ಕೆಜೆಪಿ ಅಲೆಯಿದೆ, ಗೆಲವು ನಿಶ್ಚಿತ: ಮಲ್ಲೇಶಿ
ಸುರಪುರ: ಯಡಿಯೂರಪ್ಪ ತಮ್ಮ ಅಧಿಕಾರಾವಧಿಯಲ್ಲಿ ಜಾರಿಗೆ ತಂದ ಜನಪರ ಯೋಜನೆಗಳಿಗೆ ಮಾರುಹೋದ ಕ್ಷೇತ್ರದ ಯುವ ಜನತೆ ನಿತ್ಯವೂ ಪಕ್ಷ ಸೇರುತ್ತಿದ್ದಾರೆ. ಇದರಿಂದ ಪಕ್ಷ ದಿನದಿಂದ ದಿನಕ್ಕೆ ಬಲಿಷ್ಠಗೊಳ್ಳುತ್ತಿದೆ. ಕಾರ್ಯಕರ್ತರ ಹುರುಪು, ಹುಮ್ಮಸ್ಸು ನೋಡಿದರೆ ಈ ಬಾರಿ ನನ್ನ ಗೆಲವು ನಿಶ್ಚಿತವಾಗಿದೆ ಎಂದು ಕೆಜೆಪಿ ಅಭ್ಯರ್ಥಿ ಶಿವುರಾಜ ಮಲ್ಲೇಶಿ ವಿಶ್ವಾಸ ವ್ಯಕ್ತಪಡಿಸಿದರು.ತಾಲೂಕಿನ ವಿವಿಧ ಗ್ರಾಮಗಳಲ್ಲಿ ಗುರುವಾರ ಬಿರುಸಿನ ಮತಯಾಚನೆ ಮಾಡಿ ಮಾತನಾಡಿದರು.
ಮುಖಂಡರಾದ ರಂಗನಗೌಡ ದೇವಿಕೇರಿ, ಮಲ್ಲು ದಂಡಿನ, ರಾಘವೇಂದ್ರ ಮಾಚಗುಂಡಾಳ, ರಮೇಶ ನಂಬಾ, ವಿಶ್ವನಾಥ ರಡ್ಡಿ ಗುಳಬಾಳ, ಚನ್ನಾರಡ್ಡಿ ಮುದ್ನೂರ್, ಕರೆಪ್ಪ ದೊಡ್ಮನಿ, ಬಸವರಾಜ ಇತರರು ಇದ್ದರು.
ಮನೆಮನೆಗೆ ತೆರಳಿ ಕೆಜೆಪಿಯ ಶಿರವಾಳ ಮತ ಯಾಚನೆ
ಕೆಂಭಾವಿ: ಶಹಾಪುರ ವಿಧಾನಸಭಾ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಗುರು ಪಾಟೀಲ ಶಿರವಾಳ ಪಟ್ಟಣದಲ್ಲಿ ಪಾದ ಯಾತ್ರೆಯ ಮೂಲಕ ಮನೆ ಮನೆಗೆ ತೆರಳಿ ಮತ ಯಾಚಿಸಿದರು.
ಅಪಾರ ಕಾರ್ಯಕರ್ತರು ಮತ್ತು ಬೆಂಬಲಿಗರೊಂದಿಗೆ ಪಾದಯಾತ್ರೆ ನಡೆಸಿ ನಂತರ ಮಾತನಾಡಿದ ಅವರು, ಈ ಭಾಗದ ಅಭಿವೃದ್ಧಿಗೆ ಸದಾ ಕಂಕಣಬದ್ಧನಾಗಿರುತ್ತೇನೆ. ಈ ವಲಯದ ಜನರ ಹಾಗೂ ನಮ್ಮ ತಂದೆಯ ಕನಸಾಗಿದ್ದ ಕೆಂಭಾವಿಯನ್ನು ತಾಲೂಕು ಕೇಂದ್ರವನ್ನಾಗಿ ಮಾಡಲು ನಾನು ಬದ್ಧನಾಗಿದ್ದೇನೆ ಎಂದು ತಿಳಿಸಿದರು. ಮತದಾರರು ಕೆಜೆಪಿ ಬೆಂಬಲಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ನೆರವಾಗಬೇಕು ಎಂದು ಮನವಿ ಮಾಡಿದರು.
ಅಶೋಕ ಸೊನ್ನದ, ಸುಧಾಕರ ಡಿಗ್ಗಾವಿ, ರವಿ ಸೊನ್ನದ, ತಾಹೇರ ಪಾಶಾ ಖಾಜಿ, ಮಶಾಕಸಾಬ ಸಾಸನೂರ, ರವಿಂದ್ರ ಅಂಗಡಿ, ಸಂಗಣ್ಣ ತುಂಬಗಿ, ಅಮ್ಮಣ್ಣ ಧರಿ, ಗಿರೀಶ ಭಂಗ, ಸುಭಾಸ ಮ್ಯಾಗೇರಿ, ಪ್ರಕಾಶ ಸೊನ್ನದ, ದೇವಿಂದ್ರ ಜಾಲಿಬೆಂಚಿ, ಭೀಮನಗೌಡ ಕಾಚಾಪುರ, ವೆಂಕಟೇಶ ಮೊಕಾಶಿ ಇತರರು ಇದ್ದರು.
ಚುನಾವಣೆ: ಮದ್ಯ ಮಾರಾಟ ನಿಷೇಧ
ಯಾದಗಿರಿ: ವಿಧಾನಸಭೆ ಚುನಾವಣೆಯ ಮತದಾನ ದಿನವಾದ ಮೇ 5 ಹಾಗೂ ಮತ ಎಣಿಕೆ ದಿನವಾದ ಮೇ 8ರಂದು ಕಾನೂನು ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡಲು ಅನುಕೂಲವಾಗುವಂತೆ ಜಿಲ್ಲಾದ್ಯಂತ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾ ಚುನಾವಣಾಧಿಕಾರಿ ಪಿ.ರಾಜೇಂದ್ರ ಚೋಳನ್ ಆದೇಶಿಸಿದ್ದಾರೆ. ಮೇ 3ರ ಸಂಜೆ 5 ಗಂಟೆಯಿಂದ ಮೇ 6ರ ಬೆಳಗ್ಗೆ 6 ಗಂಟೆಯವರೆಗೆ ಮತ್ತು ಮೇ 8ರ ಬೆಳಗ್ಗೆ 6 ಗಂಟೆಯಿಂದ ಮೇ 9 ರ ಬೆಳಿಗ್ಗೆ 6 ಗಂಟೆಯವರೆಗೆ ಮದ್ಯ ಮಾರಾಟ, ಸಾಗಾಟ ನಿಷೇಧಿಸಲಾಗಿದೆ. ವೈನ್ ಶಾಪ್, ಬಾರ್ಗಳನ್ನು ತೆರೆಯಬಾರದು. ಅಲ್ಲದೇ ಮದ್ಯ ಸಾಗಾಟವನ್ನೂ ಮಾಡಬಾರದು ಎಂದು ಜಿಲ್ಲಾಧಿಕಾರಿಗಳೂ ಆಗಿರುವ ರಾಜೇಂದ್ರ ಚೋಳನ್ ಆದೇಶ ಹೊರಡಿಸಿದ್ದಾರೆ.
ರಾಜುಗೌಡ ಪರ ತಾಯಿ, ಪತ್ನಿ ಪ್ರಚಾರ
ಸುರಪುರ: ಇಲ್ಲಿಯ ಜೆಡಿಎಸ್ ಅಭ್ಯರ್ಥಿ ರಾಜುಗೌಡರ ಗೆಲವಿಗಾಗಿ ತಾಯಿ ತಿಮ್ಮಮ್ಮ ಶಂಭನಗೌಡ ಹಾಗೂ ಪತ್ನಿ ಮೈತ್ರಾ ಸಮೀಪದ ಹಸನಾಪುರ ಮತ್ತು ರಂಗಂಪೇಟಗಳಲ್ಲಿ ಗುರುವಾರ ನೂರಾರು ಮಹಿಳೆಯರೊಂದಿಗೆ ಪಾದಯಾತ್ರೆ ಮೂಲಕ ಮತದಾರರ ಮನೆ ಮನೆಗೆ ತೆರಳಿ ಬಿರುಸಿನ ಮತಯಾಚನೆ ಮಾಡಿ ಗಮನ ಸೆಳೆದರು. ಈ ಸಂದರ್ಭದಲ್ಲಿ ಮಹಿಳೆಯರು ತೆನೆ ಹೊತ್ತ ಮಹಿಳೆಯ ಚಿಹ್ನೆಯನ್ನು ಪ್ರದರ್ಶನ ಮಾಡಿ ಮತ ಯಾಚಿಸಿದರು. ಈ ಸಂದರ್ಭದಲ್ಲಿ ರಾಜುಗೌಡರ ತಾಯಿ ತಿಮ್ಮಮ್ಮ ಶಂಭನಗೌಡ ಮಾತನಾಡಿ, ನನ್ನ ಮಗ ಶಾಸಕನಾಗುವ ಮೊದಲು ಕ್ಷೇತ್ರದಲ್ಲಿ ಭಯಾನಕ ವಾತಾವರಣವಿತ್ತು. ಯಾರಿಗೂ ನೈಜ ಸ್ವಾತಂತ್ರ್ಯವೇ ಇರಲಿಲ್ಲ, ನನ್ನ ಮಗ ಶಾಸಕನಾಗಿ ತಾಲೂಕಿನ ಎಲ್ಲ ಜನತೆಗೆ ಶಾಂತಿ, ನೆಮ್ಮದಿಯ ಬದುಕು ನೀಡಿದ್ದಾನೆ ಮತ್ತು ಸಾಕಷ್ಟು ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾನೆ. ನನ್ನ ಮಗನ ಸಾಧನೆ ನೋಡಿ ಮತ ನೀಡಿ ಎಂದರು.
ಮತದಾನಕ್ಕೆ ಕರವೇ ಮನವಿ
ಯಾದಗಿರಿ: ಮತ ದಾನವಲ್ಲ, ಅದು ನಮ್ಮ ಹಕ್ಕು. ಪ್ರತಿಯೊಬ್ಬರು ಕಡ್ಡಾಯವಾಗಿ ನಮ್ಮ ಹಕ್ಕನ್ನು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ ಹೇಳಿದರು. ಅವರು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಈ ಚುನಾವಣೆಯಲ್ಲಿ ಯೋಗ್ಯ ವ್ಯಕ್ತಿಗೆ ಮತ ಹಾಕುವ ಮೂಲಕ ನಮ್ಮ ಭಾಗದ ಪ್ರಮುಖ ಸಮಸ್ಯೆಗಳಾದ ರಸ್ತೆ, ಕುಡಿಯುವ ನೀರು, ನಿರುದ್ಯೋಗ ಸಮಸ್ಯೆ ನಿವಾರಣೆಗೆ ನಾವೇ ದಾರಿ ಮಾಡಿಕೊಳ್ಳಬೇಕು. ಯಾವುದೇ ಆಮಿಷಗಳಿಗೆ ಬಲಿಯಾಗಬಾರದು. ಜಾತ್ಯತೀತವಾಗಿ, ಧರ್ಮರಹಿತವಾಗಿ ಹಕ್ಕು ಚಲಾಯಿಸಬೇಕು. ಹಣ, ಮದ್ಯ ಇನ್ನಿತರ ಆಮಿಷಗಳಿಗೆ ಬಲಿಯಾಗದೇ ಅಭಿವೃದ್ಧಿ ಕನಸುಳ್ಳು ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂದು ಸಲಹೆ ನೀಡಿದರು.
ಸರಬ್ಜಿತ್ ಸಾವು: ಕೇಂದ್ರದ ನಿಲುವಿಗೆ ಖಂಡನೆ
ಯಾದಗಿರಿ: ಲಾಹೋರ್ ಜೈಲಿನಲ್ಲಿ ಸರಬ್ಜಿತ್ ಸಿಂಗ್ ಮೃತಪಡಲು ಪಾಕ್ ಸರ್ಕಾರದ ಷಡ್ಯಂತ್ರ ಅಡಗಿದ್ದು, ಈ ಘಟನೆ ಖಂಡನೀಯ. ಇದಕ್ಕೆ ಕೇಂದ್ರ ಸರ್ಕಾರದ ದುರ್ಬಲ ನೀತಿಯೂ ಕಾರಣ ಎಂದೂ ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕ ನೀಲಕಂಠ ಯಲ್ಹೇರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸುರಬ್ಜಿತ್ ಸಾವು ಅಸಂಖ್ಯಾತ ಭಾರತೀಯರಿಗೆ ನೋವು ತಂದಿದೆ. ಲಾಹೋರ ಜೈಲಿನಲ್ಲಿ ಹಲ್ಲೆಗೊಳಗಾದ ಸುರಬ್ಜಿತ್ ಸಾವಿಗೆ ಪಾಕ್ ಸರ್ಕಾರವೇ ನೇರ ಹೊಣೆಯಾಗಿದೆ. ಅಲ್ಲದೇ ನಮ್ಮ ಕೇಂದ್ರ ಸರ್ಕಾರದ ಮೃದು ಧೋರಣೆ ಹಾಗೂ ದುರ್ಬಲ ನೀತಿಯೂ ಕಾರಣವಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ ಪಾಕ್ ವಿಚಾರದಲ್ಲಿ ಕಠಿಣ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು, ಸುರಬ್ಜಿತ್ ಕುಟುಂಬಕ್ಕೆ ನೋವು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದರು.
ಕಾಂಗ್ರೆಸ್ಸಿನಿಂದ ಮಾತ್ರ ಪ್ರಗತಿ ಸಾಧ್ಯ: ಕೈಲಾಸ
ಗುಲ್ಬರ್ಗ: ಕಾಂಗ್ರೆಸ್ನಿಂದ ಮಾತ್ರ ರಾಜ್ಯ-ದೇಶದ ಪ್ರಗತಿ ಸಾಧ್ಯ ಎಂದು ಗುಲ್ಬರ್ಗ ದಕ್ಷಿಣ ವಿಧಾನಸಭಾ ಕ್ಷೇತ್ರ ಅಭ್ಯರ್ಥಿ ಕೈಲಾಸ ವಿರೇಂದ್ರ ಪಾಟೀಲ್ ಹೇಳಿದರು. ನಗರದ ಎನ್ವಿ ಮೈದಾನದಲ್ಲಿ ಗುರುವಾರ ನಡೆದ ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿ ಭಾಗವಹಿಸಿದ್ದ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಕೈಲಾಸ ಪಾಟೀಲ್, ಗುಲ್ಬರ್ಗ ದಕ್ಷಿಣದಲ್ಲಂತೂ ಸಮಸ್ಯೆಗಳೇ ಮನೆ ಮಾಡಿವೆ. ಇವುಗಳಿಗೆಲ್ಲದಕ್ಕೂ ಉತ್ತರ ಸಿಗಬೇಕಾದಲ್ಲಿ ಕಾಂಗ್ರೆಸ್ಸಿಗೆ ಮತದಾರ ಬೆಂಬಲಿಸಬೇಕು ಎಂದರು. ಕಲಂ 371 ಕೊಡುಗೆ ನೀಡಿದ್ದು ಕಾಂಗ್ರೆಸ್, ಈ ಭಾಗದಲ್ಲಿ ಬಡವರಿಗೆ ಸೂರೊದಗಿಸಲಾಗಿದೆ. ಆಧುನಿಕ ಸವಲತ್ತುಗಳ ಆಸ್ಪತ್ರೆಗಳು ಇಲ್ಲಿ ಬಂದಿವೆ. ಇವುಗಳೆಲ್ಲದರ ಹಿಂದೆ ಕಾಂಗ್ರೆಸ್ ಪಾತ್ರ ಇದೆ ಎಂಬುದನ್ನು ಜನತೆ ಅರಿಯಬೇಕು, ಕೇಂದ್ರದಿಂದ ಸಾಕಷ್ಟು ಅನುದಾನ ಇಲ್ಲಿಗೆ ಹರಿದು ಬಂದಿದ್ದರಿಂದ ಮತದಾರರು ಪ್ರಗತಿಗೆ ಬೆಂಬಲಿಸಲು ಹಾಗೂ ಬಿಜೆಪಿ ಕೆಟ್ಟ ಸರ್ಕಾರ ಉರುಲಿಸಲು ಕಾಂಗ್ರೆಸ್ಸಿಗೆ ಮತ ಹಾಕಲೇಬೇಕು ಎಂದು ಕೈಲಾಸ ಅಭಿಪ್ರಾಯಪಟ್ಟರು.
ದುರುಪಯೋಗ: ಹೇರೂರ ಆರೋಪ
ಅಫಜಲ್ಪುರ: ಮಾಜಿ ಶಾಸಕ ಎಂ.ವೈ. ಪಾಟೀಲ್ ಮತ್ತು ಹಾಲಿ ಶಾಸಕ ಮಾಲೀಕಯ್ಯ ಗುತ್ತೇದಾರ ಅವರಿಗೆ ತಾಲೂಕಿನ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿದ್ದರೂ ತಾಲೂಕಿನ ಅಭಿವೃದ್ಧಿ ಮಾಡದೇ ತಮ್ಮ ಅಧಿಕಾರದ ಅವಧಿಯಲ್ಲಿ ತಾಲೂಕಿಗೆ ಬಂದ ಅನುದಾನದನ್ನು ದುರುಪಯೋಗ ಪಡಿಸಿಕೊಂಡಿದ್ದಾರೆಂದು ಜೆಡಿಎಸ್ ಅಭ್ಯರ್ಥಿ ವಿಠ್ಠಲ್ ಹೇರೂರ ಆರೋಪಿಸಿದ್ದಾರೆ. ತಾಲೂಕಿನ ಮಣ್ಣೂರ ಗ್ರಾಮದಲ್ಲಿ ಏರ್ಪಡಿಸಿದ್ದ ಜೆಡಿಎಸ್ ಪಕ್ಷದ ಬಹಿರಂಗ ಪ್ರಚಾರ ಸಭೆಯನ್ನು ಉದ್ದೆಶೀಸಿ ಮಾತನಾಡಿ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಾಡಿರುವ ಅಭಿವೃದ್ಧಿ ಜನಪರ ಕೆಲಸಗಳನ್ನು, ಯೋಜನೆಗಳಿಂದ ಈ ಬಾರಿ ಚುನಾವಣೆಯಲ್ಲಿ ತಮಗೆ ಶ್ರೀರಕ್ಷೆಯಾಗಲಿವೆ ಎಂದರು. ತಾಲೂಕು ಕೇಂದ್ರದಲ್ಲಿ ಯಾವುದೇ ಮೂಲ ಸೌಲಭ್ಯಗಳಿಲ್ಲ. ಇದರಿಂದ ಜನರು ಬೇಸತ್ತಿದ್ದು, ತಾಲೂಕಿನ ಜನರು ಹೊಸಮುಖಗಳನ್ನು ನೋಡುತ್ತಿದ್ದಾರೆ ಎಂದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಜಿ.ಪೂಜಾರಿ, ವಕೀಲರಾದ ಶಂಕರರಾವ ಹುಲ್ಲೂರ, ಛತ್ರು ರಾಠೋಡ, ಶಿವುಕುಮಾರ ನಾಟಿಕಾರ, ಬಲಭೀಮ ಹೊಸಮನಿ, ಶ್ರೀಶೈಲ್ ತಳವಾರ, ಅವ್ವಣ್ಣ ಲಾಳಸಂಗಿ ಇದ್ದರು.
ಜಿಲ್ಲೆಯಲ್ಲಿ 'ಕೈ' ಅಲೆ: ಕೈಲಾಸನಾಥ
ಗುಲ್ಬರ್ಗ: ಜಿಲ್ಲೆಯಲ್ಲಿ ಕಾಂಗ್ರೆಸ್ ಅಲೆ ಇದ್ದು, ದಕ್ಷಿಣ ಕ್ಷೇತ್ರದಲ್ಲಿ ಸೇರಿದಂತೆ ಎಲ್ಲೆಡೆ ಎಲ್ಲ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ದಕ್ಷಿಣ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೈಲಾಸನಾಥ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು. ನಗರದ ಏಷ್ಯನ್ ಮಹಲ್ ಕಟ್ಟಡದಲ್ಲಿರುವ ಚುನಾವಣಾ ಪ್ರಚಾರ ಕಚೇರಿಯಲ್ಲಿ ಮಾತನಾಡಿ, ಈ ಚುನಾವಣೆಯಲ್ಲಿ ಯಾವುದೇ ಆಮಿಷಗಳಿಗೆ ಜನರು ಮರುಳಾಗಬಾರದು. ಪಕ್ಷದ ಸಾಧನೆ ನೋಡಿ ಮತ ನೀಡಬೇಕು ಎಂದು ಮನವಿ ಮಾಡಿದರು. ಶಾಸಕ ಎಂದರೆ ಜನಸೇವಕ. ಆಯ್ಕೆಯಾದ ಜನಪ್ರತಿನಿಧಿಗಳು ಸಹ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು. ಆದರೆ, ಇಂದು ವ್ಯವಸ್ಥೆ ಕೆಲವರು ಕಲುಷಿತಗೊಳಿಸಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.