ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ನರನಾಳ; ಇಂದು ರಥೋತ್ಸವ

Srinivasa Murthy VN
Updated On : 11 Mar 2013, 12:20 pm

ಚಿಂಚೋಳಿ: ತಾಲೂಕಿನ ನರನಾಳ ಗ್ರಾಮದ ಮಲ್ಲಿಕಾರ್ಜುನ ದೇವಾಲಯದ 14ನೇ ಜಾತ್ರೆ, ರಥೋತ್ಸವ ಮಾ.11ರಂದು ಸಂಜೆ 6.30ಕ್ಕೆ ನಡೆಯಲಿದೆ. ರಥೋತ್ಸವ ನಿಮಿತ್ತ ಸಂಜೆ ಶಿವಾನುಭವ ಚಿಂತನಗೋಷ್ಟಿಯ ನೇತೃತ್ವವನ್ನು ಷ.ಬ್ರ. ಶಿವಕುಮಾರ ಶಿವಾಚಾರ್ಯರು ವಹಿಸಲಿದ್ದಾರೆ. ಸಾನಿಧ್ಯವನ್ನು ಷ.ಬ್ರ. ವೀರ ತಪಸ್ವಿ ವೀರಭದ್ರ ಶಿವಾಚಾರ್ಯರು,ಕಡಗಂಚಿ, ಷ.ಬ್ರ.ಚೆನ್ನಮಲ್ಲ ಶಿವಯೋಗಿಗಳು ವಿರಕ್ತ ಮಠ ಹುಡುಗಿ ವಹಿಸಲಿದ್ದಾರೆ. ಮಾಜಿ ಶಾಸಕ ಸುನೀಲ್ ವಲ್ಯಾಪುರ ಅಧ್ಯಕ್ಷತೆ ವಹಿಸಲಿದ್ದಾರೆ. ಜಾತ್ರೆ ನಿಮಿತ್ತ 'ಹುಡುಗಿ ಮೆಚ್ಚಿದ ಹುಂಬ' ಎಂಬ ಸಾಮಾಜಿಕ ನಾಟಕ ಪ್ರದರ್ಶನ ನಡೆಯಲಿದೆ.

ಮೂರು ದಿನದಿಂದ ಕತ್ತಲಲ್ಲಿ ತಡಿಬಿಡಿ
ಯಾದಗಿರಿ: ಶಹಾಪುರ ತಾಲೂಕಿನ ತಡಿಬಿಡಿ ಗ್ರಾಮ ಕಳೆದ ಮೂರು ದಿನಗಳಿಂದ ಕತ್ತಲೆಯಲ್ಲಿ ಕಾಲ ಕಳೆಯುತ್ತಿದೆ. ಗ್ರಾಮಕ್ಕೆ ವಿದ್ಯುತ್ ಒದಗಿಸುವ ಟಿಸಿ ಸುಟ್ಟಿದ್ದು, ಇದುವರೆಗೆ ದುರಸ್ತಿ ಕಾರ್ಯ ಮಾಡದೇ ಜೆಸ್ಕಾಂ ನಿರ್ಲಕ್ಷ್ಯ ವಹಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ಕರೆಂಟ್ ಇಲ್ಲದೆ ಪಂಪ್‌ಸೆಟ್‌ಗಳು ಕೈಕೊಟ್ಟಿದ್ದು ಗ್ರಾಮದ ಜನರು ಕುಡಿಯುವ ನೀರಿಗೂ ಪರದಾಡುವಂತಾಗಿದೆ. ಸಮೀಪದಲ್ಲಿ ಎಲ್ಲಿಯೂ ಕುಡಿಯುವ ನೀರು ಸಿಗುತ್ತಿಲ್ಲ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆ ಸಂದರ್ಭವಾಗಿರುವುದರಿಂದ ಅವರ ಅಭ್ಯಾಸಕ್ಕೂ ತೊಂದರೆಯಾಗಿದೆ. ಇದನ್ನೆಲ್ಲ ಗಮನಿಸಿ ಶೀಘ್ರದಲ್ಲಿ ಟಿಸಿ ದುರಸ್ತಿ ಕಾರ್ಯ ಕೈಗೊಂಡು, ಗ್ರಾಮಕ್ಕೆ ವಿದ್ಯುತ್ ಪೂರೈಕೆ ಆರಂಭಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಶೇಂಗಾ ಬೆಲೆ ಕುಸಿತ: ನಾಳೆ ಪ್ರತಿಭಟನೆ
ಯಾದಗಿರಿ: ಬೆಲೆ ಕುಸಿತದಿಂದಾಗಿ ಜಿಲ್ಲೆಯಲ್ಲಿ ಶೇಂಗಾ ಬೆಳೆ ಬೆಳೆದ ರೈತರು ಕಂಗಾಲಾಗಿದ್ದಾರೆ. ಸರ್ಕಾರ ತಕ್ಷಣ ಬೆಂಬಲ ಬೆಲೆ ನೀಡಿ ಶೇಂಗಾ ಖರೀದಿಸಬೇಕು. ಇಲ್ಲದಿದ್ದಲ್ಲಿ ಮಾ.12ರಂದು ರೈತರೊಂದಿಗೆ ಸೇರಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಟೋಕರಿ ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಮುದ್ನಾಳ ಎಚ್ಚರಿಸಿದ್ದಾರೆ.ಶೇಂಗಾ ಬೆಳೆ ಕೈಗೆ ಬರುತ್ತಿದ್ದಂತೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗಿದೆ. ಇದರಿಂದ ರೈತರಿಗೆ ಅಪಾರ ನಷ್ಟವಾಗಿದೆ. ಅಲ್ಲದೇ 12 ಸಾವಿರ ನೀಡಿ ಕ್ವಿಂಟಲ್ ಬಿತ್ತನೆ ಶೇಂಗಾ ಬೀಜ ಖರೀದಿಸಿ ರೈತರು ಬೆಳೆ ಮಾಡಿದ್ದಾರೆ. ಮಳೆಯೂ ಇಲ್ಲದ್ದರಿಂದ ಇಳವರಿಯೂ ಕಡಿಮೆಯಾಗಿದೆ. ಅನೇಕ ಸಮಸ್ಯೆ ಎದುರಿಸಿ ಬೆಳೆ ಬೆಳೆದರೂ ಈಗ ಯೋಗ್ಯ ದರ ಸಿಗುತ್ತಿಲ್ಲ. ಇದರಿಂದ ರೈತರು ಸಾಲದ ಸುಳಿಯಲ್ಲಿ ಸಿಲುಕುವಂತಾಗಿದೆ. ಇದನ್ನು ಖಂಡಿಸಿ ಹಾಗೂ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಮಾ.12ರಂದು ಸಾವಿರಾರು ರೈತರೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. 12ರಂದು ಬೆಳಗ್ಗೆ 9-30ಕ್ಕೆ ಪದವಿ ಕಾಲೇಜು ಎದುರಿನ ಆಂಜನೇಯ ದೇವಸ್ಥಾನದಿಂದ ಮೆರವಣಿಗೆಯಲ್ಲಿ ಹೊರಟು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

ಧರ್ಮಸಭೆ
ಅಫಜಲ್ಪುರ: ಸಮಾನತೆ ಸಾರಿದ ತಿಂಥಣಿ ಜಗದ್ಗುರು ಮೌನೇಶ್ವರರು ಸಮಾಜವನ್ನು ಅಜ್ಞಾನದಿಂದ ಮುಕ್ತ ಮಾಡಲು ಶ್ರಮಿಸಿದ್ದಾರೆ ಎಂದು ಸಾಹಿತಿ ಮಹಾದೇವಪ್ಪ ಬಡಗೇರ ಹೇಳಿದರು. ಪಟ್ಟಣದ ಕಾಳಿಕಾದೇವಿ ದೇವಸ್ಥಾನದಲ್ಲಿ ಜರುಗಿದ ಧರ್ಮ ಸಭೆಯನ್ನುದ್ದೆಶಿಸಿ ಮಾತನಾಡಿದರು. ವಿಶ್ವರಾದ್ಯ ಮಳೇಂದ್ರ ಶಿವಚಾರ್ಯರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಾಹಿತಿ ಮುನೀರ ಪಟೇಲ, ರಾಜೇಂದ್ರ ಬಡಗೇರ ಇದ್ದರು.

ಇಂದು ಜಾತ್ರೆ
ಆಳಂದ: ತಾಲೂಕಿನ ಸಕ್ಕರಗಾ ಗ್ರಾಮದಲ್ಲಿ ಶಿವ-ಪಾರ್ವತಿ ಜಾತ್ರೆಯು ಮಾ.11ರಂದು ಉದಗೀರ, ಡೋಣಗಾಂವ, ಪಡಸಾವಳಿ ಮಠಗಳ ಪೀಠಾಧಿಪತಿ ಶಂಭುಲಿಂಗ ಶಿವಾಚಾಯಂರ ಸಾನಿಧ್ಯದಲ್ಲಿ ನಡೆಯಲಿದೆ. ಬೆಳಿಗ್ಗೆ ಕುಂಭ ಕಳಸದ, ಪುರವಂತರ ಮೆರವಣಿಗೆ, ಸಂಜೆ 7 ಗಂಟೆಗೆ ಮಹಾರಥೋತ್ಸವ ಜರುಗುವುದು. ಸ್ಥಳೀಯ ಕಲಾವಿದರು ನಡೆಸಿಕೊಡುವ ಸಾಮಾಜಿಕ ನಾಟಕ 'ಹಟ ಸಾಧಿಸಿದ ಘಟ ಸರ್ಪ' ಪ್ರದರ್ಶನವಾಗಲಿದೆ.

ಶಿವಾಜಿ ಜಯಂತಿ
ಆಳಂದ: ತಾಲೂಕಿನ ಕಿಣ್ಣಿಸುಲ್ತಾನ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಸಡಗರ ಸಂಭ್ರಮದೊಂದಿಗೆ ಯುವಕರು ಆಚರಿಸಿದರು. ಮಂಜುನಾಥ ವಾಗ್ಮೋಡೆ, ಶಿವರಾಜ ಮುಲಗೆ, ದತ್ತಾ ಪಾಂಡ್ರೆ, ವಿಠಲ ಪಾಟೀಲ, ಸತೀಶ ಹಾವಶೆಟ್ಟಿ, ಕಾಶಿನಾಥ ಬಂಡಗರ, ದಯಾನಂದ ಕುಂಬಾರ, ಕೇಶವ ಪಾಂಡ್ರೆ, ಮಹೇಶ ನಾಟಕಾಳೆ, ಶಿವಾ ಕುಂಬಾರ, ಮಂಜುನಾಥ ಇದ್ದರು.

ನಾಳೆ ಕಾರ್ಯಕ್ರಮ
ಗುಲ್ಬರ್ಗ: ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿವಿ ವತಿಯಿಂದ ನಗರದ ಆದರ್ಶನಗರದಲ್ಲಿರುವ ಸತ್ಯತೀರ್ಥ ಸಭಾಂಗಣದಲ್ಲಿ ಮಾ.12ರಂದು ಸಂಜೆ 6ಕ್ಕೆ ಮಹಿಳಾ ದಿನಾಚರಣೆ ಹಾಗೂ ಮಹಾಶಿವರಾತ್ರಿ ಉತ್ಸವದ ನಿಮಿತ್ತ ವಿವಿಧ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಮುಖ್ಯ ರಾಜಯೋಗಿನಿ ಬಿ.ಕೆ. ವಿಜಯಾ ತಿಳಿಸಿದ್ದಾರೆ. ಮಹಿಳಾ ದಿನಾಚರಣೆ ನಿಮಿತ್ತ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಹಾಗೂ ಶಿವರಾತ್ರಿಯ ಅಧ್ಯಾತ್ಮಿಕ ರಹಸ್ಯ ಕುರಿತು ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿದೆ. ಜಿಲ್ಲಾಧಿಕಾರಿ ಎನ್.ಎಸ್.ಪ್ರಸನ್ನಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಸತೀಶ್‌ಕುಮಾರ ಹಾಗೂ ಸಹಾಯಕ ಆಯುಕ್ತ ಹರ್ಷ ಅತಿಥಿಗಳಾಗಿ ಆಗಮಿಸಲಿದ್ದಾರೆ. ರಾಜಯೋಗಿ ಬಿ.ಕೆ. ಪ್ರೇಮ ಅವರು ಅಧ್ಯಕ್ಷತೆ ವಹಿಸುವರು. ರಾಜಯೋಗಿನಿ ವಿಜಯಾ ಉಪನ್ಯಾಸ ನೀಡುವರು.

ಹೋಂಗಾರ್ಡ್ ಸಾವು
ಗುಲ್ಬರ್ಗ: ಸೇಡಂ ತಾಲೂಕಿನ ಯಾನಾಗುಂದಿ ಮಾಣಿಕೇಶ್ವರಿ ದೇವಿ ಇರುವ ಸೂರ್ಯನಂದಿ ಬೆಟ್ಟದಲ್ಲಿ ಶಿವರಾತ್ರಿ ಬಂದೋಬಸ್ತ್ ಕರ್ತವ್ಯದ ಮೇಲಿದ್ದ ಚಿಂಚೋಳಿ ಗೃಹರಕ್ಷಕ ದಳ ಘಟಕದ ಗೃಹ ರಕ್ಷಕ ಮಲ್ಲಿಕಾರ್ಜುನ ಬಸಪ್ಪ (38) (ಎಚ್‌ಜಿ 247) ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.

ಎಸ್‌ಡಿಎಂಸಿ ರಚನೆ
ಗುಲ್ಬರ್ಗ: ನಗರದ ಕೋಟನೂರು (ಡಿ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2013-14ನೇ ಸಾಲಿನ ಎಸ್‌ಡಿಎಂಸಿ ರಚನೆ ಮಾಡಲಾಯಿತು. ಗ್ರಾಮ ಪಂಚಾಯತ್ ಸದಸ್ಯ ಭೀಮಾಶಂಕರ ಎಲ್ ಹುಲಿಮನಿ, ಸಾವಿತ್ರಮ್ಮ ಎನ್. ದೊಡ್ಡಮನಿ, ಶಿಕ್ಷಣ ಸಂಯೋಜಕ ಚಂದ್ರಕಾಂತ ಬಿರಾದಾರ್ ಮತ್ತು ನಂದಿಕೂರ ಸಿಆರ್‌ಸಿ ಶಂಕರ ಜೋಗುರ ಹಾಗೂ ಪಾಲಕರ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಬಸವರಾಜ ರಾಣಪ್ಪ ಕಟ್ಟಿಮನಿ (ಅಧ್ಯಕ್ಷ), ಪಾರ್ವತಿ ಅಶೋಕ (ಉಪಾಧ್ಯಕ್ಷ), ಬಸವರಾಜ ನಾಗಪ್ಪ ಕುಂಬಾರ (ಸದಸ್ಯರು), ಮಹಾದೇವಪ್ಪ ಶಾಮರಾವ್ ಪೂಜಾರಿ (ಸದಸ್ಯರು), ಬಸವಂತರಾಯ ಅಣ್ಣಾರಾಯ (ಸದಸ್ಯರು),  ಮಲ್ಲಿಕಾರ್ಜುನ ದಂಡಪ್ಪ ಸಿರಸಗಿ (ಸದಸ್ಯರು), ಪರಶುರಾಮ ಅಂಬಾಜಿ ರಾಠೋಡ (ಸದಸ್ಯರು), ಪದ್ಮಾವತಿ ಯೋಗಪ್ಪ ಸರಡಗಿ (ಸದಸ್ಯರು), ಅನಸುಬಾಯಿ ಸೈದಪ್ಪ (ಸದಸ್ಯರು), ಸವಿತಾ ಭೀಮಾಶಂಕರ (ಸದಸ್ಯರು), ಬೇಬಿ ಶಿವಶರಣಪ್ಪ (ಸದಸ್ಯರು), ಕಾಳಮ್ಮ ಶರಣಬಸಪ್ಪ (ಸದಸ್ಯರು), ಅಮೀನಾಬೇಗಂ ಅಬ್ದುಲ್ ವಾಹಿದ್ (ಸದಸ್ಯರು), ರೇಣುಕಾ ಪಿ. ಮಣ್ಣೂರ (ಕಾರ್ಯದರ್ಶಿ) ನೇಮಕ ಮಾಡಲಾಯಿತು.

ಅಂಗವಿಕಲರಿಗೆ ನೆರವು
ಗುಲ್ಬರ್ಗ: ಧಾರವಾಡ ಮೂಲದ ಸಮರ್ಥನಂ ಅಂಗವಿಕಲರ ಸಂಸ್ಥೆ ಅರ್ಹ ಅಂಗವಿಕಲರಿಗೆ ಸೂಕ್ತ ತರಬೇತಿ ಕೊಟ್ಟು ವಿವಿಧ ಕಂಪನಿಗಳಲ್ಲಿ ಉದ್ಯೋಗ ದೊರಕಿಸುವ ಸೃಷ್ಟಿ ಯೋಜನೆಯಡಿಯಲ್ಲಿ ಈ ಬಾರಿ ಗುಲ್ಬರ್ಗ- ಯಾದಗಿರಿ ಭಾಗದ ಅಂಗವಿಕಲರನ್ನು ಹೆಚ್ಚಿನ ಪ್ರಮಾಣದಲ್ಲಿ ಆಯ್ಕೆ ಮಾಡಲು ಮುಂದಾಗಿದೆ. ಏಪ್ರಿಲ್‌ನಲ್ಲಿ ಗುಲ್ಬರ್ಗದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ವಿವರಕ್ಕೆ 94808 09580 ಮೂಲಕ ಸಂಪರ್ಕಿಸಬಹುದು.

ಭ್ರಷ್ಟಾಚಾರದಲ್ಲಿ ಕೇಂದ್ರ, ರಾಜ್ಯ ಸರ್ಕಾರ: ಕಿರಣಮಯಿ
ಅಫಜಲ್ಪುರ: ಕಳೆದ 3 ವರ್ಷಗಳಲ್ಲಿ ಕೇಂದ್ರದಲ್ಲಿರುವ ಕಾಂಗ್ರೆಸ್ ಸರ್ಕಾರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರಗಳ ಅವಧಿಯಲ್ಲಿ ಜನಪರ ಕೆಲಸಗಳಿಗಿಂತ ಭ್ರಷ್ಟಾಚಾರ ಸೇರಿದಂತೆ ಜನ ವಿರೋಧಿ ಕೆಲಸಗಳಿಗೆ ಹೆಚ್ಚಿನ ಪ್ರಾಶಸ್ತ್ಯ ದೊರಕಿದ್ದು ದುರಂತ ಎಂದು ರಾಷ್ಟ್ರಿಯ ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಕಿರಣಮಯಿ ನಂದಾ ಹೇಳಿದರು.
ಅಫಜಲ್ಪುರದಲ್ಲಿ ನಡೆದ ಸಮಾಜವಾದಿ ಪಕ್ಷದ ನೂತನ ಕಾರ್ಯಲಯ ಉದ್ಘಾಟಿಸಿ ಮಾತಾನಾಡಿ, ಸಮಾಜವಾದಿ ಪಕ್ಷದ ಜನರು ಸರ್ವಾಂಗೀಣ ಅಭಿವೃದ್ಧಿ ಮತ್ತು ಕಲ್ಯಾಣ ಮಾಡುತ್ತದೆ. ಮುಂಬರುವ ವಿಧಾನಸಭೆ ಚೂನಾವಣೆಯಲ್ಲಿ ಅಫಜಲ್ಪುರ ಮತಕ್ಷೇತ್ರದ ಸಮಾಜವಾದಿ ಪಕ್ಷದ ಅಭ್ಯರ್ಥಿಯನ್ನಾಗಿ ಗೋವಿಂದಭಟ್ ಅವರನ್ನು ಆಯ್ಕೆ ಮಾಡಲಾಗಿದೆ. ಅಫಜಲ್ಪುರ ಮತಕ್ಷೇತ್ರದಿಂದ ಸಮಾಜವಾದಿ ಪಕ್ಷ ತನ್ನ ಖಾತೆ ತೆರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಸಮಾಜವಾದಿ ಪಕ್ಷದ ಉಪಾಧ್ಯಕ್ಷ ಗೋವಿಂದಭಟ್ ಮಾತನಾಡಿ, ಕಾಂಗೇಸ್, ಜೆಡಿಎಸ್ ಬಿಜೆಪಿ ಪಕ್ಷಗಳು ಭ್ರಷ್ಟಾಚಾರದಿಂದ ಕೂಡಿದ್ದು, ಇವುಗಳನ್ನು ಹೊಡೆದೊಡಿಸಿ ಸಮಾಜವಾದಿ ಪಕ್ಷವನ್ನು ಗೆಲ್ಲಿಸಬೇಕು  ಎಂದರು.

