ಶೇಂಗಾಕ್ಕೆ ಬೆಂಬೆಲೆ ಆಗ್ರಹಿಸಿ ಪ್ರತಿಭಟನೆ
ಯಾದಗಿರಿ: ಶೇಂಗಾ ಬೆಳೆಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಜಿಲ್ಲಾ ಟೋಕರಿ ಕೋಲಿ ಕಬ್ಬಲಿಗ ಸಮಾಜದ ವತಿಯಿಂದ ನೂರಾರು ರೈತರು ಮಂಗಳವಾರ ಕಪ್ಪು ಬಟ್ಟೆ ಕಟ್ಟಿಕೊಂಡು ಪ್ರತಿಭಟನೆ ನಡೆಸಿದರು.
ನಗರದ ಸುಭಾಷ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಉಮೇಶ ಮುದ್ನಾಳ, ಕಳೆದ ಸಾಲಿನಲ್ಲಿ ಶೇಂಗಾಗೆ ಉತ್ತಮ ಬೆಲೆ ಸಿಕ್ಕಿತ್ತು. ಆದ್ದರಿಂದ ಈ ಸಲವೂ ರೈತರು ರು. 10-12 ಸಾವಿರಕ್ಕೆ ಒಂದು ಕ್ವಿಂಟಲ್ ಬೀಜ ಖರೀದಿಸಿ ಬಿತ್ತನೆ ಮಾಡಿ ಶೇಂಗಾ ಬೆಳೆದಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇಲ್ಲದ ಕಾರಣ ಕೈಸುಟ್ಟುಕೊಳ್ಳುವಂತಾಗಿದೆ. ಅದಕ್ಕಾಗಿ ಸರ್ಕಾರ ಮಧ್ಯ ಪ್ರವೇಶ ಮಾಡಿ ಪ್ರತಿ ಕ್ವಿಂಟಲ್ಗೆ ರು. 6 ಸಾವಿರ ಬೆಂಬಲ ಬೆಲೆ ಘೋಷಣೆ ಮಾಡುವಂತೆ ಆಗ್ರಹಿಸಿದರು.
ಕ್ರಮ ಜರುಗಿಸಿ: ಒಂದು ವೇಳೆ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡದಿದ್ದಲ್ಲಿ ರೈತರು ತಾವು ಮಾಡಿದ ಸಾಲ ತೀರಿಸಲಾಗದೇ ಆತ್ಮಹತ್ಯೆಗೆ ಮುಂದಾಗಬೇಕಾಗುತ್ತದೆ. ಅದಕ್ಕಾಗಿ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಸಿ ಸೂಕ್ತ ಕ್ರಮ ಜರಗಿಸಲು ಮುಂದಾಗಬೇಕು. ರೈತರಿಗೆ ಹನಿ ನೀರಾವರಿ ಸಾಮಗ್ರಿಗಳನ್ನು ಶೇ.90ರ ರಿಯಾಯ್ತಿ ದರದಲ್ಲಿ ವಿತರಣೆ ಮಾಡಬೇಕು.
ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಶೇ.75 ರಿಯಾಯತಿ ದರದಲ್ಲಿ ರಸಗೊಬ್ಬರವನ್ನು ನೀಡಬೇಕು. ರೈತರು ಬೆಳೆದ ಬೆಳೆಯನ್ನು ಕೃಷಿ ಮಾರುಕಟ್ಟೆಗೆ ಆಟೋ ಮತ್ತು ಟ್ರಾಕ್ಟರ್ಗಳಲ್ಲಿ ಸಾಗಿಸುವ ಸಂದರ್ಭದಲ್ಲಿ ಪೊಲೀಸರ ಕಿರುಕುಳ ಹೆಚ್ಚಾಗಿದ್ದು, ತಕ್ಷಣ ಅದನ್ನು ತಡೆಗಟ್ಟಲು ಕ್ರಮ ಜರಗಿಸಬೇಕು. ಜಿಲ್ಲಾದ್ಯಂತ ಗ್ರಾಮೀಣ ಭಾಗದಲ್ಲಿ ಅಕ್ರಮವಾಗಿ ಮದ್ಯ ಮಾರಾಟದಿಂದ ರೈತರ ಬದುಕು ಹಾಳಾಗುತ್ತಿದ್ದು ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕೆಂಬ ಮನವಿ ಜಿಲ್ಲಾಧಿಕಾರಿಗಳ ಮೂಲಕ ಸಿಎಂಗೆ ಸಲ್ಲಿಸಿದರು.
ಶಿವು ಮತ್ಯಾ ಟೋಕಾಪುರ, ಸಾಯಬಣ್ಣ ಹತ್ತಿಕುಣಿ, ಸಿದ್ದಪ್ಪ ನಾಲಡಗಿ, ಬಸವರಾಜ ಮುದ್ನಾಳ, ಯಲ್ಲಪ್ಪ, ಮರೆಪ್ಪ ಗುರುಸಣಿಗಿ, ಲಕ್ಷ್ಮಣ, ಶರಣು ಯರಗೋಳ ಇದ್ದರು.
ಪಿಯು ಪರೀಕ್ಷೆ: 6804 ವಿದ್ಯಾರ್ಥಿಗಳು
ಯಾದಗಿರಿ: ದ್ವಿತೀಯ ಪಿಯುಸಿ ಪರೀಕ್ಷೆ ಬುಧವಾರದಿಂದ ಆರಂಭವಾಗಲಿದೆ. ಜಿಲ್ಲೆಯ 6804 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಮಾ.13ರಿಂದ 28ರವರೆಗೆ ಪಿಯು ಪರೀಕ್ಷೆ ನಡೆಯಲಿದ್ದು, 2899 ಬಾಲಕಿಯರು ಹಾಗೂ 3905 ಬಾಲಕರು ಸೇರಿದಂತೆ ಒಟ್ಟು 6804 ಮಕ್ಕಳು ಪರೀಕ್ಷೆ ಎದುರಿಸುತ್ತಿದ್ದಾರೆ. ಜಿಲ್ಲೆಯ ಮೂರು ತಾಲೂಕುಗಳ 12 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಯಾವುದೇ ರೀತಿಯ ಪರೀಕ್ಷಾ ಅಕ್ರಮ ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ. ಅದಕ್ಕಾಗಿ 6 ಜಾಗೃತ ದಳ ರಚಿಸಲಾಗಿದ್ದು, ನಕಲು ತಡೆಯಲು ಸಿಬ್ಬಂದಿ ನಿಯೋಜಿಸಲಾಗಿದೆ. ಪರೀಕ್ಷೆಸಂದರ್ಭಗಳಲ್ಲಿ ಎಲ್ಲಾ 12 ಪರೀಕ್ಷಾ ಕೇಂದ್ರಗಳ ಸುತ್ತ 144ನೇ ಕಲಂ ಅನ್ವಯ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗುತ್ತದೆ. ವಿದ್ಯಾರ್ಥಿಗಳು, ಪರೀಕ್ಷೆಗೆ ನಿಯೋಜಿಸಿದ ಸಿಬ್ಬಂದಿಗೆ ಮಾತ್ರ ಪರೀಕ್ಷಾ ಕೇಂದ್ರದಲ್ಲಿ ಪ್ರವೇಶಕ್ಕೆ ಅವಕಾಶ. ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್ ಒಯ್ಯುವುದನ್ನು ನಿಷೇಧಿಸಲಾಗಿದೆ. ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.