ಅಧಿಕಾರಕ್ಕೇರಲು ಮೈತ್ರಿ ಸರ್ಕಸ್
-ನಾರಾಯಣ ಹೆಗಡೆ
ಯಾದಗಿರಿ: ಯಾವುದೇ ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡದೇ ಜಿಲ್ಲಾ ಕೇಂದ್ರ ಯಾದಗಿರಿ ನಗರದ ಜನತೆ ಮತಾದೇಶ ನೀಡಿದ್ದಾರೆ. ಹೆಚ್ಚು ಸ್ಥಾನ ಗಳಿಸಿರುವ ಕಾಂಗ್ರೆಸ್ ಈಗ ಅನಿವಾರ್ಯವಾಗಿ ಮೈತ್ರಿ ರಾಜಕಾರಣ ಮಾಡಿಕೊಳ್ಳಬೇಕಾಗಿದ್ದು, ಸಮಾನ ಮನಸ್ಕ ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರದ ಗದ್ದುಗೆಗೆ ಏರಬೇಕಿದೆ.
31 ವಾರ್ಡುಗಳನ್ನು ಹೊಂದಿರುವ ಯಾದಗಿರಿ ನಗರಸಭೆಯಲ್ಲಿ ಯಾವ ಪಕ್ಷವೂ ಸ್ವಂತ ಬಲದಿಂದ ಅಧಿಕಾರ ನಡೆಸುವಷ್ಟು ಸಾಮರ್ಥ್ಯ ಪಡೆದಿಲ್ಲ. 11 ಸ್ಥಾನಗಳನ್ನು ಪಡೆದಿರುವ ಕಾಂಗ್ರೆಸ್ ನಗರಸಭೆಯಲ್ಲಿ ದೊಡ್‌ಡ ಪಕ್ಷವಾಗಿದ್ದು, ಕುರ್ಚಿಗೇರಲು ಇನ್ನೂ 5 ಅಭ್ಯರ್ಥಿಗಳ ಬೆಂಬಲ ಬೇಕು.
ಒಬ್ಬರು ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದು, ಅವರನ್ನು ಸೆಳೆದುಕೊಂಡರೂ ಮತ್ತೆ 4 ಸದಸ್ಯರ ಬೆಂಬಲದ ಅಗತ್ಯ ಬೀಳುತ್ತದೆ. ಜೆಡಿಎಸ್ 8 ಸ್ಥಾನಗಳನ್ನು, ಕೆಜೆಪಿ 6 ಹಾಗೂ ಬಿಎಸ್ಸಾರ್ ಕಾಂಗ್ರೆಸ್ ಪಕ್ಷದಲ್ಲಿ 4 ಸದಸ್ಯರ ಬಲವಿದೆ. ಆದ್ದರಿಂದ ಈ ಮೂರು ಪಕ್ಷಗಳಲ್ಲಿ ಒಂದರ ಜತೆ ಮೈತ್ರಿ ಮಾಡಿಕೊಳ್ಳುವುದು ಕಾಂಗ್ರೆಸ್‌ಗೆ ಅನಿವಾರ್ಯವಾಗಲಿದೆ. ಅಧಿಕಾರ ಹಂಚಿಕೆ ಒಪ್ಪಂದ ಮಾಡಿಕೊಂಡು ಹೊಂದಾಣಿಕೆ ಆಗಬೇಕು. ಆದ್ದರಿಂದ ಕಾಂಗ್ರೆಸ್ ಈಗ ಸೂಕ್ತ ಮೈತ್ರಿಯನ್ನು ಹುಡುಕಲು ಆರಂಭಿಸಿದೆ.
ಮುಂದಿನ ಚುನಾವಣೆ ಗುರಿ: ಈಗ ಕಾಂಗ್ರೆಸ್ ನಗರಸಭೆ ಅಧಿಕಾರಕ್ಕೇರಲು ಯಾವ ಪಕ್ಷ ಸೂಕ್ತ ಎನ್ನುವುದನ್ನು ಮುಂದಿನ ಚುನಾವಣಾ ದೃಷ್ಟಿಯನ್ನಿಟ್ಟುಕೊಂಡು ಮಾಡಿಕೊಳ್ಳಬೇಕಿದೆ. ಶಾಸಕ ಡಾ.ಮಾಲಕರೆಡ್ಡಿ ಅವರು ವಿಧಾನಸಭಾ ಚುನಾವಣೆಯಲ್ಲಿ ತಮಗೆ ಅನುಕೂಲವಾಗುವ ಮೈತ್ರಿಯನ್ನು ಮಾಡಿಕೊಳ್ಳಬೇಕಿದೆ.
ಆದ್ದರಿಂದ ಕಾಂಗ್ರೆಸ್ ನಾಯಕರಲ್ಲಿ ಈಗ ಮೈತ್ರಿ ಸಮಾಲೋಚನೆ ಶುರುವಾಗಿದೆ. ರಾಜ್ಯದಲ್ಲಿ ಯಡಿಯೂರಪ್ಪ ಕಾಂಗ್ರೆಸ್ ಕಡೆ ಒಲವು ಹೊಂದಿರುವುದರಿಂದ ಸ್ಥಳೀಯ ಮಟ್ಟದಲ್ಲೂ ಕೆಜೆಪಿ ಜತೆ ಮೈತ್ರಿ ಮೈಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಕಾಂಗ್ರೆಸ್‌ನಿಂದ ಹೊರಹೋಗಿ ಬಿಎಸ್ಸಾರ್ ಸೇರಿರುವ ಮೌಲಾಲಿ ಅವರೊಂದಿಗೆ ಹೊಂದಾಣಿಕೆ ಕಷ್ಟ ಎಂದು ಹೇಳಲಾಗುತ್ತಿದೆ.
ಎಚ್ಚರಿಕೆ ಸಂದೇಶ: ಇಲ್ಲಿಯ ನಗರಸಭೆ ಚುನಾವಣಾ ಫಲಿತಾಂಶ ಎಲ್ಲ ಪಕ್ಷಗಳಿಗೂ ಸ್ಪಷ್ಟ ಸಂದೇಶ ರವಾನೆಯಾಗುವಂತೆ ಮಾಡಿದೆ. ರಾಜ್ಯಾದ್ಯಂತ ಕಾಂಗ್ರೆಸ್ ಹವಾ ಇದ್ದರೂ ಇಲ್ಲಿ ಮಾತ್ರ ಗಣನೀಯ ಸಾಧನೆ ಮಾಡುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಆ ಪಕ್ಷದವರ ಅತಿಯಾದ ಆತ್ಮವಿಶ್ವಾಸವೂ ಅದರ ಗೆಲುವಿನ ಓಘಕ್ಕೆ ಕಡಿವಾಣ ಹಾಕಿದೆ.
ಕಾಂಗ್ರೆಸ್ ಶಾಸಕರೇ ಇದ್ದರೂ ಸ್ಪಷ್ಟ ಬಹುಮತ ಪಡೆಯಲು ಸಾಧ್ಯವಾಗದಿರುವುದು ಎಚ್ಚರಿಕೆಯ ಗಂಟೆ ಎಂದೇ ಹೇಳಲಾಗುತ್ತಿದೆ. ನಗರದ ಅಭಿವೃದ್ಧಿಗೆ ಶಾಸಕರು ಹೆಚ್ಚಿನ ಗಮನ ನೀಡಿದ್ದರೆ ಹಾಗೂ ರಸ್ತೆ ಇತ್ಯಾದಿ ಕಾಮಗಾರಿಗೆ ಒತ್ತು ನೀಡಿದ್ದರೆ ಕಾಂಗ್ರೆಸ್ ಇನ್ನೂ ಹೆಚ್ಚಿನ ಸಾಧನೆ ಮಾಡಬಹುದಿತ್ತು ಎಂದು ವಿಶ್ಲೇಷಿಸಲಾಗುತ್ತಿದೆ. 2007ರ ಚುನಾವಣೆಯಲ್ಲಿ 18 ಸ್ಥಾನ ಗಳಿಸಿ ಅಧಿಕಾರಕ್ಕೇರಿದ್ದ ಜೆಡಿಎಸ್ ಈ ಬಾರಿ 8 ಸ್ಥಾನ ಗಳಿಸಿದೆ. ಆದರೆ ಸದ್ಯದ ಸ್ಥಿತಿಯಲ್ಲಿ ಇದು ಉತ್ತಮ ಸಾಧನೆ ಎಂದೇ ಹೇಳಲಾಗುತ್ತಿದೆ. ಏಕೆಂದರೆ ಅನೇಕರು ಅಪವಿತ್ರ ಮೈತ್ರಿ ಮಾಡಿಕೊಂಡು ಪಕ್ಷ ತೊರೆದದ್ದರಿಂದ ಜೆಡಿಎಸ್‌ನಲ್ಲಿ ಗೊಂದಲ ಉಂಟಾಗಿತ್ತು. ಅಲ್ಲದೇ ನಾಯಕತ್ವದ ಕೊರತೆಯೂ ಜೆಡಿಎಸ್‌ಗೆ ಕಾಡಿತು. ಆದರೂ ಮುಖಂಡರು ಸಮನ್ವಯತೆ ಸಾಧಿಸಿಕೊಂಡು 8 ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ.
ಅಭಿವೃದ್ಧಿಯತ್ತ ಗಮನ ಅಗತ್ಯ: ರಾಜ್ಯ ಬಿಜೆಪಿಯಲ್ಲಿನ ಗೊಂದಲಗಳು ಮತದಾರರ ಮೇಲೆ ಪರಿಣಾಮ ಬೀರಿದ್ದರಿಂದ ಬಿಜೆಪಿ ಗೆಲ್ಲಬೇಕಾಗಿದ್ದ ಸ್ಥಳಗಳಲ್ಲೂ ಎಡವಿತು. ಅಲ್ಲದೇ ಪಕ್ಷಕ್ಕೆ ಪ್ರಭಾವಿ ನಾಯಕರು ಇಲ್ಲದೆ ಇರುವುದು ಬಿಜೆಪಿಗೆ ಮುಳುವಾಯಿತು. 5 ವರ್ಷಗಳ ನಂತರವೂ ಕೇವಲ 1 ಸ್ಥಾನ ಗೆದ್ದಿರುವುದು ಬಿಜೆಪಿ ಬಗ್ಗೆ ನಗರದ ಮತದಾರರು ಒಲವು ಹೊಂದಿಲ್ಲ ಎಂಬುದನ್ನು ತೋರಿಸಿತು. ಮುದ್ನಾಳ ಸಹೋದರರು ಕೆಜೆಪಿ ಸೇರಿ ತಮ್ಮ ಶಕ್ತಿ ಪ್ರದರ್ಶಿಸಲು ಪ್ರಯತ್ನಿಸಿದರೂ ನಿರೀಕ್ಷಿತ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ.
ಇನ್ನು ಬಿಎಸ್ಸಾರ್ ಕೂಡ 4 ಸ್ಥಾನ ಗೆದ್ದು ಬೀಗುವಂತಿಲ್ಲ. ಆದ್ದರಿಂದ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಎಂದೇ ಪರಿಗಣಿಸಿರುವ ಮನಿ ಸಮರ ಎಲ್ಲ ಪಕ್ಷಗಳಿಗೂ ಎಚ್ಚರಿಕೆಯ ಸಂದೇಶ ನೀಡಿದೆ. ಈಗಲೇ ನಾಯಕರು ಎಚ್ಚೆತ್ತುಕೊಂಡು ಅಭಿವೃದ್ಧಿ ಕಡೆ ಗಮನ ನೀಡದಿದ್ದರೆ ತನಗೆ ಯಾರೂ ಅನಿವಾರ್ಯವಲ್ಲ ಎಂಬುದನ್ನು ಮತದಾರ ತೋರಿಸುತ್ತಾನೆ.