ಜನಪರ ಕಾಳಜಿ ಅರಿತವರಿಗೆ ಮತ ನೀಡಿ: ಡಾ. ಅಜಯಸಿಂಗ್
ಕನ್ನಡಪ್ರಭ ವಾರ್ತೆ, ಜೇವರ್ಗಿ, ಮೇ.2
ಯಾರು ಏನೇ ಹೇಳಿದ್ದರೂ ಸ್ಪರ್ಧಾ ಕಣದಲ್ಲಿರುವ ಅಭ್ಯರ್ಥಿಗಳಲ್ಲಿ ಯಾರು ಜನಪರ ಕಾಳಜಿ ಹಾಗೂ ಜನಸೇವೆ ಹೊಂದಿದ್ದಾರೆ ಎಂಬುದನ್ನು ಅರಿತು ಮತ ಚಲಾಯಿಸುವಂತೆ ಕಾಂಗ್ರೆಸ್ ಅಭ್ಯರ್ಥಿ ಡಾ. ಅಜಯಸಿಂಗ್ ಮನವಿ ಮಾಡಿದರು.
ಜೇವರ್ಗಿ ಪಟ್ಟಣ ಹಾಗೂ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಮನೆ, ಮನೆಗೆ ತೆರಳಿ ಮತಯಾಚಿಸಿದ ಅವರು, ಕಳೆದ 10 ವರ್ಷಗಳಿಂದ ಕ್ಷೇತ್ರದ ಜನರೊಂದಿಗೆ ಸಂಪರ್ಕದಲ್ಲಿದ್ದೇನೆ. ಯುವಕನಾಗಿದ್ದು, ಕ್ಷೇತ್ರದ ಅಭಿವೃದ್ಧಿ ಮಾಡಿ ತೋರಿಸಬೇಕೆಂಬ ಉತ್ಸಾಹ ಹೊಂದಿದ್ದೇನೆ ಎಂದರು.
ಈಗಾಗಲೇ ಜನರಿಗೆ ಆರೋಗ್ಯ ಸೇವೆ ನೀಡುವುದರ ಮುಖಾಂತರ ತಮ್ಮ ಸೇವಾ ಮನೋಭಾವನೆ ಅನುಭವಕ್ಕೆ ಬಂದಿರಬಹುದು. ಆದ್ದರಿಂದ ಜೇವರ್ಗಿ ಮತದಾರರು ಯಾವುದೇ ಟೀಕೆ, ಆರೋಪಗಳ ಕಡೆ ಗಮನ ಕೊಡದೇ ತಮ್ಮನ್ನು ಬೆಂಬಲಿಸಿ ಕ್ಷೇತ್ರದ ಅಭಿವೃದ್ಧಿಗೆ ನಾಂದಿ ಹಾಡಬೇಕು ಎಂದರು. ಜೇವರ್ಗಿಯಲ್ಲಿ ಈಗಾಗಲೇ ಅಂಬ್ಯುಲೆನ್ಸ ಮೂಲಕ ಜನರ ಸೇವೆಗೆ ಪಾದಾರ್ಪಣೆ ಮಾಡಲಾಗಿದೆ. ಇನ್ನಷ್ಟು ಸೇವೆ ಮಾಡಲು ಜನರು ಆಶೀರ್ವಾದ ಮಾಡಬೇಕು ಎಂದು ಮತದಾರರಲ್ಲಿ ಕೋರಿದರು.
ಜೆಡಿಎಸ್ ಪದಾಧಿಕಾರಿಗಳ ನೇಮಕ
ಚಿಂಚೋಳಿ: ಸುಲೇಪೇಟ್ ಗ್ರಾಮದ ಜೆಡಿಎಸ್ ಪಕ್ಷದ ನೂತನ ಪದಾಧಿಕಾರಿಗಳ ನೇಮಕ ಮಾಡಲಾಗಿದೆ ಎಂದು ಸೇಡಂ ತಾಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷ ವಿಜಯಕುಮಾರ ಅಡಕಿ ತಿಳಿಸಿದ್ದಾರೆ. ಜಿಲ್ಲಾ ಕಾರ್ಯದರ್ಶಿಯಾಗಿ ಪಂಡಿತಕುಮಾರ ಹೂಗಾರ, ಸಹ ಕಾರ್ಯದರ್ಶಿಯಾಗಿ ಶ್ರೀನಿವಾಸ ವಿಶ್ವಕರ್ಮ, ಉಪಾಧ್ಯಕ್ಷರಾಗಿ ರಾಜಶೇಖರ ಭೂಶೆಟ್ಟಿ, ಕಾರ್ಯದರ್ಶಿಯಾಗಿ ರಾಜಕುಮಾರ ಮಳಖೇಡ, ಸಂಘಟನಾ ಕಾರ್ಯದರ್ಶಿಯಾಗಿ ಶರೀಫ ಕೋಹಿರ್, ಹಿಂದುಳಿದ ವರ್ಗದ ಅಧ್ಯಕ್ಷ ಪ್ರಕಾಶ ಮಂತ್ರಿ, ಯುವ ಘಟಕದ ಅಧ್ಯಕ್ಷ ಸಿದ್ದಯ್ಯ ಕಪೂರ, ಕಾರ್ಯದರ್ಶಿ ಗುಂಡಾರೆಡ್ಡಿ ಮರಕಲ್, ಎಸ್ಸಿ ಘಟಕದ ಅಧ್ಯಕ್ಷ ಬಾಬು ಬುಗಡಿ, ರೈತ ಮೋರ್ಚಾದ ಅಧ್ಯಕ್ಷ ಜಾಕೀರ ಪಟೇಲ್, ಸುಲೇಪೇಟ್ ವಲಯ ಅಧ್ಯಕ್ಷ ಸುಭಾಷ ಪಾಟೀಲ್, ರಜಾಕ ಪಟೇಲ್, ಸಹ ಕಾರ್ಯದರ್ಶಿ ಶಿರಾಜ ಪಟೇಲ್, ಸಂಘಟನಾ ಕಾರ್ಯದರ್ಶಿ ರವಿ ಗುಲಗುಂಜಿ ಇತರರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ.