ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಯಾರಿಗೆ ದಕ್ಕುತ್ತೆ ಶಿವಜಪ ಫಲ?

Srinivasa Murthy VN
Updated On : 11 Mar 2013, 12:16 pm

-ನಾರಾಯಣ ಹೆಗಡೆ
ಕ.ಪ್ರ. ವಾರ್ತೆ ೤ ಯಾದಗಿರಿ೤ ಮಾ.10
ರಾಜಕೀಯ ಜೀವನಕ್ಕೆ ಕಾಲಿಡುವ ಕನಸು ಕಂಡು ನಗರ, ಸ್ಥಳೀಯ ಚುನಾವಣೆಯಲ್ಲಿ ಸ್ಪರ್ಧಿಸಿದವರ ಭವಿಷ್ಯ ಸೋಮವಾರವೇ ನಿರ್ಧಾರವಾಗಲಿದೆ. ಜತೆಗೆ ಸ್ಥಳೀಯ ಶಾಸಕರು ಹಾಗೂ ವಿವಿಧ ಪಕ್ಷಗಳ ಮುಖಂಡರಿಗೂ ಇದು ಪ್ರತಿಷ್ಠೆಯ ವಿಷಯವಾಗಿದ್ದು, ಇಲ್ಲಿ ಬರುವ ಫಲಿತಾಂಶವು ಮುಂದಿನ ವಿಧಾನಸಭಾ ಚುನಾವಣೆಯ ದಿಕ್ಸೂಚಿಯಾಗಲಿದೆ.
ಆದ್ದರಿಂದ ಸೋಮವಾರದ ಮತ ಎಣಿಕೆ ಕಾರ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಜಿಲ್ಲೆಯ ಯಾದಗಿರಿ ನಗರಸಭೆ, ಶಹಾಪುರ ಹಾಗೂ ಸುರಪುರ ಪುರಸಭೆ, ಗುರುಮಠಕಲ್ ಪಟ್ಟಣ ಪಂಚಾಯಿತಿಗಳ ಫಲಿತಾಂಶದ ಚಿತ್ರಣ ಸೋಮವಾರ ಮಧ್ಯಾಹ್ನದ ವೇಳೆಗೆ ಸ್ಪಷ್ಟವಾಗಲಿದೆ. ಆದ್ದರಿಂದ ಎಲ್ಲಾ ಮುಖಂಡರು ಈಗ ಸೋಲು-ಗೆಲವಿನ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ. ಅಲ್ಲದೇ ತಮ್ಮ ರಾಜಕೀಯ ಭವಿಷ್ಯದ ಬಗ್ಗೆಯೂ ಚಿಂತಿತರಾಗಿದ್ದಾರೆ. 2007ರ ಚುನಾವಣೆಗಿಂತ ಈ ಬಾರಿ ಭಿನ್ನವಾಗಿದ್ದು, ಹೊಸ ಪಕ್ಷಗಳೂ ಉದಯಿಸಿರುವುದರಿಂದ ಜನಾದೇಶ ಯಾರಿಗಿದೆ ಎನ್ನುವುದು ಫಲಿತಾಂಶದ ಬಳಿಕ ಗೊತ್ತಾಗಲಿದೆ. ಅಲ್ಲದೇ ಇಲ್ಲಿ ವೈಯಕ್ತಿಕ ವರ್ಚಸ್ಸು ಕೂಡ ಕೆಲಸ ಮಾಡಲಿದ್ದು, ಶಾಸಕರು ಹಾಗೂ ಮುಖಂಡರ ಪ್ರತಿಷ್ಠೆಯನ್ನೂ ಓರೆಗೆ ಹಚ್ಚಲಿದೆ. ಆದ್ದರಿಂದ ಶಿವರಾತ್ರಿ ಮುನ್ನಾ ದಿನ ಪೂರ್ತಿ 'ಶಿವಜಪ'ದಲ್ಲೇ ಅಭ್ಯರ್ಥಿಗಳು ಕಾಲ ಕಳೆಯುವಂತಾಗಿದೆ.
ಭವಿಷ್ಯ ನಿರ್ಧಾರ: ಕಳೆದ ಮಾ.7ರಂದು ಮತದಾನ ನಡೆದಿದ್ದು, ಸೋಮವಾರ ಎಲ್ಲ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಆದ್ದರಿಂದ ಪುರಪಿತೃಗಳಾಗುವ ಕನಸು ಕಾಣುತ್ತಿರುವವರು ಆತಂಕದಲ್ಲೇ ದಿನ ನೂಕುತ್ತಿದ್ದಾರೆ. ಸೋಮವಾರ ಮಧ್ಯಾಹ್ನದ ವೇಳೆಗೆ ಫಲಿತಾಂಶ ಪ್ರಕಟವಾಗಲಿದ್ದು, ಆಗಲೇ ಎಲ್ಲರ ಭವಿಷ್ಯವೂ ಗೊತ್ತಾಗಲಿದೆ.
ಈ ಬಾರಿ ಶ್ರೀರಾಮುಲು ಅವರ ಬಿಎಸ್ಸಾರ್ ಕಾಂಗ್ರೆಸ್ ಹಾಗೂ ಯಡಿಯೂರಪ್ಪನವರ ಕೆಜೆಪಿ ಪಕ್ಷದ ಅಭ್ಯರ್ಥಿಗಳು ಕಣದಲ್ಲಿರುವುದರಿಂದ ಚುನಾವಣಾ ಫಲಿತಾಂಶದ ಮೇಲೆ ಎಲ್ಲರಿಗೂ ಕುತೂಹಲವಿದೆ. ಹಿಂದೆ ಯಾವುದೋ ಪಕ್ಷದಲ್ಲಿದ್ದವರು ಈಗ ಬೇರೆ ಪಕ್ಷದಿಂದ ರಾ ಜಕೀಯ ಭವಿಷ್ಯ ಕಂಡುಕೊಳ್ಳಲು ಸ್ಪರ್ಧಿಸಿದ್ದಾರೆ. ಆದರೆ ಮತದಾರ ಯಾರನ್ನು ಬೆಂಬಲಿಸಿ ಮತಯಂತ್ರದಲ್ಲಿನ ಗುಂಡಿ ಒತ್ತಿದ್ದಾನೆ ಎನ್ನುವುದನ್ನು ತಿಳಿಯುವ ಕ್ಷಣಗಣನೆ ಆರಂಭವಾಗಿದೆ.
ನಾಯಕರ ಪ್ರತಿಷ್ಠೆ: ಜಿಲ್ಲೆಯಲ್ಲಿ ಸದ್ಯ ಅತ್ಯಂತ ಹೆಚ್ಚು ಕುತೂಹಲ ನೆಟ್ಟಿರುವುದು ಸುರಪುರ ಪುರಸಭೆ ಫಲಿತಾಂಶದ ಮೇಲೆ. ಸ್ಥಳೀಯ ಸಂಸ್ಥೆ ಚುನಾವಣೆಯಾದರೂ ಇದನ್ನು ಕಾಂಗ್ರೆಸ್ ಸೇರಲು ತುದಿಗಾಲಲ್ಲಿ ನಿಂತಿರುವ ಮಾಜಿ ಸಚಿವ ರಾಜುಗೌಡ(ನರಸಿಂಹ ನಾಯಕ) ಹಾಗೂ ಮಾಜಿ ಶಾಸಕ ಕಾಂಗ್ರೆಸ್‌ನ ರಾಜಾವೆಂಕಟಪ್ಪ ನಾಯಕ ಅವರಿಬ್ಬರ ನಡುವಿನ ಜಿದ್ದಾಜಿದ್ದಿ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಕಾಂಗ್ರೆಸ್ ಸೇರಲು ಅಡ್ಡಗಾಲಾಗಿರುವ ವೆಂಕಟಪ್ಪ ನಾಯಕರಿಗೆ ಫಲಿತಾಂಶದ ಮೂಲಕವೇ ಉತ್ತರ ನೀಡಲು ರಾಜುಗೌಡ ಸಜ್ಜಾಗಿದ್ದಾರೆ. ಆದ್ದರಿಂದ ಇಬ್ಬರಿಗೂ ಇದು ಪ್ರತಿಷ್ಠೆಯ ಕಣವಾಗಿದೆ. ತಾಂತ್ರಿಕವಾಗಿ ಬಿಜೆಪಿಯಲ್ಲೇ ಇರುವ ರಾಜುಗೌಡರು ತಮ್ಮ ಬೆಂಬಲಿಗ ಅಭ್ಯರ್ಥಿಗಳನ್ನು ಎಲ್ಲ 27 ವಾರ್ಡುಗಳಿಗೆ ನಿಲ್ಲಿಸಿದ್ದಾರೆ. ಅದರಂತೆ ಕಾಂಗ್ರೆಸ್ ಅಭ್ಯರ್ಥಿಗಳೂ ಕಣದಲ್ಲಿದ್ದಾರೆ. ಇವರಿಬ್ಬರ ರಾಜಕೀಯ ತಿಕ್ಕಾಟಕ್ಕೆ ಮತದಾರ ಹೇಗೆ ಪ್ರತಿಕ್ರಿಯಿಸಿದ್ದಾನೆ ಎಂಬುದು ಸದ್ಯದ ಕುತೂಹಲ.
ಪಕ್ಷೇತರರು: ಶಹಾಪುರ ಪುರಸಭೆಯಲ್ಲಿ ಶಾಸಕ ದರ್ಶನಾಪುರ ಅವರ ಬೆಂಬಲಿಗರು ಕಾಂಗ್ರೆಸ್ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದರೆ, ಬಿಜೆಪಿ ತೊರೆದ ಗುರು ಪಾಟೀಲ್ ಶಿರವಾಳ ಅವರು ಎಲ್ಲ ವಾರ್ಡುಗಳಿಗೆ ತಮ್ಮ ಬೆಂಬಲಿಗರನ್ನು ಪಕ್ಷೇತರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ತಮ್ಮ ಸಾಮರ್ಥ್ಯ ಸಾ'ಭೀತಿ'ಗೆ ಹೊರಟಿದ್ದಾರೆ. ಬಿಎಸ್ಸಾರ್, ಕೆಜೆಪಿ ಹಾಗೂ ಬಿಜೆಪಿಯೂ ಉಳಿವಿಗಾಗಿ ಹೋರಾಟ ನಡೆಸಿದೆ. ಸೋಲು-ಗೆಲವಿನ ಲೆಕ್ಕಾಚಾರದಲ್ಲಿ ಮುಖಂಡರು ಮಗ್ನರಾಗಿದ್ದು, ಈ ಲೆಕ್ಕಾಚಾರಕ್ಕೆ ಫಲಿತಾಂಶವೇ ಉತ್ತರ ನೀಡಲಿದೆ.
'ಗಿರಿ' ಯಾರಿಗೆ: ಯಾದಗಿರಿ ನಗರಸಭೆ ಯಾರ ಮಡಿಲಿಗೆ ಎನ್ನುವುದು ತೀವ್ರ ಕುತೂಹಲ ಕೆರಳಿಸಿದೆ. ಶಾಸಕ ಡಾ. ಮಾಲಕರೆಡ್ಡಿ ಅವರು ಮುಂದಿನ ವಿಧಾನಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ತಮ್ಮ ಬೆಂಬಲಿಗರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿದ್ದು, ಸ್ಪಷ್ಟ ಬಹುಮತ ಸಿಗುವ ವಿಶ್ವಾಸದಲ್ಲಿದ್ದಾರೆ. ಆದರೆ ಮಾಜಿ ಶಾಸಕ ಡಾ. ವೀರಬಸವಂತ ರೆಡ್ಡಿ ಮುದ್ನಾಳ ನೇತೃತ್ವದಲ್ಲಿ ಕೆಜೆಪಿಯಿಂದ ಕೂಡ ಪೈಪೋಟಿ ನಿರೀಕ್ಷಿಸಲಾಗಿದೆ. ಈ ಹಿಂದೆ ಅಧಿಕಾರ ನಡೆಸಿದ್ದ ಜೆಡಿಎಸ್ ಸಹ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿ ಗೆಲವಿನ ಕನಸು ಕಾಣುತ್ತಿದೆ. ಬಿಎಸ್ಸಾರ್ ಕಾಂಗ್ರೆಸ್ ಕೂಡ ಖಾತೆ ತೆರೆಯುವ ವಿಶ್ವಾಸ ಹೊಂದಿದೆ.
ಗುರುಮಠಕಲ್ ಪಪಂನ 17 ವಾರ್ಡುಗಳಿಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಾರೆ. ಶಾಸಕ ಬಾಬುರಾವ ಚಿಂಚನಸೂರ ಅವರಿಗೂ ಇದು ಪ್ರತಿಷ್ಠೆಯ ವಿಷಯವಾಗಿದ್ದು, ಕೆಜೆಪಿ ನೇತೃತ್ವ ವಹಿಸಿರುವ ವೆಂಕಟರೆಡ್ಡಿ ಮುದ್ನಾಳ ಅವರ ಶಕ್ತಿ ಪ್ರದರ್ಶನವೂ ಆಗಲಿದೆ. ಗಿರೀಶ ಮಟ್ಟಣ್ಣವರ್ ಅವರ ನೇತೃತ್ವದಲ್ಲಿ ಬಿಜೆಪಿ ಜನರನ್ನು ಒಲಿಸಿಕೊಳ್ಳಲು ಯಶಸ್ವಿಯಾಗಿದೆಯೇ ಎನ್ನುವುದೂ ಸೋಮವಾರ ಗೊತ್ತಾಗಲಿದೆ. ಒಟ್ಟಿನಲ್ಲಿ ಮಿನಿ ಸಮರ ಮುಕ್ತಾದ ಕೊನೆ ಹಂತ ಬಂದಿದೆ. ಫಲಿತಾಂಶದ ಕ್ಷಣಗಣನೆ ಆರಂಭವಾಗಿದ್ದು, ಯಾರು ಗೆಲವಿನ ನಗು ಬೀರುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement