತು ಅಗೌರವದ ಅಸಂಖ್ಯಾತ ಘಟನೆಗೇ ಇದಕ್ಕೆ ನಿದರ್ಶನ ಎಂದು ಆಲ್ ಇಂಡಿಯಾ ಯುಟಿಯುಸಿ ರಾಜ್ಯ ಉಪಾಧ್ಯಕ್ಷ ಕೆ.ಸೋಮಶೇಖರ ಖೇದ ವ್ಯಕ್ತಪಡಿಸಿದರು.
ಅಂತಾರಾಷ್ಟ್ರೀಯ ಮಹಿಳಾ ದಿನ ನಿಮಿತ್ತ ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘ, ಆಶಾ ಕಾರ್ಯಕರ್ತೆಯರ ಸಂಘ ಮತ್ತು ವಸತಿ ನಿಲಯ ಕಾರ್ಮಿಕರ ಸಂಘಗಳ ಆಶ್ರಯದಲ್ಲಿ ಶುಕ್ರವಾರ ಗುರುಮಠಕಲ್ ಸರ್ಕಾರಿ ಹಾಸ್ಟೆಲ್ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಂಡವಾಳಶಾಹಿ ವ್ಯವಸ್ಥೆಯ ಕೊಳಕು ಸಂಸ್ಕೃತಿ: ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿ. ಕೇಂದ್ರ- ರಾಜ್ಯ ಸರ್ಕಾರಗಳ ಪರೋಕ್ಷ ಕುಮ್ಮಕ್ಕಿನಿಂದ ಬಂಡವಾಳಶಾಹಿ ವ್ಯವಸ್ಥೆಯ ಕೊಳಕು ಸಂಸ್ಕೃತಿಯು ವಿವಿಧ ಮಾಧ್ಯಮಗಳ ಮೂಲಕ ಹರಡುತ್ತಿವೆ. ಇದರಿಂದಾಗಿ ಮಹಿಳೆಯರ ಮೇಲೆ ಇಂಹತ ದೌರ್ಜನ್ಯಗಳು ಹೆಚ್ಚುತ್ತಿವೆ ಎಂದ ಅವರು, ಇದನ್ನು ತಡೆಯಲು ವಿಫಲವಾಗಿರುವ ಸರ್ಕಾರಗಳ ನಿಷ್ಕ್ರಿಯತೆಯನ್ನು ತೀವ್ರವಾಗಿ ಖಂಡಿಸಿದರು.
ಜಗತ್ತಿನಾದ್ಯಂತ ವಿಜ್ಞಾನ- ತಂತ್ರಜ್ಞಾನ, ಬಾಹ್ಯಾಕಾಶ, ಶಿಕ್ಷಣ, ವೈದ್ಯ್ಯಕೀಯ, ಎಂಜಿನಿಯರಿಂಗ್, ವಿಮಾನಯಾನ, ಕ್ರೀಡೆ ಇನ್ನಿತರ ಕ್ಷೇತ್ರಗಳಲ್ಲಿ ಜಗತ್ತಿನಾದ್ಯಂತ ಅಸಂಖ್ಯಾತ ಮಹಿಳೆಯರು ಅಗಾಧ ಸಾಧನೆ ಮಾಡಿದ್ದಾರೆ. ಅದೇ ಸಮಯದಲ್ಲಿ ಕೃಷಿ, ಮನೆಗೆಲಸ, ಗಾರ್ಮೆಂಟ್ಸ್, ಬೀಡಿ ತಯಾರಿಕೆ, ಕಟ್ಟಡ ನಿರ್ಮಾಣದಂತಹ ಅಸಂಘಟಿತ ವಲಯದ ಇನ್ನಿತರ ಕಠಿಣವೆಂದು ಪರಿಗಣಿಸಿಲ್ಪಟ್ಟ ಕೆಲಸಗಳನ್ನೂ ನಿರ್ವಹಿಸಿ ಮಹಿಳೆ ಸೈ ಎನ್ನಿಸಿಕೊಂಡಿದ್ದಾಳೆ.
ಅದೆಷ್ಟೋ ಸಮಸ್ಯೆ ಜೀವಂತ: ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷೆ ಡಿ.ಉಮಾದೇವಿ ಮಾತನಾಡಿ, ವಿವಿಧ ರಂಗಗಳಲ್ಲಿ ದುಡಿವ ಮಹಿಳೆಯರು ಅಪಾರ ಸಾಧನೆ ಮಾಡಿರುವುದೂ ನಿಜ. ಆದರೆ ಅಂದು ಧೀರ ಮಹಿಳೆಯರು ಆ ಹೋರಾಟದಲ್ಲಿ ಎತ್ತಿದ ಅದೆಷ್ಟೋ ಪ್ರಮುಖ ಸಮಸ್ಯೆಗಳು ಇಂದಿಗೂ ಬಂಡವಾಳಶಾಹಿ ವ್ಯವಸ್ಥೆಯಿರುವ ದೇಶಗಳಲ್ಲಿ ಇನ್ನೂ ಜೀವಂತವಾಗಿವೆ ಎಂದರು.
ಸಂಘದ ಜಿಲ್ಲಾ ಉಪಾಧ್ಯಕ್ಷೆ ಮೈನಾಬಾಯಿ ಅಧ್ಯಕ್ಷತೆ ವಹಿಸಿದ್ದರು. ಅನಿತಾ ಇದ್ದರು. ಶಾರದಾ, ಗಂಗಾಂಬಿಕಾ, ವರಲಕ್ಷ್ಮೀ, ತಿಪ್ಪಮ್ಮ, ಭಾಗ್ಯ, ನಾಗಮ್ಮ, ಶರಣಮ್ಮ ಇತರರು ಇದ್ದರು.