ವಸ್ತು ಪ್ರದರ್ಶನ
ಅಫಜಲ್ಪುರ: ಶಿಕ್ಷಣದಿಂದ ಮನುಷ್ಯನ ವ್ಯಕ್ತತ್ವದ ಜೊತೆಗೆ ಸಾಮಾಜಿಕ ಬದುಕು ಸುಧಾರಣೆಯಾಗುತ್ತದೆ ಎಂದು ಜಿಪಂ ಸದಸ್ಯ ಸಿದ್ಧರ್ಥ ಬಸರಿಗಿಡ ಹೇಳಿದರು. ಪಟ್ಟಣದ ರಾಯಲ್ ಪಬ್ಲಿಕ್ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಏರ್ಪಡಿಸಿದ್ದ ವಿಜ್ಞಾನ ವಸ್ತುಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಇಂತಹ ಸಮಾರಂಭಗಳಿಂದ ಮಕ್ಕಳ ಭೌತಿಕ ಮಟ್ಟ ಸುಧಾರಣೆಯಾಗುತ್ತದೆ ಎಂದರು. ಜೈಕರವೇ ತಾಲೂಕ ಅಧ್ಯಕ್ಷ ಸುರೇಶ ಅವಟೆ ಮಾತನಾಡಿ, ರಾಜ್ಯದಲ್ಲಿ ಸರ್ಕಾರದ ಜೊತೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿ ಮಾಡುತ್ತಿದೆ ಎಂದರು.

ಮೂಲ ಸೌಲಭ್ಯಕ್ಕೆ ಆಗ್ರಹ
ಗುಲ್ಬರ್ಗ: ನಗರಕ್ಕೆ ಹೊಂದಿಕೊಂಡಿರುವ ಸರ್ವೆ ನಂ.1 ಮತ್ತು 5 ಜಾಫರಬಾದ್ ರಾಣೋಜಿಪೀರ ದರ್ಗಾ ಹತ್ತಿರವಿರುವ ಆಶ್ರಯ ಕಾಲೋನಿಯಲ್ಲಿ ವಾಸವಾಗಿರುವವರ ಮನೆ ಮಂಜೂರು ರದ್ದು ಮಾಡಿದವರಿಗೆ ಹಕ್ಕು ಪತ್ರ ವಿತರಣೆ ಮಾಡಬೇಕು. ಒಳಚರಂಡಿ, ರಸ್ತೆ, ನೀರು ವಿದ್ಯುತ್ ಶೌಚಾಲಯ, ಪಡಿತರ ಚೀಟಿ ಮತ್ತು ಚುನಾವಣೆ ಗುರುತಿನ ಚೀಟಿ ಸೇರಿದಂತೆ ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿ ಕರವೇ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು. ಕರವೇ ತಾಲೂಕು ಅಧ್ಯಕ್ಷ ಅಶೋಕ ಬಿ. ಜಾಫರಬಾದ್, ಜಿಲ್ಲಾ ಅಧ್ಯಕ್ಷ ಕಲ್ಯಾಣರಾವ್ ಎಂ. ಪಾಟೀಲ್, ಪಿ. ಲಂಡನಕರ್, ಚಂದ್ರಕಾಂತ, ಜಿಲ್ಲಾ ಘಟಕ ಆಟೋ ಘಟಕ ಅಧ್ಯಕ್ಷ ಅಶೋಕ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement