ಜೇವರ್ಗಿಯಲ್ಲಿ ಕೇದಾರಲಿಂಗಯ್ಯ ರೋಡ್ ಶೋ
ಜೇವರ್ಗಿ: ಬಹಿರಂಗ ಪ್ರಚಾರ ಅಂತ್ಯಗೊಳ್ಳುವ ಮುನ್ನಾದಿನವಾದ ಗುರುವಾರ ಜೆಡಿಎಸ್ ಅಭ್ಯರ್ಥಿ ಕೇದಾರಲಿಂಗಯ್ಯ ಹಿರೇಮಠ ಅವರು ಪಟ್ಟಣದಲ್ಲಿ ರೋಡ್ ಶೋ ನಡೆಸಿದರು. ಅಪಾರ ಬೆಂಬಲಿಗರೊಂದಿಗೆ ಇಲ್ಲಿನ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ಅಖಂಡೇಶ್ವರ ವೃತ್ತದಿಂದ ಮುಖ್ಯ ಮಾರುಕಟ್ಟೆ, ಹಳೆ ಪೊಲೀಸ್ ಠಾಣೆ ಮಾರ್ಗವಾಗಿ ಮಹಾಲಕ್ಷ್ಮೀ ಮಂದಿರಕ್ಕೆ ತೆರಳಿ, ಅದೇ ಮಾರ್ಗದಲ್ಲಿ ಮರಳಿ ಬಂದು ವಿದ್ಯಾನಗರದ ಸುತ್ತಮುತ್ತಲ ಪ್ರದೇಶಗಳಲ್ಲಿ ರೋಡ್ ಶೋ ನಡೆಸಿದರು.
ಜೆಡಿಎಸ್ಗೆ ಕುರುಬ ಸಮಾಜದ ಬೆಂಬಲ: ವಿಧಾನಸಭಾ ಚುನಾವಣೆಯಲ್ಲಿ ತಾಲೂಕಿನ ಕುರುಬ ಸಮಾಜದ ಮುಖಂಡರು ಜೆಡಿಎಸ್ ಬೆಂಬಲಿಸಲು ನಿರ್ಧರಿಸಿದ್ದಾರೆ. ಗುರುವಾರ ತಾಲೂಕಿನ ಜೇರಟಗಿ ಗ್ರಾಮದಲ್ಲಿ ತಾಲೂಕಿನ ಕುರುಬ ಸಮಾಜದ ಪ್ರಮುಖರ ಸಭೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕೇದಾರಲಿಂಗಯ್ಯ ಹಿರೇಮಠ ಅವರನ್ನು ಬೆಂಬಲಿಸಲು ನಿರ್ಧರಿಸಲಾಯಿತು.
ಸಮಾಜ ಮುಖಂಡ ಸಮಾಧಾನ ಪೂಜಾರಿ ಇಟಗಾ ಅವರು, ತಾಲೂಕಿನ ರೈತರಿಗೆ ಕೇದಾರಲಿಂಗಯ್ಯ ಹಿರೇಮಠ ಅವರು ವರದಾನವಾಗಿದ್ದಾರೆ. ಸಮಾಜದ ಬಹುತೇಕ ಜನರು ಕೃಷಿಯಲ್ಲಿ ತೊಡಗಿದ್ದಾರೆ. ಸ್ವಂತ ಜಮೀನು ಇಲ್ಲದಿದ್ದರೂ ಪಾಲು ಪದ್ಧತಿಯಂತೆ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರಿಂದ ಬೆಂಬಲಿಸಬೇಕೆಂದರು.
ಸುಮಾರು 61 ಗ್ರಾಮಗಳಿಂದ ಆಗಮಿಸಿದ್ದ ಕುರುಬ ಸಮಾಜದ ಪ್ರಮುಖರು ಒಮ್ಮತ ವ್ಯಕ್ತಪಡಿಸಿ ಜೆಡಿಎಸ್ ಬೆಂಬಲಿಸುವುದಾಗಿ ಘೋಷಿಸಿದರು.
ಸಭೆಯಲ್ಲಿ ಭೀಮಾಶಂಕರ ವಕೀಲ, ನಿಂಗಣ್ಣ, ಬೀರಪ್ಪ ಪೂಜಾರಿ, ದತ್ತರಾಜ ಕಿನ್ನೂರ, ಸದಾನಂದ ಪಾಟೀಲ, ಮಲ್ಲಪ್ಪ ಪೂಜಾರಿ ಸೇರಿದಂತೆ ಯಾತನೂರು, ಇಟಗಾ, ಹುಲ್ಲೂರ, ನೇದಲಗಿ, ಬಳೂಂಡಗಿ, ನಾರಾಯಣಪುರ, ಬೋಸಗಾ, ಕುಕನೂರ, ಜೇರಟಗಿ, ರಂಜುಣಗಿ, ಕೆಲ್ಲೂರ, ಕಲ್ಲೂರ, ಹಿಪ್ಪರಗಾ ಎಸ್.ಎನ್, ಸೊನ್ನ, ನೆಲೋಗಿ, ಕಲ್ಲಹಂಗರಗಾ, ಕೂಟನೂರು, ಜನಿವಾರ, ಬಣಮಗಿ ಸೇರಿದಂತೆ 60ಕ್ಕೂ ಹೆಚ್ಚು ಗ್ರಾಮದ ಕುರುಬ ಸಮಾಜದ ಮುಖಂಡರು ಇದ್ದರು.