ಮೈಲಾಪುರಕ್ಕೆ ಹರಿದು ಬಂದ ಭಕ್ತಸಾಗರ
ಯಾದಗಿರಿ: ಮಹಾ ಶಿವರಾತ್ರಿ ಪ್ರಯುಕ್ತ ಜಿಲ್ಲೆಯ ಐತಿಹಾಸಿಕ ಗುಹಾಂತರ ದೇವಸ್ಥಾನ ಮೈಲಾಪುರದ ಮಲ್ಲಯ್ಯನ ದರ್ಶನಕ್ಕೆ ಭಕ್ತಸಾಗರವೇ ಹರಿದು ಬಂದಿತು.
ಭಾನುವಾರ ನಸುಕಿನಿಂದಲೇ ಕರ್ನಾಟಕ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆಯಿಂದ ಭಕ್ತರು ಆಗಮಿಸಿ, ಪವಿತ್ರ ಹೊನ್ನಕೆರೆಯಲ್ಲಿ ಪುಣ್ಯ ಸ್ನಾನ ಮಾಡಿ ನಂತರ ಮಲ್ಲಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿ ಕೃತಾರ್ಥರಾದರು. ಸರತಿ ಸಾಲಿನಲ್ಲಿ ನಿಂತು ಮೈಲಾರಲಿಂಗೇಶ್ವರನ ದರ್ಶನ ಪಡೆದರು. ಶಿವ ನಾಮ ಪಠಿಸುತ್ತ ಶಿವರಾತ್ರಿಯ ಪುಣ್ಯ ದಿನದಂದು ಪೂಜೆ ಸಲ್ಲಿಸಿದರು.
ತಾಲೂಕಿನ ಚಿಂತನಹಳ್ಳಿಯ ನಿಸರ್ಗದಲ್ಲಿರುವ ಗುಹಾಂತರ ಗವಿಸಿದ್ದಲಿಂಗೇಶ್ವರ ದೇವಸ್ಥಾನದಲ್ಲೂ ಶಿವರಾತ್ರಿ ಪೂಜೆ ನಡೆಯಿತು. ಗಡಿಭಾಗದ ಇಡ್ಲೂರು ಶಂಕರಲಿಂಗೇಶ್ವರ ದೇವಸ್ಥಾನ ಹಾಗೂ ಕಾಳಬೆಳಗುಂದಿಯ ಬನದೇಶ್ವರ ದೇವಸ್ಥಾನಕ್ಕೆ ತೆರಳಿದ ಸಹಸ್ರಾರು ಭಕ್ತರು ಶಿವನ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.
ನಗರದ ಅಮೃತೇಶ್ವರ ದೇವಸ್ಥಾನವೂ ಭಾನುವಾರ ಬೆಳಗ್ಗೆಯಿಂದಲೇ ಭಕ್ತರಿಂದ ತುಂಬಿ ತುಳುಕುತ್ತಿತ್ತು. ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಆಗಮಸಿ ಶಿವಧ್ಯಾನದಲ್ಲಿ ನಿರತರಾಗಿ, ಶಿವನ ಕೃಪೆಗೆ ಪಾತ್ರರಾದರು.
ಸುರಪುರದಲ್ಲಿ ಗಂಗಾಜಲ ವಿತರಣೆ
ಸುರಪುರ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಧಾರ್ಮಿಕ ಸ್ಥಳಗಳಲ್ಲಿ ಕಂದಾಯ ಇಲಾಖೆಯಿಂದ ಶಿವರಾತ್ರಿ ಅಂಗವಾಗಿ ಭಾನುವಾರ ಗಂಗಾಜಲ ವಿತರಿಸಲಾಯಿತು.
ಧಾರ್ಮಿಕ ಮತ್ತು ದತ್ತಿ ಇಲಾಖೆಯಿಂದ ಈ ಬಾರಿ ತಾಲೂಕಿಗೆ 15 ಲೀಟರ್ನ 15 ಕ್ಯಾನ್ ಗಂಗಾಜಲ ಬಂದಿದ್ದು, ಸುರಪುರದ ಎಲ್ಲಾ ದೇವಸ್ಥಾನಗಳಿಗೆ ಮತ್ತು ದೇವರಗೋನಾಲ ಮತ್ತು ತಿಂಥಣಿಯ ಮೌನೇಶ್ವರ, ಕೊಡೇಕಲ್, ಛಾಯಾ ಭಗವತಿ ಸೇರಿದಂತೆ ತಾಲೂಕಿನ ಐದು ಹೋಬಳಿಗಳ ದೇವಸ್ಥಾನಗಳಿಗೂ ಮತ್ತು ಇನ್ನಿತರ ಕಡೆಗಳಲ್ಲಿ ಗಂಗಾಜಲ ಕ್ಯಾನ್ ಮತ್ತು ಪ್ಲಾಸ್ಟಿಕ್ ಬಾಟಲಿಗಳಲ್ಲಿ ವಿತರಿಸಲಾಗಿದೆ.
ಈ ಸಂದರ್ಭದಲ್ಲಿ ಶಿರಸ್ತೇದಾರ ಬಾಬರ ಅಲಿ, ಕಂದಾಯ ನೀರಿಕ್ಷಕ ಅಣವೀರಪ್ಪ , ಗ್ರಾಮ ಲೇಖಪಾಲಕರಾದ ವಿಠ್ಠಲ, ಸಿದ್ದಯ್ಯಸ್ವಾಮಿ, ಆನಂದ, ಈಶ್ವರಪ್ಪ, ಮೋಬಿನ್, ಅಶೋಕ ಇದ್ದರು.