ನೀತಿ ಸಂಹಿತೆ ಉಲ್ಲಂಘನೆ, ಪ್ರಕರಣ ದಾಖಲು
ಕ.ಪ್ರ.ವಾರ್ತೆ ಯಾದಗಿರಿ ಮಾ.31-
ಜಿಲ್ಲಾದ್ಯಂತ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಯಾದಗಿರಿ ನಗರದ ವಾರ್ಡ್ ಸಂಖ್ಯೆ 28ರ ಮದನಪುರ ಪ್ರದೇಶದಲ್ಲಿ ಸಿಸಿ ರಸ್ತೆ ಕಾಮಗಾರಿ ಕೈಗೊಂಡು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಕ್ಕಾಗಿ ಗುತ್ತಿಗೆದಾರರಾದ ಸುನೀಲ್ ಅರಕೇರಿ ಅವರ ಮೇಲೆ ಭಾನುವಾರ ಪ್ರಕರಣ ದಾಖಲಾಗಿದೆ. ಯಾದಗಿರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 28ನೇ ವಾರ್ಡಿನಲ್ಲಿ ಸಿಸಿ ರಸ್ತೆ ಕಾಮಗಾರಿ ಕೈಗೆತ್ತಿಕೊಂಡು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಲಾಗುತ್ತಿದೆ ಎಂದು ನಗರಸಭೆ ಮಾಜಿ ಸದಸ್ಯ ಅಬ್ದುಲ್ ಕರೀಂ ಅವರು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು.
ಪರಿಶೀಲಿಸಿ ಪ್ರಕರಣ ದಾಖಲು: ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಕಾಮಗಾರಿ ನಡೆಯುತ್ತಿರುವ ಬಗ್ಗೆ ಪರಿಶೀಲನೆಗೆ ಮತ್ತು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗುತ್ತಿರುವ ಬಗ್ಗೆ ಪರಿಶೀಲಿಸಲು ಚುನಾವಣೆ ಜಾಗೃತ ದಳಕ್ಕೆ ಸೂಚಿಸಲಾಗಿತ್ತು. ಜಾಗೃತ ದಳದ ಅಧಿಕಾರಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಘವೇಂದ್ರ ಅವರ ನೇತೃತ್ವದಲ್ಲಿ ಪರಿಶೀಲಿಸಲಾಗಿ ಸ್ಥಳದಲ್ಲಿ ಕಾಮಗಾರಿ ಕೈಗೊಂಡು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗುತ್ತಿರುವ ಕಂಡುಬಂತು. ಆದ್ದರಿಂದ ಕಾಮಗಾರಿ ಕೈಗೆತ್ತಿಕೊಂಡ ಗುತ್ತಿಗೆದಾರ ಸುನೀಲ್ ಅರಕೇರಿ ಅವರ ಮೇಲೆ ಜಾಗೃತಿ ದಳದಿಂದ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಕಾಮಗಾರಿಗಳಿಗಾಗಿ ಉಪಯೋಗಿಸಲಾಗುತ್ತಿದ್ದ 26 ಚೀಲ ಸಿಮೆಂಟ್, 2 ಪ್ಲಾಸ್ಟಿಕ್ ಬ್ಯಾರೆಲ್, ಮರಳು ಸಿಮೆಂಟ್ ಮಿಶ್ರಿಣ ಮಾಡುವ ಯಂತ್ರ, ಲೆವಲಿಂಗ್ ಯಂತ್ರ ಜಪ್ತಿ ಮಾಡಿ ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಜಿಲ್ಲಾ ಚುನಾವಣೆ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ಪಿ.ರಾಜೇಂದ್ರ ಚೋಳನ್ ಹಾಗೂ ಉಪ ವಿಭಾಗಾಧಿಕಾರಿ ಬಿ.ಪಿ.ವಿಜಯ್ ತಿಳಿಸಿದ್ದಾರೆ.
ಸಾತ್ವಿಕ ಶಕ್ತಿ ನಿಷ್ಕ್ರಿಯತೆಯಿಂದ ಕೆಟ್ಟವರ ವಿಜೃಂಭಣೆ
ಕ.ಪ್ರ.ವಾರ್ತೆ ಮೈಸೂರು ಮಾ.31
ಸಮಾಜದ ಸಾತ್ವಿಕ ಶಕ್ತಿಯ ನಿಷ್ಕ್ರಿಯತೆಯಿಂದ ಕೆಟ್ಟವರು ವಿಜೃಂಭಿಸುತ್ತಿದ್ದಾರೆ ಎಂದು ಸಾಹಿತಿ ಡಾ. ನರಹಳ್ಳಿ ಬಾಲಸುಬ್ರಮಹ್ಮಣ್ಯಂ ಹೇಳಿದರು.
ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ವತಿಯಿಂದ ಜಗನ್ಮೋಹನ ಅರಮನೆಯಲ್ಲಿ ಭಾನುವಾರ ಏರ್ಪಡಿಸಿದ್ದ ಎಸ್.ಜಿ. ರಘುರಾಂ ಮಧುರ ಸ್ಮೃತಿ ಕಾರ್ಯಕ್ರಮದಲ್ಲಿ ಎಚ್.ಆರ್. ಲೀಲಾವತಿ ಅವರ ಚಿತ್ತ ಭಿತ್ತಿಯ ಚಿತ್ರಗಳು ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮನುಷ್ಯನ ಒಳ್ಳೆಯತನವನ್ನು ದೌರ್ಬಲ್ಯ ಎಂದು ಭಾವಿಸುತ್ತಿರುವುದು ದುರಂತದ ಸಂಗತಿ. ಸಮಾಜದಲ್ಲಿ ಸಾಕಷ್ಟು ಒಳ್ಳೆಯವರಿದ್ದಾರೆ. ಆದರೆ, ಬೆರಳೆಣಿಕೆಯಷ್ಟು ಇರುವ ಕೆಟ್ಟವರು ಹಾಗೂ ಭ್ರಷ್ಟರು ವಿಜೃಂಭಿಸುತ್ತಿರುವುದನ್ನು ಕಾಣಬಹುದು. ಇದಕ್ಕೆ ಕಾರಣ ಸಾತ್ವಿಕ ಶಕ್ತಿಯ ನಿಷ್ಕ್ರಿಯತೆ. ತಾಮಸ ಶಕ್ತಿ ನಿರ್ಮೂಲವಾಗಬೇಕಾದರೆ ಒಳ್ಳೆಯವರು ಕ್ರಿಯಾಶೀಲರಾಗಬೇಕು ಎಂದರು.
ಎಚ್. ಆರ್. ಲೀಲಾವತಿ ಹಾಗೂ ಎಚ್.ಜಿ. ರಘುರಾಮ್ ದಂಪತಿ ಅವರುನಾಡಿನ ಶ್ರೇಷ್ಠ ಕಲಾವಿದರು. ಎಲ್ಲಾ ಶ್ರೇಷ್ಠ ವ್ಯಕ್ತಿ ಹಾಗೂ ಕಲಾವಿದರಲ್ಲಿ ಮಾನವೀಯತೆ ಇರುತ್ತದೆ ಎಂದು ಹೇಳಲಾಗದು. ನಾಡಿನಲ್ಲಿ ಸುಗಮ ಸಂಗೀತಕ್ಕಾಗಿ ಪ್ರಪ್ರಥಮ ಅಕಾಡೆಮಿ ಸ್ಥಾಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಲೀಲಾವತಿಯವರು ಗಾಯಕಿಯಾಗದಿದ್ದರೆ ಉತ್ತಮ ಲೇಖಕಿಯಾಗುತ್ತಿದ್ದರು ಎಂದು ಪ್ರಶಂಸಿಸಿದರು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಉಪನ್ಯಾಸಕ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಮುಖ್ಯ ಅತಿಥಿಯಾಗಿದ್ದರು.