ದಕ್ಷಿಣ-ಉತ್ತರ ಯಾರಿಗೆ ಹತ್ತಿರ?
-ವಿಶೇಷ ವರದಿ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಮಾ.12
ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಬಂದಾಯ್ತು. ಈಗ ಎಲ್ಲರ ಚಿತ್ತ ಗುಲ್ಬರ್ಗ ದಕ್ಷಿಣ ಹಾಗೂ ಉತ್ತರ ಅಸೆಂಬ್ಲಿ ರಾಜಕಾರಣದತ್ತ...
ಏಕೆಂದರೆ ಈ ಎರಡೂ ವಿಧಾನಸಭೆ ಕಣದಲ್ಲಿ ಪಾಲಿಕೆ ರಾಜಕಾರಣವೇ ಪ್ರತಿಬಿಂಬಿತವಾಗೋದು. ಪಾಲಿಕೆಯ ಎಲ್ಲಾ 55 ವಾರ್ಡ್ಗಳ ಮತದಾರರೇ ಉಭಯ ಕಣಗಳಲ್ಲಿ ಸಿಂಹಪಾಲು ಹರಡಿರೋದು. ಹೀಗಾಗಿ ಅತ್ತ ಪಾಲಿಕೆಯಲ್ಲಿ ಪಾಲಿಟಿಕಲ್ ಟ್ರೆಂಡ್ ಹೊರಬೀಳುತ್ತಿದ್ದಂತೆಯೇ ನಗರ ಜನ ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಯಾರಿಗೆ, ಯಾವ ಪಕ್ಷಕ್ಕೆ ಅನುಕೂಲ? ಯಾರು ಅಖಾಡಕ್ಕೆ ಧುಮುಕಿದರೆ ಅದೆಷ್ಟು ಗೆಲ್ಲುವ ಸಾಧ್ಯತೆಗಳಿರುತ್ತವೆ ಎಂಬಿತ್ಯಾದಿ ರಾಜಕೀಯ ಸೂಕ್ಷ್ಮಗಳ ಚರ್ಚೆ ಶುರು ಮಾಡಿದ್ದಾರೆ.
ಬಹುಚರ್ಚಿತ ಪ್ರಶ್ನೆ: ಪಾಲಿಕೆಯ ವಾರ್ಡ್ 1ರಿಂದ 30ರವರೆಗಿನ ವ್ಯಾಪ್ತಿ ಗುಲ್ಬರ್ಗ ಉತ್ತರಕ್ಕೆ ಒಳಪಟ್ಟರೆ, ವಾರ್ಡ್ 31ರಿಂದ 55 ಹಾಗೂ ಫರತಾಬಾದ್ ಮತ್ತು ಪಟ್ಟಣ ಸರ್ಕಲ್ ವ್ಯಾಪ್ತಿ ಗುಲ್ಬರ್ಗ ದಕ್ಷಿಣ ವಿಧಾನಸಭೆ. ರಾಜಕೀಯ ಚರ್ಚೆಗಳು ಇದೀಗ ಈ ಕ್ಷೇತ್ರಗಳತ್ತ ವಾಲಿರುವುದು ಸಹಜ.
ಇಲ್ಲಿನ 55 ವಾರ್ಡ್ಗಳ ಪಾಲಿಕೆ ಫಲಿತಾಂಶ ಹಿನ್ನೆಲೆಯಾಗಿಟ್ಟುಕೊಂಡು ಇದೀಗ ರಾಜಕೀಯವಾಗಿ ಗುಲ್ಬರ್ಗ ಉತ್ತರ ಹಾಗೂ ದಕ್ಷಿಣ ವಿಧಾನಸಭೆ ಕ್ಷೇತ್ರಗಳಲ್ಲಿ ಯಾವ ಪಕ್ಷ ಪ್ರಾಬಲ್ಯ ಮೆರೆಯುವ ಅವಕಾಶಗಳು ನಿಚ್ಚಳ ಎಂಬುದು ಉಭಯ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬಹುಚರ್ಚಿತ ಪ್ರಶ್ನೆ.
ಏಕೆಂದರೆ ಗುಲ್ಬರ್ಗ ನಗರ ಇಬ್ಭಾಗವಾಗಿ ಹುಟ್ಟಿಕೊಂಡಿರುವ ಈ 2 ವಿಧಾನಸಭೆ ಕ್ಷೇತ್ರಗಳಿಂದಾಗಿ ಇಲ್ಲೀಗ ಪಾಲಿಕೆ ರಾಜಕೀಯವೇ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಹೀಗಾಗಿ ವಿಧಾನಸಭೆ ಆಕಾಂಕ್ಷಿಗಳು, ಅವರ ಬೆಂಬಲಿಗರು, ಅಭಿಮಾನಿಗಳು, ಜನತೆ ಪಾಲಿಕೆಯ ಫಲಿತಾಂಶದ ಮೇಲೆಯೇ ವಿಮರ್ಶೆಗಳನ್ನು ಹೆಣೆಯುತ್ತಿದ್ದಾರೆ.
ಖಮರುಲ್ ಖುಷ್ ಹುವಾ: ಪಾಲಿಕೆಯ ವಾರ್ಡ್ 1ರಿಂದ 30ರವರೆಗೂ ಗುಲ್ಬರ್ಗ ಉತ್ತರ ವಿಧಾನಸಭೆ ಕ್ಷೇತ್ರ ವ್ಯಾಪ್ತಿ. ಇಲ್ಲೀಗ ಯಾವ ಪಕ್ಷದ ಪ್ರಾಬಲ್ಯ ಎಂಬುದೇ ರಾಜಕೀಯ ಬಲ್ಲವರ ಲೆಕ್ಕ. ಫಲಿತಾಂಶದ ಮೇಲೊಮ್ಮೆ ಕಣ್ಣಾಡಿಸಿದರೆ ಇಲ್ಲಿ ಕಾಂಗ್ರೆಸ್ ಪ್ರಾಬಲ್ಯ ಮೆರೆದದ್ದು ನಿಚ್ಚಳ.
30 ವಾರ್ಡ್ಗಳ ಪೈಕಿ ಕಾಂಗ್ರೆಸ್- 16, ಜೆಡಿಎಸ್- 4, ಬಿಜೆಪಿ- 1 ಹಾಗೂ ಕೆಜೆಪಿ- 4, ಪಕ್ಷೇತರ- 5ರಲ್ಲಿ ಗೆಲವು ಸಾಧಿಸಿದ್ದಾರೆ. ಇದನ್ನೇ ಮುಂದಿಟ್ಟುಕೊಂಡು ಈ ಕ್ಷೇತ್ರದಲ್ಲಿ ವಿಧಾನಸಭೆ ಕಣದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಸಹಜ ಲಕ್ಷಣವಾಗಿದೆ.
ಈ ಬೆಳವಣಿಗೆ ಗುಲ್ಬರ್ಗ ಉತ್ತರದ ಈಗಿನ ಶಾಸಕ ಖಮರುಲ್ ಇಸ್ಲಾಂ ಅವರನ್ನು ಖುಷಿಯಲ್ಲಿರಿಸಿದೆ. ಏಕೆಂದರೆ ಕಳೆದ 3 ತಿಂಗಳ ಹಿಂದೆಯಷ್ಟೇ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ವೀಕ್ಷಕರು ಬಂದಾಗ ನಡೆದ ಯುವ ಕಾಂಗ್ರೆಸ್ನ ಗಲಾಟೆ ಬೆಳವಣಿಗೆ ಇವರಿಗೆ ತುಸು ಚಿಂತೆ ಉಂಟು ಮಾಡಿತ್ತು. ಅದರಲ್ಲೂ ನಾಸೀರ್ ಹುಸೇನ್ ಕೆಜೆಪಿ ಸೇರಿದ್ದು, ಯಡಿಯೂರಪ್ಪ ಬಂದು ಹುಸೇನರನ್ನೇ ಇಸ್ಲಾಂ ವಿರುದ್ಧ ಕಣಕ್ಕಿಳಿಸುವುದಾಗಿ ಹೇಳಿದ್ದೆಲ್ಲವೂ ಇಸ್ಲಾಂ ರಾಜಕೀಯವಾಗಿ ಅಲ್ಪ ಮಟ್ಟಿಗೆ ಚಿಂತೆಗೀಡಾಗುವಂತೆ ಮಾಡಿತ್ತು.
ಗುಲ್ಬರ್ಗ ದಕ್ಷಿಣದಲ್ಲಿ ಯಾರಣ್ಣ? ವಾರ್ಡ್ 31ರಿಂದ 55ರ ವ್ಯಾಪ್ತಿಯ ಗುಲ್ಬರ್ಗ ದಕ್ಷಿಣದಲ್ಲೂ ಫಲಿತಾಂಶ ಲೆಕ್ಕಾಚಾರದ ಹಿನ್ನೆಲೆಯಲ್ಲಿ ವಿಧಾನಸಭೆ ಮತ ಲೆಕ್ಕ ಚರ್ಚೆ ಸಾಗಿದೆ. ಇಲ್ಲಿನ 25 ವಾರ್ಡ್ಗಳ ಪೈಕಿ ಕಾಂಗ್ರೆಸ್- 7, ಜೆಡಿಎಸ್ ಹಾಗೂ ಬಿಜೆಪಿ ಸಮಾನವಾಗಿ ತಲಾ 6ರಲ್ಲಿ, ಕೆಜೆಪಿ- 2, ಪಕ್ಷೇತರರು- 2ರಲ್ಲಿ ಪ್ರಾಬಲ್ಯ ಸಾಧಿಸಿದ್ದಾರೆ.
ಉತ್ತರದಷ್ಟು ಅಲ್ಲದೆ ಹೋದರೂ ಇಲ್ಲಿಯೂ ಪರೋಕ್ಷವಾಗಿ ಕಾಂಗ್ರೆಸ್ದ್ದೇ ಮೇಲುಗೈ. ಆದಾಗ್ಯೂ ಇಲ್ಲಿ ಜೆಡಿಎಸ್ ಫಲಿತಾಂಶ ಎಲ್ಲ ಪಕ್ಷಗಳಿಗೂ ಎಚ್ಚರಿಕೆ ಗಂಟೆ ಬಾರಿಸಿದ್ದು ಗಮನಾರ್ಹ.
ದತ್ತು ಉರುಳಿಸಿದ ದಾಳ: ವಿಧಾನಸಭೆ ಆಕಾಂಕ್ಷಿ ದತ್ತಾತ್ರೇಯ ಪಾಟೀಲ್ ರೇವೂರ್ ನೇತೃತ್ವದಲ್ಲಿ ನಡೆದ ಟಿಕೆಟ್ ಹಂಚಿಕೆ ನಿರೀಕ್ಷಿಸಿದಷ್ಟು ಅಲ್ಲದೆ ಹೋದರೂ ತಕ್ಕಮಟ್ಟಿಗೆ ಫಲ ನೀಡಿದೆ. 10 ಸ್ಥಾನಗಳಲ್ಲಿ 6 ಗುಲ್ಬರ್ಗ ದಕ್ಷಿಣದಲ್ಲೇ ಜೆಡಿಎಸ್ ಬುಟ್ಟಿಗೆ ಹಾಕಿಕೊಂಡಿದ್ದು ಅಲಕ್ಷಿಸುವಂತಿಲ್ಲ.
ನಗರ ರಾಜಕೀಯದ ನಿರ್ಣಾಯಕ ವೇದಿಕೆ ಎಂದೇ ಹೇಳಲಾಗುವ ಪಾಲಿಕೆ ರಾಜಕೀಯದಲ್ಲಿ ಇದೇ ಮೊದಲ ಬಾರಿಗೆ ಸ್ವತಂತ್ರವಾಗಿ ಪ್ರವೇಶಿಸಿ ದಾಳ ಉರುಳಿಸಿರುವ ದತ್ತಾತ್ರೇಯ ಪಾಟೀಲ್ ಮೊದಲ ಯತ್ನದಲ್ಲೇ ಗಮನಾರ್ಹ ಸಾಧನೆ ಮಾಡಿದ್ದಾರೆ. ಇದರಿಂದ ದಕ್ಷಿಣ ವಿಧಾನಸಭೆಯಲ್ಲಿ ಜೆಡಿಎಸ್ ತನ್ನ ಪ್ರಾಬಲ್ಯ ತುಸು ಹೆಚ್ಚಿಸಿಕೊಂಡಂತಾಗಿದೆ. ಕಳೆದ ಪಾಲಿಕೆಯಲ್ಲಿ 7 ಸ್ಥಾನ ಗಳಿಸಿದ್ದ ಜೆಡಿಎಸ್ ಈ ಬಾರಿ 10 ಸ್ಥಾನ ಪಡೆದು ತನ್ನ ಸಂಖ್ಯಾಬಲವನ್ನೂ ಹೆಚ್ಚಿಸಿಕೊಂಡಿದೆ.
ಕಮಲದ ಸುತ್ತ ಕಳವಳದ ಕೆಸರು: ಕಳೆದ ಬಾರಿಗಿಂತ ಈ ಬಾರಿ 10 ಸ್ಥಾನ ಕಡಿಮೆ ಗೆದ್ದ, ಅದರಲ್ಲೂ ದಕ್ಷಿಣದಲ್ಲೇ ಹೆಚ್ಚಿನ ಸ್ಥಾನ ಕಳೆದುಕೊಂಡು ಬಿಜೆಪಿ ವಿಧಾನಸಭೆ ಕಣದಲ್ಲಿ ಕಮಲ ಅರಳುವುದೆ ಎಂಬ ಕಳವಳದ ಕೆಸರಲ್ಲಿ ಸಿಲುಕಿಕೊಂಡಿದೆ.
ತಮ್ಮದೇ ಆಡಳಿತವಿದ್ದರೂ ಪಾಲಿಕೆಗೆ ಸಾಕಷ್ಟು ಅನುದಾನ ಬಂದರೂ ಕಮಲದ ಸಾಧನೆ ಇಲ್ಲಿ ಪಾತಾಳಕ್ಕೆ ಕುಸಿದಿದ್ದೇ ಪಕ್ಷದ ವಿಧಾನಸಭೆ ಆಕಾಂಕ್ಷಿಗಳ ಜಂಘಾಬಲ ಉಡುಗುವಂತೆ ಮಾಡಿದೆ. ದಕ್ಷಿಣದಲ್ಲಿ ಕಮಲದ ಭದ್ರಕೋಟೆಗಳೇ ಕೈ, ಜೆಡಿಎಸ್ ವಶವಾಗಿರುವ ಬೆಳವಣಿಗೆಯೂ ಕಮಲ ಪಡೆಯಲ್ಲಿನ ಆತಂಕ ಹೆಚ್ಚಿಸಿದೆ.
ಈ ಪಕ್ಷದಿಂದ ವಿಧಾನಸಭೆ ಆಕಾಂಕ್ಷಿ ಶಶಿಲ್ ನಮೋಶಿ ಮೊದಲಾದವರು ಪಾಲಿಕೆ ಫಲಿತಾಂಶದ ಸುತ್ತಮುತ್ತ ವಿಧಾನಸಭೆ ಚುನಾವಣೆ ಬೆಳವಣಿಗೆಗಳ ವಿಮರ್ಶೆ ಆರಂಭಿಸಿದ್ದಾರೆ. ತಮ್ಮ ಆಪ್ತರೊಡನೆ ಚರ್ಚಿಸಿ ಮುಂದೇನು? ಎಂಬ ಗೊಂದಲದಲ್ಲಿ ಸಿಲುಕಿದ್ದಾರೆ.
ಒಳಜಗಳವೇ ಕಮಲ ಅರಳುವಲ್ಲಿ ಅಡ್ಡಿಯಾಯ್ತು ಎಂದು ನಮೋಶಿ ಮೊದಲ್ಗೊಂಡು ಎಲ್ಲ ಬಿಜೆಪಿ ನಾಯಕರು ಹೇಳುತ್ತಿದ್ದರೂ ಮತದಾರರ ಕಮಲ ವಿರೋಧಿ ತೀರ್ಪು ಮಾತ್ರ ಆ ಪಕ್ಷವನ್ನು ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ ಬೆಚ್ಚಿ ಬೀಳಿಸಿದ್ದು ಕಟು ವಾಸ್ತವ.
ಕಾಂಗ್ರೆಸ್ ಅನ್ನೋದೇನು? ದಕ್ಷಿಣ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ತೀರ್ಮಾನವಾಗಿಲ್ಲವಾದರೂ ಪ್ರಬಲ ಆಕಾಂಕ್ಷಿಯಾಗಿರುವ ಉದ್ಯಮಿ ಕೃಷ್ಣಾಜಿ ಕುಲಕರ್ಣಿ ಮೊದಲ್ಗೊಂಡು ಪಕ್ಷದ ಒಳಗೊಳಗೆ ಹರ್ಷದಲ್ಲಿದ್ದರೂ ಇನ್ನೂ ಹೆಚ್ಚಿನ ಸಾಧನೆ ಮಾಡಬಹುದಾಗಿತ್ತು ಎಂಬುದನ್ನು ಅಂತರಂಗದ ಚರ್ಚೆಯಲ್ಲಿ ಒಪ್ಪಿಕೊಳ್ಳುತ್ತಾರೆ.
ವಿಪ್ರ ಸಮಾವೇಶದ ಪರಿಣಾಮ ಈ ಚುನಾವಣೆಯಲ್ಲಿ ಅಗೋಚರವಾಗಿದ್ದರೂ ಉದ್ಯಮಿ ಕೃಷ್ಣಾಜಿ 'ಕೈ' ಬಲಪಡಿಸುವಲ್ಲಿ ನಿರ್ವಹಿಸಿದ ಪಾತ್ರದ ಬಗ್ಗೆ ಒಳಗೊಳಗೆ ತೃಪ್ತರಾಗಿದ್ದಾರೆ. ಆದಾಗ್ಯೂ ದಕ್ಷಿಣದ ತುಂಬೆಲ್ಲ ಪಾಲಿಕೆ ಫಲಿತಾಂಶ ರಾಜಕೀಯವಾಗಿ ಹತ್ತು ಹಲವು ಮುಖಗಳಲ್ಲಿ ಚರ್ಚೆಗೆ ಕಾರಣವಾಗಿದೆ.