ನೀತಿ ಸಂಹಿತೆ ಉಲ್ಲಂಘನೆ: 71 ಪ್ರಕರಣ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಮೇ.2
ಗುಲ್ಬರ್ಗ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೆ ಮೇ 5ರಂದು ನಡೆಯುವ ಚುನಾವಣೆ ಪ್ರಯುಕ್ತ ಜಿಲ್ಲೆಯಲ್ಲಿ ಏ.5 ರಿಂದ ಮೇ 1ರವರೆಗೆ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಒಟ್ಟು 71 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಮೇ 1ರಂದು ಕೆಳಕಂಡ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ 7 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ಜಿ.ಜಗದೀಶ ತಿಳಿಸಿದ್ದಾರೆ.
ಅಫಜಲ್ಪುರ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಅನುಮತಿ ಪಡೆಯದೇ ಚುನಾವಣಾ ಪ್ರಚಾರಕ್ಕಾಗಿ ಬಳಸುತ್ತಿದ್ದ 7 ಮೊಟಾರ್ ಸೈಕಲ್ಗಳನ್ನು ಪತ್ತೆಹಚ್ಚಿ ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಜೆಡಿಎಸ್ ಅಭ್ಯರ್ಥಿ ವಿಠ್ಠಲ್ ಹೇರೂರ ಇವರ ವಿರುದ್ಧ ಅಫಜಲ್ಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಪ್ರಕರಣ ದಾಖಲಿಸಲಾಗಿದೆ.
ಎಸ್ಪಿ ಪಕ್ಷದ ಚುನಾವಣಾ ಪ್ರಚಾರಕ್ಕಾಗಿ ಬಳಸಲಾಗುತ್ತಿದ್ದ 2 ಮೋಟಾರ್ ಸೈಕಲ್ ಮತ್ತು 1 ಆಟೋ ರಿಕ್ಷಾಗಳನ್ನು ಪತ್ತೆ ಹೆಚ್ಚಿ 3 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಎಸ್.ಪಿ. ಅಭ್ಯರ್ಥಿ ಗೋವಿಂದ ವಿಶ್ವನಾಥ ಭಟ್ಟ ಇವರ ವಿರುದ್ಧ ಅಫಜಲ್ಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಪ್ರಕರಣ ದಾಖಲಿಸಲಾಗಿದೆ.
ಗುಲ್ಬರ್ಗ ಗ್ರಾಮೀಣ ಮತಕ್ಷೇತ್ರ ವ್ಯಾಪ್ತಿಯಲ್ಲಿ ನಂಬಲಗಾ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ವಾಹನ ಸಂಖ್ಯೆ ಕೆಎ-32 ಬಿ-946 ರಲ್ಲಿ ಹಣ ವಿತರಣೆ ಮಾಡುತ್ತಿರುವ ಬಗ್ಗೆ ಸಿಪಿಐ (ಎಂ) ಪಕ್ಷದ ವತಿಯಿಂದ ದೂರು ಬಂದಿದ್ದು, ಮಾದರಿ ನೀತಿ ಸಂಹಿತೆ ಅಧಿಕಾರಿಗಳು ಈ ಬಗ್ಗೆ ಅಂಬಲಗಾ ಮತ್ತು ಸುತ್ತಲಿನ ಗ್ರಾಮಗಳಲ್ಲಿ ತಪಾಸಣೆ ನಡೆಸಿದ್ದು ಸದರಿ ನಂಬರಿನ ವಾಹನ ಪತ್ತೆಯಾಗಿರುವುದಿಲ್ಲ ಹಾಗೂ ಯಾವುದೇ ಹಣ ವಿತರಣೆ ಪ್ರಕರಣ ನಡೆದಿರುವ ಬಗ್ಗೆ ವರದಿಯಾಗಿರುವುದಿಲ್ಲ.
ಗುಲ್ಬರ್ಗ ದಕ್ಷಿಣ ಮತಕ್ಷೇತ್ರ ವ್ಯಾಪ್ತಿಯಲ್ಲಿನ ಗಾಜಿಪುರ ಪ್ರದೇಶದ ನಾಟಿಕಾರ ಗಲ್ಲಿಯ ಮರಗಮ್ಮ ದೇವಸ್ಥಾನ ಮತ್ತು ಬಾಬು ಜಗಜೀವನರಾಮ ಸಮುದಾಯ ಭವನದ ಹತ್ತಿರ ಕೆಜೆಪಿ ಪಕ್ಷದ ಅಭ್ಯರ್ಥಿ ಎಸ್.ಕೆ. ಕಾಂತಾ ಇವರ ಪರವಾಗಿ ಚುನಾವಣಾ ಆಯೋಗದ ಅನುಮತಿ ಪಡೆಯದೇ ಬಾಬುರಾವ ಮುಡಬಿ ಮತ್ತು ಇತರರು ಮತಯಾಚನೆ ಮಾಡುತ್ತಿದ್ದ ಬಗ್ಗೆ ಆಡಿಷನಲ್ ಸಿವಿಲ್ ಜಡ್ಜ್ (ಜೆ.ಡಿ.) ಜೆಎಂಎಫ್ಸಿ ಗುಲ್ಬರ್ಗದಲ್ಲಿ ಎಫ್ಐಆರ್ ಸಲ್ಲಿಸಲಾಗಿದೆ.
ಗುಲ್ಬರ್ಗ ದಕ್ಷಿಣ ಮತಕ್ಷೇತ್ರ ವ್ಯಾಪ್ತಿಯಲ್ಲಿನ ಮಕ್ತಂಪುರ ಪ್ರದೇಶದ ಮಾರವಾಡಿ ಗಲ್ಲಿಯ ಮರಗಮ್ಮ ದೇವಸ್ಥಾನ ಮತ್ತು ಬಾಲಾಜಿ ದೇವಸ್ಥಾನದ ಹತ್ತಿರ ಜೆಡಿಎಸ್ ಪಕ್ಷದ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಇವರು ಚುನಾವಣಾ ಆಯೋಗದ ಅನುಮತಿ ಪಡೆಯದೇ ಮತಯಾಚನೆ ಮಾಡುತ್ತಿದ್ದ ಬಗ್ಗೆ ಹಾಗೂ ಮರಗಮ್ಮ ದೇವಸ್ಥಾನ ಮತ್ತು ಬಾಲಾಜಿ ದೇವಸ್ಥಾನದ ಅರ್ಚಕರಿಗೆ ತಲಾ 500 ಹಣ ನೀಡಿದ ಬಗ್ಗೆ ಅಡಿಷನಲ್ ಸಿವಿಲ್ ಜಡ್ಜ್ (ಜೆ.ಡಿ.) ಜೆಎಂಎಫ್ಸಿ ಗುಲ್ಬರ್ಗದಲ್ಲಿ ಎಫ್ಐಆರ್ ಸಲ್ಲಿಸಲಾಗಿದೆ.
ಗುಲ್ಬರ್ಗ ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯಲ್ಲಿನ ಗುಲ್ಬರ್ಗದ ಸೇಂಟ್ ಜೋಸೆಫ್ ಶಾಲೆಯ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿನ ವಿದ್ಯುತ್ ಕಂಬಕ್ಕೆ ಚುನಾವಣಾ ಆಯೋಗದ ಅನುಮತಿ ಇಲ್ಲದೆ ಜೆಡಿಎಸ್ ಪಕ್ಷದ ಧ್ವಜಗಳನ್ನು ಕಟ್ಟಿದ ಬಗ್ಗೆ ಪಕ್ಷದ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಇವರ ವಿರುದ್ಧ ಬ್ರಹ್ಮಪುರ ಪೊಲೀಸ್ ಠಾಣೆ ಎಫ್ಐಆರ್ ಪ್ರಕರಣ ದಾಖಲಿಸಲಾಗಿದೆ.
ಗುಲ್ಬರ್ಗ ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯಲ್ಲಿನ ಎನ್.ವಿ. ಶಾಲೆಯ ಆವರಣದಲ್ಲಿ ನಡೆದ ಜೆಡಿಎಸ್ ಪಕ್ಷದ ಸಭೆಗೆ ಚುನಾವಣೆ ಆಯೋಗದ ಅನುಮತಿ ಇಲ್ಲದೆ ಪಕ್ಷದ ಧ್ವಜವನ್ನು ಕಟ್ಟಿದ ವಾಹನಗಳನ್ನು ಬಳಸಿದ ಬಗ್ಗೆ ಜೆಡಿಎಸ್ ಪಕ್ಷದ ಅಭ್ಯರ್ಥಿ ಶಶೀಲ್ ನಮೋಶಿ ಅವರ ವಿರುದ್ಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಪ್ರಕರಣ ದಾಖಲಿಸಲಾಗಿದೆ.