ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

'ಕೆಜೆಪಿ ಅಧಿಕಾರಕ್ಕೆ ಬಂದ್ರೆ ಮೂಲ ಸೌಕರ್ಯಕ್ಕೆ ಪ್ರಾಶಸ್ತ್ಯ'

Srinivasa Murthy VN
Updated On : 4 May 2013, 10:51 am

ಯಾದಗಿರಿ: ಕೆಜೆಪಿ ಅಧಿಕಾರಕ್ಕೆ ಬಂದರೆ ನೆನೆಗುದಿಗೆ ಬಿದ್ದಿರುವ ಭೀಮಾ ನದಿ ನೀರನ್ನು ಗುರಮಠಕಲ್‌ವರೆಗೆ ತರುವ ಯೋಜನೆಗೆ ಮೊದಲ ಆದ್ಯತೆ ನೀಡುವುದಾಗಿ ಗುರಮಠಕಲ್ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ವೆಂಕಟರಡ್ಡಿ ಮುದ್ನಾಳ ಹೇಳಿದರು. ಅವರು ಮತಕ್ಷೇತ್ರದ ಅಜಲಾಪುರ ಗ್ರಾಮದಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದರು. ಮತಕ್ಷೇತ್ರ ಗಡಿಭಾಗವಾದ್ದರಿಂದ ಇಲ್ಲಿನ ಜನತೆ ಉದ್ಯೋಗಕ್ಕಾಗಿ ನಗರಗಳಿಗೆ ತೆರಳುತ್ತಿದ್ದಾರೆ. ಆದ್ದರಿಂದ ಈ ಬಾರಿ ಮತ್ತೆ ಆ ತಪ್ಪು ಮಾಡದೇ ಯೋಗ್ಯ ಅಭ್ಯರ್ಥಿಗೆ ಮತ ಹಾಕಿ ಎಂದು ಅವರು ಮನವಿ ಮಾಡಿದರು. ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ಗುರಮಠಕಲ್ ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಗುರಮಠಕಲ್ ಸರ್ವಾಂಗೀಣ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುವುದಾಗಿ ವಾಗ್ದಾನ ಮಾಡಿದ್ದಾರೆ. ನುಡಿದಂತೆ ನಡೆಯುವ ಯಡಿಯೂರಪ್ಪನವರ ಕೈ ಬಲಪಡಿಸಲು ಕೆಜೆಪಿಗೆ ಮತ ನೀಡುವಂತೆ ಮುದ್ನಾಳ ಮನವಿ ಮಾಡಿದರು. ಮುಖಂಡರಾದ ವೆಂಕಟರಾಮರಡ್ಡಿ ವಡವಟ್, ಶರಣಗೌಡ ಬಾಡಿಯಾಳ ಇತರರು ಇದ್ದರು.

ಜಿಲ್ಲೆಯಲ್ಲಿ ಬಿಜೆಪಿ ಪರ ಅಲೆ ವ್ಯಾಪಕ: ಅಮರನಾಥ
ಗುಲ್ಬರ್ಗ: ಜಿಲ್ಲೆಯಲ್ಲಿ ಬಿಜೆಪಿ ಪರ ಅಲೆ ವ್ಯಾಪಕವಾಗಿದ್ದು, ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಲ್ಲಿ ಕನಿಷ್ಠ 6 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲವು ಸಾಧಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮರನಾಥ ಪಾಟೀಲ್ ಹೇಳಿದರು. ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪ್ರತಿಸ್ಪರ್ಧಿಯಾಗಿದ್ದು, ಬಿಜೆಪಿ ಸರ್ಕಾರದ ಸಾಧನೆಯೇ ಪಕ್ಷದ ಗೆಲವಿಗೆ ಕಾರಣವಾಗಲಿದ್ದು, ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಗುಲ್ಬರ್ಗ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ರಸ್ತೆ, ಚರಂಡಿ, ಶೌಚಾಲಯ, ಬೀದಿ ದೀಪಗಳ ಸಮಸ್ಯೆ ಪ್ರಮುಖವಾಗಿದ್ದು, ತಾವು ಆಯ್ಕೆಯಾದರೆ ಅವುಗಳ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ಕ್ಷೇತ್ರದ ಅಭ್ಯರ್ಥಿ ರಾಜಗೋಪಾಲ ರೆಡ್ಡಿ ಈ ಸಂದರ್ಭದಲ್ಲಿ ತಿಳಿಸಿದರು. ಗುಲ್ಬರ್ಗ ದಕ್ಷಿಣ ಕ್ಷೇತ್ರದಲ್ಲಿ ಮೂರು ವರ್ಷಗಳ ಕಾಲ ಶಾಸಕರಾದ ತಮ್ಮ ತಾಯಿ ಅರುಣಾ ಪಾಟೀಲ್ ರೇವೂರ ಅವರು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಇನ್ನು ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಲು ತಮಗೆ ಆಯ್ಕೆ ಮಾಡುವಂತೆ ಮತದಾರರಿಗೆ ಮನವಿ ಮಾಡಲಾಗುತ್ತಿದೆ ಎಂದು ಕ್ಷೇತ್ರದ ಅಭ್ಯರ್ಥಿ ದತ್ತಾತ್ರೇಯ ಪಾಟೀಲ್ ರೇವೂರ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಬಿ.ಜಿ. ಪಾಟೀಲ್, ವಿದ್ಯಾಸಾಗರ ಕುಲಕರ್ಣಿ, ವಿದ್ಯಾಸಾಗರ ಶಾಬಾದಿ, ಶರಣಪ್ಪ ತಳವಾರ, ನಾಮದೇವ ರಾಠೋಡ, ಶಾಮರಾವ ಪ್ಯಾಟಿ ಇದ್ದರು.

ರಾಜ್ಯದಲ್ಲಿ ಕೈ ಅಲೆ: ಪಾಟೀಲ್ ವಿಶ್ವಾಸ
ಆಳಂದ: ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರ ರಾಜ್ಯದಲ್ಲಿ ಅಲೆಯಿದೆ ಎಂದು ಪಕ್ಷದ ವೀಕ್ಷಕರೂ ಆದ ಮಹಾರಾಷ್ಟ್ರ ಹೌಸಾ ಮತಕ್ಷೇತ್ರದ ಶಾಸಕ ಬಸವರಾಜ ಪಾಟೀಲ್ ಮುರುಮ ಅವರು ಹೇಳಿದರು. ಪಟ್ಟಣದಲ್ಲಿ ಬುಧವಾರ ಕಾಂಗ್ರೆಸ್ ಅಭ್ಯರ್ಥಿ ಸಿದ್ಧಣ್ಣ ಮಾಸ್ಟರ್ ಶೇಗಜಿ ಪರ ಕೈಗೊಂಡ ಪ್ರಚಾರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಬೀದರ್, ಬಸವಕಲ್ಯಾಣ, ಬಿಜಾಪುರ, ಮೈಸೂರ ಮಂಡ್ಯದಲ್ಲೂ ಕಾಂಗ್ರೆಸ್ ಅಲೆಯಿದೆ, ಪಕ್ಷಕ್ಕಾಗಿ ದುಡಿಯುವ ನಿಷ್ಠಾವಂತರಿಗೆ ಖಂಡಿತವಾಗಿ ಒಮ್ಮೆ ಅವಕಾಶಗಳು ದೊರೆಯುತ್ತವೆ. ದೃತಿಗೆಡದೆ ಅಭ್ಯರ್ಥಿ ಸಿದ್ಧಣ್ಣ ಮಾಸ್ಟರ್ ಅವರ ಗೆಲುವಿಗೆ ಶ್ರಮಿಸಬೇಕೆಂದು ಕರೆ ನೀಡಿದರು. ಅಭ್ಯರ್ಥಿ ಸಿದ್ಧಣ್ಣ ಮಾಸ್ಟರ್ ಶೇಗಜಿ ಮಾತನಾಡಿ, ಇದುವರೆಗೂ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಪ್ರಚಾರ, ಪ್ರಸಾರಕ್ಕೆ ಸಹಕರಿಸಿದ್ದು, ಹೆಚ್ಚು ಕಾಳಜಿ ವಹಿಸಿ ಕೆಲಸ ಮಾಡಿದರೆ ಖಂಡಿತವಾಗಿ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹಿರಿಯ ಮುಖಂಡ ವೀರಣ್ಣ ಮಂಗಾಣೆ, ಕನಿರಾಮ ರಾಠೋಡ, ಪಕ್ಷದ ಅಧ್ಯಕ್ಷ ಶಂಕರರಾವ ದೇಶಮುಖ,  ಜಿಪಂ ಮಾಜಿ ಸದಸ್ಯ ಶಿವರಾಜ ಭಾಸಗಿ, ಮಲ್ಲಿನಾಥ ಪಾಟೀಲ್ ಮದಗುಣಕಿ, ಭಾಲಚಂದ್ರ ಸೂರ್ಯವಂಶಿ, ಶರಣು ಭಸೂನೂರ ಮಹಿಳಾ ಘಟಕದ ಅಧ್ಯಕ್ಷೆ ಶಕುಂತಲಾ ಪಾಟೀಲ್, ಶೇಖಿನಾ ಬೇಗಂ, ಬಸಿರೋದ್ದೀನ್ ಗುತ್ತೇದಾರ, ಪುರಸಭೆ ಸದಸ್ಯ ಆಯೂಬಅಲಿ ರೋತೆ, ಬಸವಂತರಾಯ ಮಾಲಿಪಾಟೀಲ್, ಉದಯಕುಮಾರ ಪಾಟೀಲ್, ಮಹಾದೇವ ಪಾಟೀಲ್, ಮಲ್ಲಿನಾಥ ಅವುಟೆ ಮೊದಲಾದವರು ಉಪಸ್ಥಿತರಿದ್ದರು. ಬಸವರಾಜ ಬಿರಾದಾರ ನಿರೂಪಿಸಿದರು.

ಜನ ಸೇವೆಗಾಗಿ ಜೀವನ ಮೀಸಲು: ನಾಯಕ
ಸುರಪುರ: ಬಹಿರಂಗ ಪ್ರಚಾರಕ್ಕೆ ಅಂತಿಮ ದಿನವಾದ ಶುಕ್ರವಾರ ಪಟ್ಟಣ ಸೇರಿದಂತೆ ಹುಣಸಗಿ, ಕಕ್ಕೇರಾ, ನಾರಾಯಣಪುರ ಹೋಬಳಿಗಳಲ್ಲಿ ಬಿಜೆಪಿ ಅಭ್ಯರ್ಥಿ ರಾಜಾ ಮದನಗೋಪಾಲ ನಾಯಕ ಪಾದಯಾತ್ರೆ ಮೂಲಕ ಬಿರುಸಿನ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ರಾಜಾ ಮದನಗೋಪಾಲ ನಾಯಕ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ನನ್ನಲ್ಲಿ ಅಭಿಮಾನವಿರುವುದರಿಂದ ಅನಿವಾರ್ಯವಾಗಿ ನಾನು ಚುನಾವಣೆಗೆ ಇಳಿಯಬೇಕಾಗಿದೆ. ಕ್ಷೇತ್ರದ ಜನತೆಯ ಸೇವೆಗಾಗಿಯೇ ಜೀವನ ಮೀಸಲಾಗಿರಿಸಿದ್ದೇನೆ. ಈಗ ಕಾಲ ಕೂಡಿ ಬಂದಿದ್ದು, ನನ್ನನ್ನು ಆಶೀರ್ವದಿಸಿ ನಿಮ್ಮ ಸೇವೆ ಮಾಡುವ ಭಾಗ್ಯ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು. ನಾನು ನನ್ನ ಅಧಿಕಾರವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ನನ್ನನ್ನು ಈ ಬಾರಿ ಗೆಲ್ಲಿಸಿದರೆ ಸುರಪುರ ಇತಿಹಾಸಕ್ಕೆ ಕಾಯಕಲ್ಪ ನೀಡುತ್ತೇನೆ. ಇಲ್ಲಿಯ ಎಷ್ಟೋ ಐತಿಹಾಸಿಕ ಬಾವಿಗಳು, ಮುಸಾಫಿರ್ ಖಾನಾ, ಛತ್ರಗಳನ್ನು ಮತ್ತು ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ರಾಜ್ಯಕ್ಕೆ ಪರಿಚಯಿಸಿ ಸುರಪುರ ಹಿರಿಮೆಯ ಗೌರವ ರಕ್ಷಣೆಗೆ ನಾನು ಆದ್ಯತೆ ನೀಡುತ್ತೇನೆ ಎಂದು ಭರವಸೆ ನೀಡಿದರು. ಪಕ್ಷದ ತಾಲೂಕು ಅಧ್ಯಕ್ಷ ಮಲ್ಲೇಶಿ ಪಾಟೀಲ. ಮುಖಂಡರಾದ ಲಕ್ಷ್ಮಣ ನಾಯಕ, ರಾಜಾ ವಿಷ್ಣುವರ್ಧನ ನಾಯಕ, ರಾಜಾ ಮುಕುಂದ ನಾಯಕ, ಶಿವರಾಜ ನಾಯಕ, ಕೃಷ್ಣಾ ಏವೂರು, ರಾಘವೇಂದ್ರ ಬಾಡಿಯಾಳ, ಲಕ್ಷ್ಮಣ ಗುತ್ತೇದಾರ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement